ಆರೋಪಿಯನ್ನು ಡೀಫಾಲ್ಟ್ ಜಾಮೀನು ತಪ್ಪಿಸಲು ಹಾಗೂ ಆತ ಅನಿರ್ದಿಷ್ಟ ಅವಧಿಯವರೆಗೆ ಜೈಲಿನಲ್ಲಿರಿಸಲು ಪೂರಕ ಆರೋಪಪಟ್ಟಿ ಸಲ್ಲಿಸುವ ಜಾರಿ ನಿರ್ದೇಶನಾಲಯದ (ಇಡಿ) ನಡೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ತನಿಖೆಯನ್ನು ಅನಿರ್ದಿಷ್ಟವಾಗಿ ವಿಸ್ತರಿಸುವ ಇಡಿ ತಂತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು, ಈ ತಂತ್ರದಿಂದ ಕೇಂದ್ರ ತನಿಖಾ ಸಂಸ್ಥೆಯು ವಿಚಾರಣೆ ಇಲ್ಲದೆಯೇ ಆರೋಪಿಗಳನ್ನು ಜೈಲಿನಲ್ಲಿಯೇ ಉಳಿಸುವಂತೆ ಮಾಡಲು ಯಶಸ್ವಿಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮ್ ಪ್ರಕಾಶ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಇ.ಡಿಗೆ ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಪ್ರಕಾರ, ಅಪರಾಧಕ್ಕಾಗಿ ಬಂಧಿತರಾಗಿರುವ ವ್ಯಕ್ತಿಯು ಸಾಮಾನ್ಯವಾಗಿ 60 ಅಥವಾ 90 ದಿನಗಳಲ್ಲಿ ನಿರ್ದಿಷ್ಟ ಸಮಯದೊಳಗೆ ತನಿಖೆಯನ್ನು ಪೂರ್ಣಗೊಳಿಸಲು ಅಥವಾ ಚಾರ್ಜ್ ಸೀಟ್ ಸಲ್ಲಿಸಲು ವಿಫಲವಾದರೆ ಡೀಫಾಲ್ಟ್ ಜಾಮೀನಿಗೆ ಅರ್ಹರಾಗಿರುತ್ತಾರೆ. ಆದರೆ, ತನಿಖೆಯು ಅಪೂರ್ಣವಾಗಿದ್ದರೂ ಸಹ, ಡೀಫಾಲ್ಟ್ ಜಾಮೀನನ್ನು ತಪ್ಪಿಸಲು ED ಪದೆ ಪದೆ ಪೂರಕ ಆರೋಪಪಟ್ಟಿಗಳನ್ನು ಸಲ್ಲಿಸುತ್ತಿರುವುದನ್ನು ಸುಪ್ರೀಂಕೋರ್ಟ್ ಗಮನಿಸಿದೆ.
ನೀವು ಆರೋಪಿಯನ್ನು ಬಂಧಿಸಿ, ತನಿಖೆ ಪೂರ್ಣಗೊಳ್ಳುವವರೆಗೂ ವಿಚಾರಣೆ ನಡೆಯುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನೀವು ಆರೋಪಿಯನ್ನು ಜೈಲಿನಲ್ಲಿಯೇ ಇರಿಸಲು ನಿರಂತರವಾಗಿ ಪೂರಕ ಆರೋಪಪಟ್ಟಿಗಳನ್ನು ಸಲ್ಲಿಸುತ್ತಲೇ ಇರುವುದು ಸರಿಯಲ್ಲ” ಎಂದು ಇ.ಡಿ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ವಿ ರಾಜು ಅವರಿಗೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠ ಹೇಳಿದೆ.
ಜಾಮೀನು ನೀಡಿದರೆ ಅರೋಪಿಯು ಸಾಕ್ಷ್ಯ ನಾಶ ಮಾಡಬಹುದು ಎಂದು ಇಡಿ ಪರ ವಕೀಲರು ಕಳವಳ ವ್ಯಕ್ತಪಡಿಸಿದರು. ಅವರು ಹಾಗೆ ಮಾಡಿದರೆ ನೀವು ನಮ್ಮ ಬಳಿ ಬನ್ನಿ. ಆದರೆ ವ್ಯಕ್ತಿಯು 18 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಈ ವ್ಯಕ್ತಿ 18 ತಿಂಗಳು ಜೈಲಿನಲ್ಲಿ ಏಕೆ ಇರಬೇಕು? ಎಂದು ನ್ಯಾಯಪೀಠ ಪ್ರಶ್ನಿಸಿತು.
ಮಧ್ಯಂತರ ಜಾಮೀನು ನೀಡಬೇಕೇ ಎಂಬುದನ್ನು ನಿರ್ಧರಿಸಲು ನ್ಯಾಯಾಲಯವು ಏಪ್ರಿಲ್ 29 ಕ್ಕೆ ಹೆಚ್ಚಿನ ವಿಚಾರಣೆಯನ್ನು ನಿಗದಿಪಡಿಸಿದೆ ಮತ್ತು ಎದ್ದಿರುವ ಕಾನೂನು ಸಮಸ್ಯೆಗಳನ್ನು ಪರಿಹರಿಸಲು ED ಗೆ ಕೋರ್ಟ್ ಸೂಚನೆ ನೀಡಿದೆ.