ಚರ್ಚೆಗೆ ಬನ್ನಿ, ನಿರ್ಮಲಾ ಸೀತಾರಾಮನ್ ಗೆ ಕೃಷ್ಣಭೈರೇಗೌಡ ಪಂಥಾಹ್ವಾನ

Most read

ಬೆಂಗಳೂರು: ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯಗಳ ಚರ್ಚೆ ಜೋರಾಗಿರುವಂತೆಯೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಹಿರಂಗ ಚರ್ಚೆಗೆ ಆಹ್ವಾನಿಸಲಾಗಿದ್ದು, ಏಪ್ರಿಲ್ 6ರಂದು ಸಮಯ ನಿಗದಿ ಮಾಡಲಾಗಿದೆ.

ಸಚಿವ ಕೃಷ್ಣಭೈರೇಗೌಡ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ಹಣಕಾಸಿನ ಹಂಚಿಕೆ ಮತ್ತು ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳು ಮತ್ತು ಸಮಸ್ಯೆಗಳನ್ನು ಚರ್ಚಿಸಲು ನಾಗರಿಕ ಸಮಾಜದ ಆಹ್ವಾನವನ್ನು ನಾನು ಸ್ವೀಕರಿಸಿದ್ದೇನೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗು ನಾನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೆವು. ನಿರ್ಮಲಾ ಅವರು ಭಾಗವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ನಾಳೆ ಬೆಂಗಳೂರಿನ ಗಾಂಧಿಭವನದಲ್ಲಿ ಸಂಜೆ 5 ಗಂಟೆಗೆ ಸಭೆ ಏರ್ಪಾಡಾಗಿದ್ದು, ಮಾಧ್ಯಮಗಳ ಮುಂದೆಯೇ ಬಹಿರಂಗ ಚರ್ಚೆ ನಡೆಯಲಿದೆ. ಆದರೆ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ನಿರ್ಮಲಾ ಸೀತಾರಾಮನ್ ಭಾಗವಹಿಸುವಿಕೆಯನ್ನು ಖಚಿತಪಡಿಸಿಲ್ಲ.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ, ಅದರಲ್ಲೂ ದಕ್ಷಿಣದ ಭಾರತಗಳಿಗೆ ನಡೆದುಕೊಂಡು ಬಂದ ಮಲತಾಯಿ ಧೋರಣೆಗಳ ಬಗ್ಗೆ ಸಂಸದ ಡಿ.ಕೆ.ಸುರೇಶ್ ಧ್ವನಿ ಎತ್ತಿದ ನಂತರ ಕರ್ನಾಟಕದ ಕಡೆಗಣನೆ ವಿಷಯ ಮುಂಚೂಣಿಗೆ ಬಂದಿದ್ದು, ಈ ಚುನಾವಣೆಯಲ್ಲೂ ಅದರ ಸದ್ದು ಪ್ರತಿಧ್ವನಿಸುತ್ತಿದೆ.

ಇತ್ತೀಚಿಗೆ ರಾಜ್ಯಕ್ಕೆ ಆಗಮಿಸಿ, ಚನ್ನಪಟ್ಟಣಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಸಂಬಂಧಿಸಿದ ಪ್ರಸ್ತಾಪವನ್ನು ತಡವಾಗಿ ಕಳಿಸಿದ್ದರಿಂದ ಹಣ ಕೊಡಲು ಸಾಧ್ಯವಾಗಿಲ್ಲ ಎಂದು ಸುಳ್ಳು ಹೇಳಿದ್ದರು. ರಾಜ್ಯ ಸರ್ಕಾರ ಹಲವು ಬಾರಿ ಬರ ಪರಿಹಾರಕ್ಕೆ ಮನವಿ ಮಾಡಿ, ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಪ್ರವಾಸ ಮಾಡಿ ವರದಿ ಮಾಡಿದ್ದರೂ ಪ್ರಸ್ತಾಪವನ್ನೇ ಸಲ್ಲಿಸಿಲ್ಲ ಎಂದು ಉನ್ನತ ಸ್ಥಾನದಲ್ಲಿರುವ ಅಮಿತ್ ಶಾ ಸುಳ್ಳು ಹೇಳಿದ್ದು ಚರ್ಚೆಗೆ ಕಾರಣವಾಗಿತ್ತು.

ಇತ್ತೀಚಿಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಕೂಡ, ಕರ್ನಾಟಕಕ್ಕೆ ನೀಡಲಾಗಿರುವ ಅನುದಾನಗಳ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಿದ್ದರು.

More articles

Latest article