ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಪ್ರತಿನಿಧಿಸುವ ವಿದ್ವಾಂಸರು ಸಮಕಾಲೀನ ಸಾಮಾಜಿಕ ಆಗುಹೋಗುಗಳಿಗೆ ಸ್ಪಂದಿಸುವುದನ್ನೇ ಅಪರಾಧ ಎಂದು ಪರಿಭಾವಿಸುವ ವೈದಿಕಶಾಹಿ ಮನೋಭಾವವನ್ನು ಟಿ.ಎಂ. ಕೃಷ್ಣ ಧಿಕ್ಕರಿಸಿರುವುದರಿಂದಲೇ, ಅವರು ಶಾಸ್ತ್ರೀಯ ಸಂಗೀತ ಪರಂಪರೆಗೆ ಧಕ್ಕೆ ಉಂಟುಮಾಡಿದ್ದಾರೆ ಎಂಬ ಆರೋಪಗಳನ್ನು ಹೊರಿಸಲಾಗುತ್ತಿದೆ – ನಾ ದಿವಾಕರ
ಸಾಂಸ್ಕೃತಿಕ ಪ್ರಪಂಚವನ್ನು ಪ್ರತಿನಿಧಿಸುವ ಯಾವುದೇ ಕಲಾ ಪ್ರಕಾರವು ಕಾಲಕಾಲಕ್ಕೆ ರೂಪಾಂತರ ಹೊಂದದೆ ಹೋದರೆ, ಒಂದು ನಿರ್ದಿಷ್ಟ ಹಂತದಲ್ಲಿ ಜಡಗಟ್ಟಿ ಹೋಗುತ್ತದೆ. ಈ ಪ್ರಮೇಯ ಚಿತ್ರಕಲೆ, ರಂಗಭೂಮಿ, ದೃಶ್ಯಕಲೆ, ನಾಟ್ಯ ಮತ್ತು ಸಂಗೀತ ಕ್ಷೇತ್ರಗಳಿಗೂ ಸಮನಾಗಿ ಅನ್ವಯಿಸುತ್ತದೆ. ಕಾಲಾನುಕಾಲದಿಂದ ಎಲ್ಲ ಕಲಾ ಪ್ರಕಾರಗಳೂ ಹೊಸ ಪ್ರಯೋಗಗಳ ಮೂಲಕ ಜನಸಾಮಾನ್ಯರನ್ನು ತಲುಪುವ ಪ್ರಯತ್ನಗಳನ್ನು ಕಾಣುತ್ತಲೇ ಬಂದಿವೆ. ಈ ಪ್ರಯೋಗಗಳ ನಡುವೆ ಕೆಲವೇ ಕಲಾವಿದರಿಂದ ಹೊರಬರುವ ಸೃಜನಶೀಲತೆ ಇಡೀ ಕಲಾಭಿವ್ಯಕ್ತಿಯನ್ನೇ ಸಮಕಾಲೀನಗೊಳಿಸುವುದಲ್ಲದೆ, ಆವರೆಗೂ ತಲುಪಲಾಗದಿದ್ದ ಜನರನ್ನೂ ತಲುಪುವಂತೆ ಮಾಡುತ್ತದೆ. ಈ ಸಮಕಾಲೀನಗೊಳಿಸುವ (Contemporarisation) ಪ್ರಕ್ರಿಯೆಯಲ್ಲಿ ಸಹಜವಾಗಿಯೇ ಸಾಂಪ್ರದಾಯಿಕ ಶಕ್ತಿಗಳ ತೀವ್ರ ಪ್ರತಿರೋಧ ಎದುರಿಸ ಬೇಕಾಗುತ್ತದೆ. ಈ ತಡೆಗೋಡೆಗಳನ್ನು ನಿವಾರಿಸಿಕೊಂಡು ಮುನ್ನಡೆಯುವ ಕಲೆ ಮಾತ್ರವೇ ಶಾಶ್ವತವಾಗಿ ಉಳಿಯುತ್ತದೆ.
ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಕಲೆ-ಸಾಹಿತ್ಯ-ಸಂಗೀತ ಮೊದಲಾದ ಎಲ್ಲ ಸಾಂಸ್ಕೃತಿಕ ಅಭಿವ್ಯಕ್ತಿಗಳೂ ಇಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯೊಡನೆ ಬೆಸೆದುಕೊಂಡಿರುವುದರಿಂದ, ಇಲ್ಲಿ ಎಲ್ಲ ರೀತಿಯ ಕಲಾ ಪ್ರಕಾರಗಳ ಮೇಲೆ ಮೇಲ್ಜಾತಿಯ-ವೈದಿಕಶಾಹಿಯ-ಮೇಲ್ವರ್ಗದ ಪಾರಮ್ಯ ಸದಾ ಜೀವಂತವಾಗಿರುತ್ತದೆ. ತಳಮಟ್ಟದ ಸಾಮಾಜಿಕ ಬದುಕು ಹಾಗೂ ಜೀವನ ಶೈಲಿಯ ಪ್ರಭಾವದಿಂದ ಉಗಮಿಸುವ ಕಲೆ, ಸಾಹಿತ್ಯ ಮತ್ತು ಸಂಗೀತ ಮುಂತಾದ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನೂ ತನ್ನದಾಗಿಸಿಕೊಳ್ಳುವ ನಿರಂತರ ಪ್ರಯತ್ನದಲ್ಲಿ ಈ ಪ್ರಬಲ ವರ್ಗಗಳು, ವಿಶಾಲ ಸಮಾಜವನ್ನು ನಿರ್ದೇಶಿಸುವ ಜಾತಿ ಶ್ರೇಣಿಯ ತಾತ್ವಿಕ ನೆಲೆಗಳನ್ನೇ ಬಳಸಿಕೊಂಡು, ಪರಂಪರೆಯ ರಕ್ಷಣೆಯ ನೆಪದಲ್ಲಿ ತಮ್ಮ ಪ್ರಾಬಲ್ಯ-ಪಾರಮ್ಯವನ್ನು ಮರು ಸ್ಥಾಪಿಸಿಕೊಳ್ಳುತ್ತಿರುತ್ತವೆ. ಈ ಪಾರಂಪರಿಕ ವಾರಸುದಾರಿಕೆಗೆ ಒಳಗಾಗಿರುವ ಒಂದು ಕ್ಷೇತ್ರ ಎಂದರೆ ಕರ್ನಾಟಕ ಶಾಸ್ತ್ರೀಯ ಸಂಗೀತ.
ಸಾಂಪ್ರದಾಯಿಕ ಸಮಾಜವೊಂದರಲ್ಲಿ ಯಾವುದೇ ವಿದ್ಯಮಾನವು ಪಾವಿತ್ರ್ಯತೆ ಅಥವಾ ಪರಿಶುದ್ಧತೆಯ ವ್ಯಾಖ್ಯಾನಕ್ಕೊಳಪಟ್ಟು, ನಿರ್ದಿಷ್ಟ ಚೌಕಟ್ಟುಗಳಲ್ಲಿ ಬಂಧಿಸಲ್ಪಟ್ಟರೆ ಅದು ಬೌದ್ಧಿಕವಾಗಿ ವರ್ಗೀಕರಣಕ್ಕೊಳಗಾಗಿ, ಸಮಾಜದೊಳಗಿನ ಪ್ರಬಲ ಮೇಲ್ವರ್ಗಗಳ-ಮೇಲ್ಜಾತಿಗಳ, ವಾರಸುದಾರಿಕೆಗೆ ಒಳಗಾಗುತ್ತದೆ. ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ತಮ್ಮ ಪಾರಂಪರಿಕ ತಾತ್ವಿಕತೆಯ ಮೂಲಕವೇ ನಿರ್ವಚಿಸುವ ಮೂಲಕ ವಾರಸುದಾರಿಕೆಯನ್ನು ವಹಿಸಿಕೊಳ್ಳುವ ಪ್ರಬಲ ಜಾತಿ-ವರ್ಗಗಳು ಯಾವುದೇ ಸುಧಾರಣೆ ಅಥವಾ ಉಲ್ಲಂಘನೆಗಳನ್ನು ವಿದ್ರೋಹವೆಂದೇ ಪರಿಗಣಿಸಲಾರಂಭಿಸುತ್ತವೆ. ನವ ಉದಾರವಾದ ಮತ್ತು ಬಲಪಂಥೀಯ ರಾಜಕಾರಣದಿಂದ ಆವೃತವಾಗಿರುವ ಭಾರತದ ಸಾಂಸ್ಕೃತಿಕ ವಲಯ ಈ ಸಂಕೀರ್ಣ ಬಿಕ್ಕಟ್ಟುಗಳನ್ನು ಎದುರಿಸುತ್ತಲೇ ಬಂದಿದ್ದು, ಇದೀಗ ಕರ್ನಾಟಕ ಶಾಸ್ತ್ರೀಯ ಸಂಗೀತವೂ ಸಹ ವಿವಾದದ ಒಂದು ಭಾಗವಾಗಿದೆ
ಖ್ಯಾತ ಸಂಗೀತಗಾರ ಟಿ.ಎಮ್. ಕೃಷ್ಣ ಅವರ ಸುತ್ತ ಹಬ್ಬಿಕೊಂಡಿರುವ ವಿವಾದವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಹರಿವ ನದಿಯ ಅಲೆಗಳಂತೆ ಸ್ವತಂತ್ರವಾಗಿ, ಸ್ವಾಯತ್ತತೆಯಿಂದ ಪ್ರವಹಿಸಬೇಕಾದ ಸ್ವರಗಳಿಗೆ ಬಲೆ ಬೀಸಿ ಹಿಡಿದಿಡುವ ಪ್ರವೃತ್ತಿ ಎಷ್ಟು ಗಾಢವಾಗಿ ಬೇರುಬಿಟ್ಟಿದೆ ಎನ್ನುವುದು ಅರ್ಥವಾಗುತ್ತದೆ. ಏಳು ಸ್ವರಗಳನ್ನಾಧರಿಸಿದ ಒಂದು ಸಂಗೀತ ಪ್ರಕಾರವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಾಚೀನತೆ ಹಾಗೂ ಅದು ಪ್ರವಹಿಸಿರುವ ಚಾರಿತ್ರಿಕ ಹಾದಿಗಳನ್ನು ಗಮನಿಸಿದಾಗ, ಇತಿಹಾಸದುದ್ದಕ್ಕೂ ಈ ಒಂದು ಕಲಾಪ್ರಕಾರವು ಜನಮಾನಸದ ನಡುವೆ ಇದ್ದೂ ಇಲ್ಲದಂತೆ ಒಂದು ವರ್ಗವನ್ನು ಮಾತ್ರ ತಲುಪುತ್ತಾ ಬಂದಿರುವುದೂ ಕಾಣುತ್ತದೆ. ಅದೇ ವೇಳೆ ಮತಶ್ರದ್ಧೆ ಮತ್ತು ನಂಬಿಕೆಗಳನ್ನು ದಾಟಿ ಸಂಗೀತ ಸ್ವರಗಳು ಎಲ್ಲ ಅಸ್ಮಿತೆಗಳ ಗೋಡೆಗಳನ್ನೂ ಭೇದಿಸಿ, ಹೊಸ ರೂಪಾಂತರಗಳ ಮೂಲಕ ಆಧುನಿಕ ಜಗತ್ತಿನಲ್ಲೂ ತನ್ನ ಪ್ರಸ್ತುತತೆ ಉಳಿಸಿಕೊಂಡಿರುವುದೂ ಕಾಣುತ್ತದೆ.
ಬಹಳ ಮುಖ್ಯವಾಗಿ ಟಿ.ಎಂ.ಕೃಷ್ಣ ಪೆರಿಯಾರ್ ಅವರನ್ನು ಆಗಾಗ್ಗೆ ಉಲ್ಲೇಖಿಸುವುದು ತಮಿಳುನಾಡಿನ ವೈದಿಕಶಾಹಿಯ ಆಕ್ರೋಶಕ್ಕೆ ಗುರಿಯಾಗಿದೆ. ಸಾಂಪ್ರದಾಯಿಕ ಮಾರ್ಗಗಳನ್ನು ಧಿಕ್ಕರಿಸುತ್ತಲೇ ಸಂಗೀತ ಸುಧೆಯನ್ನು ತಳಸಮುದಾಯಕ್ಕೆ ತಲುಪಿಸುವ ಪ್ರಯತ್ನದಲ್ಲಿರುವ ಟಿ.ಎಂ. ಕೃಷ್ಣ ಅಶೋಕನ ಬ್ರಾಹ್ಮಿ ಶಾಸನಗಳನ್ನೂ ಸಂಗೀತಕ್ಕೆ ಅಳವಡಿಸುವ ಮೂಲಕ ಕ್ರಾಂತಿಕಾರಕ ಹೆಜ್ಜೆ ಇಟ್ಟಿರುವುದು ಪ್ರಶಂಸನೀಯ. ಹಾಗೆಯೇ ತಮ್ಮ ಕಛೇರಿಗಳ ನಡುವೆಯೇ ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸುವ ಟಿ.ಎಂ. ಕೃಷ್ಣ ಭಾರತವನ್ನು ಆವರಿಸುತ್ತಿರುವ ಬಲಪಂಥೀಯ ಸಾಂಸ್ಕೃತಿಕ ರಾಜಕಾರಣವನ್ನೂ ಧಿಕ್ಕರಿಸುತ್ತಲೇ ಬಂದಿದ್ದಾರೆ. ಈ ನೆಲೆಯಲ್ಲಿ ಅವರಿಗೆ ಪೆರಿಯಾರ್, ಅಂಬೇಡ್ಕರ್ ಮೊದಲಾದ ದಾರ್ಶನಿಕರು ಆದರಣೀಯವಾಗಿ ಕಂಡರೆ ಅಚ್ಚರಿಯೇನಿಲ್ಲ.
ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಪ್ರತಿನಿಧಿಸುವ ವಿದ್ವಾಂಸರು ಸಮಕಾಲೀನ ಸಾಮಾಜಿಕ ಆಗುಹೋಗುಗಳಿಗೆ ಸ್ಪಂದಿಸುವುದನ್ನೇ ಅಪರಾಧ ಎಂದು ಪರಿಭಾವಿಸುವ ವೈದಿಕಶಾಹಿ ಮನೋಭಾವವನ್ನು ಟಿ.ಎಂ. ಕೃಷ್ಣ ಧಿಕ್ಕರಿಸಿರುವುದರಿಂದಲೇ, ಅವರು ಶಾಸ್ತ್ರೀಯ ಸಂಗೀತ ಪರಂಪರೆಗೆ ಧಕ್ಕೆ ಉಂಟುಮಾಡಿದ್ದಾರೆ ಎಂಬ ಆರೋಪಗಳನ್ನು ಹೊರಿಸಲಾಗುತ್ತಿದೆ. ಕಲೆಗಾಗಿ ಕಲೆ ಎಂಬ ಪ್ರಾಚೀನ ಮನಸ್ಥಿತಿಯನ್ನೇ ಇಂದಿಗೂ ಉಳಿಸಿಕೊಂಡು ಬಂದಿರುವ ಒಂದು ವರ್ಗಕ್ಕೆ ಸಹಜವಾಗಿಯೇ ಇಂತಹ ಸಾಂಸ್ಕೃತಿಕ ಉಲ್ಲಂಘನೆಗಳು ವಿದ್ರೋಹಗಳಂತೆ ಕಾಣುತ್ತವೆ. ಆದರೆ ಸಂಗೀತ ಎನ್ನುವುದು ಒಂದು ಆಸ್ವಾದಿಸಲ್ಪಡುವ ಕಲೆ. ಉತ್ತರಾದಿ-ದಕ್ಷಿಣಾದಿ ಎರಡೂ ಪ್ರಕಾರಗಳಲ್ಲಿ ಈ ಕಲೆಗೆ ಆಧಾರ ಇರುವುದು ಸಪ್ತ ಸ್ವರಗಳಲ್ಲಿ. ಈ ಸ್ವರಗಳು ಹರಿವ ನದಿಯ ಅಲೆಗಳಂತೆ ಸ್ವತಂತ್ರವಾಗಿ, ಸ್ವಾಯತ್ತವಾಗಿ ಪ್ರವಹಿಸಬೇಕೇ ಹೊರತು, ಇವುಗಳನ್ನು ನಿರ್ದಿಷ್ಟ ಧಾರ್ಮಿಕ-ಸಾಂಸ್ಕೃತಿಕ ಕೋಶಗಳಲ್ಲಿ ಬಂಧಿಸುವುದು, ಕಲೆಗೆ ಅಪಚಾರ ಮಾಡಿದಂತಾಗುತ್ತದೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯ ಹಿಂದಿರುವ ಸ್ವರಾಲಾಪನೆ, ರಾಗಾಲಾಪನೆಗಳೇ ಹೊರತು ಅದರ ಹಿಂದಿನ ಅಕ್ಷರ ರೂಪದ ಗಾಯನ ಅಲ್ಲ. ಹಾಗಾಗಿಯೇ ಶಾಸ್ತ್ರೀಯ ಸಂಗೀತವನ್ನು ಆಸ್ವಾದಿಸುವವರ ಪೈಕಿ ನಮಗೆ ಕಟ್ಟಾ ನಾಸ್ತಿಕರೂ, ಆಜ್ಞೇಯತಾವಾದಿಗಳೂ, ಅಧ್ಯಾತ್ಮವಾದಿಗಳೂ ಕಾಣುತ್ತಾರೆ. ಹಾಗೆಯೇ ಶಾಸ್ತ್ರೀಯ ಸಂಗೀತದಲ್ಲಿ ಅಡಕವಾಗಿರಬಹುದಾದ ಶ್ರದ್ಧಾಭಕ್ತಿಗಳ ಭಾವವನ್ನು ಒಪ್ಪಿಕೊಳ್ಳುತ್ತಲೇ ಸಪ್ತಸ್ವರಗಳ ಲಯಬದ್ಧತೆಯನ್ನು ಕಾಪಾಡಿಕೊಳ್ಳುತ್ತಾ ತಮ್ಮದೇ ಆದ ಸಂಗೀತ ಪ್ರಕಾರಗಳಿಗೆ ಹೊಂದಿಸಿ ಬಳಸಿಕೊಳ್ಳುವುದನ್ನೂ ನಾವು ಕಂಡಿದ್ದೇವೆ. ಯೇಸುದಾಸ್, ಜಾನ್ ಹಿಗಿನ್ಸ್ ಮೊದಲಾದ ಕ್ರೈಸ್ತ ವಿದ್ವಾಂಸರಿಗೆ ತಮ್ಮ ಗಾಯನದ ಪ್ರಪಂಚದಲ್ಲಿ ಕಾಣುವುದು ಸುಸ್ವರ ಪ್ರಪಂಚದ ಆಸ್ವಾದನೆಯೇ ಹೊರತು ಯಾವುದೇ ಒಂದು ನಿರ್ದಿಷ್ಟದ ಮತದ ಅಥವಾ ಧರ್ಮದ ಲಾಂಛನಗಳಲ್ಲ. ಗಝಲ್ ಗಾಯನದ ಸಾಮ್ರಾಟರೆಂದೇ ಗುರುತಿಸಲ್ಪಡುವ ಮೆಹದಿ ಹಸನ್, ಗುಲಾಂ ಅಲಿ ಮೊದಲಾದವರೂ ಸಹ ಇದೇ ಸಪ್ತ ಸ್ವರಗಳನ್ನು ಅಳವಡಿಸಿಕೊಂಡು, ಮಿರ್ಜಾ ಗಾಲಿಬ್ ಅವರ ಗಝಲ್‌ಗಳನ್ನು ಹಾಡುತ್ತಾರೆ. ಇದು ಶಾಸ್ತ್ರೀಯ ಸಂಗೀತದಲ್ಲಿ ನಾವು ಗುರುತಿಸಬೇಕಾದ ಪ್ರಧಾನ ಮೌಲಿಕ ಗುಣ.
ಶತಮಾನಗಳ ಕಾಲ ಮೇಲ್ಜಾತಿಯವರ ವಾರಸುದಾರಿಕೆಯಲ್ಲೇ ನಡೆದುಬಂದ ಕರ್ನಾಟಕ ಸಂಗೀತದಲ್ಲಿ ಪಕ್ಕವಾದ್ಯ ನುಡಿಸುವ ವಿದ್ವಾಂಸರನ್ನೂ ಸೇರಿದಂತೆ ನೂರಾರು ಕಲಾವಿದರು ಜಾತಿ ದೌರ್ಜನ್ಯ ಮತ್ತು ಅವಹೇಳನವನ್ನು ಅನುಭವಿಸಿಕೊಂಡೇ ಬಂದಿರುವುದನ್ನು ಇತಿಹಾಸದಲ್ಲಿ ಗುರುತಿಸಬಹುದು. ಆದರೂ ಕೆಲವು ಸಮಾಜ ಸುಧಾರಕರ ಪ್ರಯತ್ನಗಳ ಫಲವಾಗಿ ಇಂದು ಕರ್ನಾಟಕ ಸಂಗೀತದ ಕಚೇರಿಯಲ್ಲಿ ಜಾತಿ ಪ್ರಜ್ಞೆ ನಿಶ್ಶೇಷವಾಗಿದೆ. ಆದಾಗ್ಯೂ ಒಂದು ಕಲಾಪ್ರಕಾರವಾಗಿ ಸಮಾಜದ ತಳಮಟ್ಟವನ್ನೂ ಸ್ಪರ್ಶಿಸಿ, ಅಲ್ಲಿನ ಜನಸಮುದಾಯಗಳ ನಡುವೆ ತನ್ನ ಅಸ್ತಿತ್ವ ಕಂಡುಕೊಳ್ಳಬೇಕಾಗಿದ್ದ ಕರ್ನಾಟಕ ಸಂಗೀತ ತನ್ನ ವಿಸ್ತರಣೆಯ ಹಾದಿಗೆ ತಾನೇ ಬೇಲಿಗಳನ್ನು ನಿರ್ಮಿಸಿಕೊಂಡು ವರ್ಗೀಕರಣಕ್ಕೊಳಗಾಗಿದೆ. ಆಧುನಿಕ ತಂತ್ರಜ್ಞಾನದ ಸಂವಹನ ಮಾಧ್ಯಮಗಳು ಈ ಕಲಾಪ್ರಕಾರವನ್ನು ತಳಮಟ್ಟದವರೆಗೂ ಕೊಂಡೊಯ್ದಿದ್ದರೂ, ತಳಸಮುದಾಯದ ಜನಸಾಂಸ್ಕೃತಿಕ ನೆಲೆಗಳಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ವಿಫಲವಾಗಿದೆ.
ಇದನ್ನೂ ಓದಿ- ಟಿ.ಎಂ.ಕೃಷ್ಣರಿಂದ ಕಲಾನಿಧಿ ಸಾಧನೆ; ವೈದಿಕಶಾಹಿ ಪಂಡಿತರ ರೋಧನೆ
ಇದಕ್ಕೆ ಕಾರಣ ಈ ಕಲಾಭಿವ್ಯಕ್ತಿಗೆ ಆರೋಪಿಸಲಾಗಿರುವ ʼಪಾವಿತ್ರ್ಯತೆ ಅಥವಾ ಪರಿಶುದ್ಧತೆʼಯ ಪರಿಕಲ್ಪನೆಗಳು. ಹೀಗೆ ಪಾವಿತ್ರ್ಯತೆಯ ನೆಲೆಯಲ್ಲಿ ನಿರ್ವಚಿಸಲ್ಪಡುವ ಯಾವುದೇ ಅಭಿವ್ಯಕ್ತಿ ಮಾದರಿಗಳು ಕಾಲ ಕ್ರಮೇಣ ಉಲ್ಲಂಘಿಸಬಾರದಂತಹ ಅಥವಾ ಉಲ್ಲಂಘನೆಗೆ ನಿಲುಕದಂತಹ ಭದ್ರ ಗೋಡೆಗಳಿಂದ ಆವೃತವಾಗಿ ಕೋಶಗಳಲ್ಲಿ ಅವಿತುಕೊಳ್ಳುತ್ತವೆ. ಈ ಕೋಶಗಳನ್ನು ನಿಯಂತ್ರಿಸುವ, ನಿರ್ವಹಿಸುವ ವಾರಸುದಾರಿಕೆಯನ್ನು ಸಮಾಜದ ಮೇಲ್ಜಾತಿ-ಮೇಲ್ವರ್ಗಗಳು ತಮ್ಮದಾಗಿಸಿಕೊಂಡು ತಮ್ಮದೇ ಆದ ʼ ಸ್ವರ ಸಾಮ್ರಾಜ್ಯʼ ವನ್ನು ಕಟ್ಟಿಕೊಳ್ಳಲು ಯತ್ನಿಸುತ್ತವೆ. ಸಾಂಸ್ಕೃತಿಕ ಮಾದರಿಗಳನ್ನು ಮತ್ತು ಮಾರ್ಗಗಳನ್ನು commodification ಪ್ರಕ್ರಿಯೆಗೆ ಒಳಪಡಿಸುವ ಮೂಲಕ ನವ ಉದಾರವಾದಿ ಬಂಡವಾಳಶಾಹಿ ಕಾರ್ಪೋರೇಟ್ ವಲಯವು, ಇದೇ ಮೇಲ್ವರ್ಗಗಳ ಪ್ರಾತಿನಿಧ್ಯವನ್ನು ಗಟ್ಟಿಗೊಳಿಸಲು ಸಾಂಸ್ಥಿಕ ಪ್ರಯತ್ನಗಳನ್ನೂ ಮಾಡುತ್ತಾ ಹೋಗುತ್ತದೆ.
ಈ ಗಟ್ಟಿತಳಪಾಯವನ್ನು ಅಲುಗಾಡಿಸುವ ಯಾವುದೇ ಪ್ರಯತ್ನವು ವಿದ್ರೋಹದಂತೆಯೇ ಕಾಣುತ್ತದೆ. ಈ ಶಾಸ್ತ್ರೀಯ ಪರಂಪರೆಯನ್ನು ತಳಮಟ್ಟದ ಸಮಾಜಕ್ಕೂ ತಲುಪಿಸುವ ಟಿ.ಎಮ್. ಕೃಷ್ಣ ಅವರ ಪ್ರಯೋಗಗಳು ಈ ಕಾರಣಕ್ಕಾಗಿಯೇ ತೀವ್ರ ಪ್ರತಿರೋಧ ಎದುರಿಸಬೇಕಾಗಿದೆ. ಇಡೀ ವಿವಾದದ ಕೇಂದ್ರ ಸ್ಥಾಯಿ ಇದೇ ಆಗಿದೆ.
ನಾ ದಿವಾಕರ
ಚಿಂತಕರು