ಸೃಷ್ಟಿ ಹೆಸರು ಹೆಣ್ಣು
ಹೊತ್ತ ಭೂಮಿ ತಾಯಿ ಹೆಣ್ಣು,
ಹರಿವ ನದಿಗಳು ಹೆಣ್ಣು
ಬೆಳವ ಪಚ್ಛೆ- ಪೈರುಗಳು ಹೆಣ್ಣು
ವಿದ್ಯೆ ಕಲಿಸುವ ಸರಸ್ವತಿಯು ಹೆಣ್ಣು
ಶಕ್ತಿ ದೇವತೆಗಳೆಲ್ಲವೂ ಹೆಣ್ಣು
ದುಡ್ಡು ಕೊಡುವ ಲಕ್ಷ್ಮಿ ಹೆಣ್ಣು
ಕಾನೂನು ದೇವತೆಯೂ ಹೆಣ್ಣು
ಮದುವೆಯಾದ ಮೇಲೆ ನಮಗೆ ಜೀವನ ಕೊಟ್ಟು ತಮ್ಮ ಜೀವವನ್ನೇ ತೇವ ಆ ಹೆಣ್ಣು ಇಂದು ತನ್ನ ಅಸ್ಮಿತೆಯ ನೆಲೆ ಕಂಡಿರುವಳೇ? ದೇಶದಲ್ಲಿ ಮಹಿಳಾ ಅಸ್ಮಿತೆಯ ಬಗ್ಗೆ ಅವಲೋಕನ ಮಾಡುವುದಾದರೆ, ಆಕೆಯ ಶೋಷಣೆ ಮತ್ತು ಆಕೆಯ ವಿಮೋಚನೆ ಈ ಎರಡು ಅಂಶಗಳನ್ನುಮಾನದಂಡವಾಗಿಟ್ಟುಕೊಂಡು, ಮಹಿಳಾ ಅಸ್ಮಿತೆಯ ಸಮಗ್ರ ವಿಶ್ಲೇಷಣೆ ಮಾಡಬೇಕಾಗುತ್ತದೆ. ಈ ಮಹಿಳಾ ಅಸ್ಮಿತೆ ಕಾಲಕಾಲಕ್ಕೆ ರೂಪಾಂತರಗೊಳ್ಳುತ್ತದೆ. ಕೆಲವು ರಂಗಗಳಲ್ಲಿ ಮಹಿಳೆ ತನ್ನ ಅಸ್ಮಿತೆಯನ್ನು ಗಟ್ಟಿಗೊಳಿಸಿಕೊಂಡರೂ, ಶೋಷಣೆರಹಿತ ಬದುಕಿನ ಅವಕಾಶ ಯಾವ ರಂಗದಲ್ಲಿಯೂ ಸಂಪೂರ್ಣವಾಗಿ ಕಂಡುಕೊಂಡಿಲ್ಲ ಎನ್ನುವುದು ಅಷ್ಟೇ ಕಟು ಸತ್ಯ.
ಆಧುನಿಕ ಯುಗದ ಸಮಕಾಲೀನ ಮಹಿಳೆಯರ ಅಸ್ಮಿತೆಗೆ ಸವಾಲಾಗಿರುವ ನಾಲ್ಕು ಅಂಶಗಳ ಕುರಿತು ಚರ್ಚಿಸೋಣ.
ಜಾಗತೀಕರಣದ ನಂತರ ಇಡೀ ವಿಶ್ವವೇ ಒಂದು ಹಳ್ಳಿಯಾಗಿ ಸೃಷ್ಟಿಯಾಯಿತು, ಮಾಹಿತಿ ತಂತ್ರಜ್ಞಾನ ಎಲ್ಲೆಡೆಯೂ ವಿಜ್ರಂಭಿಸಿತು, ಭಾರತದ ಮಹಿಳಾ ಲೋಕದ ಮೇಲೆಯೂ ಅದು ತನ್ನ ಪ್ರಭಾವವನ್ನು ಬೀರಿತು, ಇದರಿಂದ ಅನೇಕ ಉದ್ಯೋಗಗಳ ಅವಕಾಶಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರನ್ನು ಅರಿಸಿಕೊಂಡು ಬಂದವು ಮತ್ತು ಮಹಿಳೆಯರು ತಮಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ಸದೃಢತೆಯಿಂದ ನಿರ್ವಹಿಸಿ, ತನ್ನ ಕ್ಷಮತೆಯನ್ನು ಜಗತ್ತಿಗೆ ಸಾರಿದಳು. ಇಷ್ಟಾದರೂ ಆಕೆ ಕುಟುಂಬದಿಂದ ಹಿಡಿದು ಸಾರ್ವಜನಿಕ ಕ್ಷೇತ್ರದ ಎಲ್ಲಾ ರಂಗಗಳಲ್ಲಿಯೂ, ಇಂದಿಗೂ ತನ್ನ ಅಸ್ಮಿತೆಯ ನೆಲೆಗಾಗಿ ನಿರಂತರ ಹೋರಾಟ ಮಾಡುತ್ತಿದ್ದಾಳೆ . ಮುಕ್ತ ಅಭಿವ್ಯಕ್ತಿಯ ಸ್ವಾತಂತ್ರ್ಯ ಆಕೆಗಿಲ್ಲವೆಂಬುದಂತೂ ಕಟು ಸತ್ಯ. ಇದಕ್ಕೆ ಗ್ರಾಮೀಣ ಮಹಿಳೆಯರು ಕೂಡ ಹೊರತಾಗಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.
ಮಹಿಳೆ ತನ್ನ ಅಸ್ಮಿತೆಯ ಹೋರಾಟದಲ್ಲಿ ರೂಪಾಂತರಗೊಂಡ, ಕಂಡುಕೊಳ್ಳಲಾಗದ ತಲ್ಲಣಗಳನ್ನು, ಶೋಷಣೆ, ದೌರ್ಜನ್ಯಗಳನ್ನು ತನ್ನ ಗಡಿಬಿಡಿಯ ಬದುಕಿನ ನಡುವೆಯೂ ಅವುಗಳೊಂದಿಗೆ ನಿತ್ಯವೂ ಸೆಣಸಾಡುತ್ತಿದ್ದಾಳೆ. ನಿಜವಾಗಿಯೂ ಸ್ವಾತಂತ್ರ ಭಾರತದಲ್ಲಿ ಮಹಿಳೆಯ ಅಸ್ಮಿತೆಗೆ ಸ್ವಾತಂತ್ರ್ಯವಿದೆಯೇ ? ಎನ್ನುವ ಪ್ರಶ್ನೆ ಮೂಡಿದಾಗ ಮಹಾತ್ಮ ಗಾಂಧೀಜಿಯವರ ಮಾತು ನೆನಪಾಗುತ್ತದೆ. “ಎಂದು ಈ ದೇಶದಲ್ಲಿ ಮಹಿಳೆ ನಡುರಾತ್ರಿಯಲ್ಲಿ ನಿರ್ಭೀತಿಯಿಂದ ಒಂಟಿಯಾಗಿ ಓಡಾಡುತ್ತಾಳೆಯೋ, ಅಂದೆ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಹಾಗೆ “. ಈ ಮಾತು ಇಂದಿಗೂ ಮರೀಚಿಕೆಯಾಗಿದೆ.
1) ಪರಂಪರೆಯ ರೂಪದಲ್ಲಿ
2) ಮೌಲ್ಯಗಳ ರೂಪದಲ್ಲಿ
3) ಬೌದ್ಧಿಕ ನೆಲೆಗಟ್ಟಿನ ರೂಪದಲ್ಲಿ
4) ಸಾಂಸ್ಕೃತಿಕ ರಾಜಕಾರಣದ ರೂಪದಲ್ಲಿ…..
1) ಪರಂಪರೆಯ ರೂಪದಲ್ಲಿ ಮಹಿಳಾ ಅಸ್ಮಿತೆ :
ಪರಂಪರೆ ನೆಪದಲ್ಲಿ ಮಹಿಳೆ ನಿರಂತರ ಶೋಷಣೆಗೆ ಒಳಗಾಗುತ್ತಿದ್ದಾಳೆ. “ಇತಿಹಾಸದಿಂದ ಬೇಡವಾದನ್ನು ಕಳಚಿಕೊಂಡು, ಬೇಕುಗಳನ್ನಷ್ಟೇ ಮುನ್ನಡೆಸಿಕೊಂಡು ಹೋಗುವುದಕ್ಕೆ ಪರಂಪರೆ” ಎಂದು ಕರೆಯುತ್ತೇವೆ . ಆದರೆ ಈ ಪರಂಪರೆಯಲ್ಲಿ ನಮ್ಮ ಮಹಿಳೆಯರು, ಹಿಂದಿನ ದೌರ್ಜನ್ಯಗಳಿಂದ ವಿಮೋಚನೆಗೊಂಡು ಹೊಸ ದೃಷ್ಟಿಕೋನದ ಭಾರತೀಯ ಪರಂಪರೆ ಅಳವಡಿಸಿಕೊಂಡಿರುವುದು ಇನ್ನೂ ಅಸ್ಪಷ್ಟವಾಗಿದೆ. ಇಂದಿನ ಸಮಾಜ, “ವಸ್ತುಗಳ ವಿಷಯದಲ್ಲಿ ಆಧುನಿಕಗೊಂಡಷ್ಟು, ಸಮಾಜದ ಆಂತರಿಕ ಮನಸ್ಸು ಆಧುನಿಕವಾಗಿಲ್ಲ”. ಇದಕ್ಕೆ ಕಾರಣ ಸಾಂಪ್ರದಾಯಿಕ ಬದುಕಿನ ವ್ಯಾಮೋಹವಿರುವ ಸಾಕಷ್ಟು ಪುರುಷರು, ಮಹಿಳೆಯ ವಿಮೋಚನೆಯನ್ನು ಒಪ್ಪುತ್ತಿಲ್ಲ. ಅವಕಾಶ ಸಿಕ್ಕಾಗೆಲ್ಲಾ ಪರಂಪರೆಯ ನೆಪದಲ್ಲಿ ಆಕೆಯ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುತ್ತಾನೆ.
ಜಾಗತೀಕರಣದ ನಂತರ ಮೇಲ್ನೋಟಕ್ಕೆ ಭಾರತದ ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರಗತಿಯ ಹಾದಿಯಲ್ಲಿ ಇರುವಂತೆ ಕಂಡರೂ, ಆಕೆಯ ಶೋಷಣೆಯ ರೂಪ ಬದಲಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಪರಂಪರೆ ನೆಪದಲ್ಲಿ ಮಹಿಳೆಯರ ಮೇಲೆ ಪುರುಷನಷ್ಟೇ ಅಲ್ಲ ಕೆಲವೊಮ್ಮೆ ಹೆಣ್ಣು- ಹೆಣ್ಣಿಗೆ ಶತ್ರುವಾಗಿಬಿಡುತ್ತಾಳೆ. ಅಂದರೆ ಆಕೆಯೊಳಗೊಬ್ಬ ಪುರುಷ ಪ್ರತ್ಯಕ್ಷವಾಗಿಬಿಡುತ್ತಾನೆ. ಅದು ಹೇಗೆ ಎಂದರೆ? ತಾಯಿ ತನ್ನ ಮಗಳನ್ನು ಕಾಣುವ ಹಾಗೆ ಸೊಸೆಯನ್ನು ಕಾಣುವುದಿಲ್ಲ, ಸೊಸೆ ತನ್ನ ತಾಯಿಯನ್ನು ಕಾಣುವ ಹಾಗೆ ಅತ್ತೆಯನ್ನು ಕಾಣುವುದಿಲ್ಲ, ಹೀಗೆ ತನ್ನದೇ ಕುಟುಂಬದಲ್ಲಿ ಸಾಂಪ್ರದಾಯಿಕ ಧೋರಣೆಯನ್ನೇ “ಪರಂಪರೆ” ಎಂದುಕೊಂಡು ಆಕೆಯ ಅಸ್ಮಿತೆ ಮೇಲೆ ದಾಳಿಮಾಡುತ್ತದೆ.
ಅಲ್ಲದೆ ಪುರುಷ ತನ್ನ ಕುಟುಂಬದಲ್ಲಿ ಇರುವ ಮಹಿಳೆಯರನ್ನು ಪರಂಪರೆ ನೆಪದಲ್ಲಿ ಪೂಜಿಸುವ ಹಾಗೆ, ಹೊರ ಜಗತ್ತಿನ ಮಹಿಳೆಯರನ್ನು ಪೂಜಿಸುವುದಿಲ್ಲ. ಆಕೆಯ ಮೇಲೆ ಅನೇಕ ರೀತಿಯ ದಾಳಿಗಳನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಮಾಡುತ್ತಲೇ ಇರುತ್ತಾನೆ. ಈ ಹಿಂದೆ ದೇವದಾಸಿ ಪದ್ಧತಿ, ಸತಿ ಸಹಗಮನ ಪದ್ಧತಿ, ವೇಶ್ಯಾವಾಟಿಕೆ, ವೈಧವ್ಯದ ಮೌಡ್ಯಾಚಾರಣೆ, ಈ ರೀತಿಯ ಹಿಂಸೆಗಳ ಚೌಕಟ್ಟಿನಲ್ಲಿ ಆಕೆಯನ್ನು ಬಂಧಿಸಿ, ಆಕೆಯ ಬದುಕಿನ ಅಸ್ಮಿತೆಯನ್ನೇ ಕತ್ತುಹಿಸುಕಿ ಕೊಲ್ಲುತ್ತಿದ್ದರು. ಇಂದು ಬದಲಾದ ಸ್ವರೂಪದಲ್ಲಿ ಈ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಿವೆ. ಆದರೆ ಈ ಎಲ್ಲಾ ಸಮಾಜದ ಮುಖ್ಯವಾಹಿನಿಯಲ್ಲಿ ಮುಕ್ತವಾಗಿ ಚರ್ಚೆಗೆ ಒಳಪಡದಿದ್ದರೂ ಸಮಾಜದ ಕತ್ತಲ ಕೋಣೆಯಲ್ಲಿ ವಿಜೃಂಭಿಸುತ್ತಿವೆ.
2) ಮೌಲ್ಯಗಳ ರೂಪದಲ್ಲಿ ಮಹಿಳಾ ಅಸ್ಮಿತೆ….
ಮೌಲ್ಯಗಳ ರೂಪದಲ್ಲಿ ಮಹಿಳಾ ಅಸ್ಮಿತೆಯ ಅಭದ್ರತೆಯನ್ನು ಮಹಿಳಾ ಸಬಲೀಕರಣದಲ್ಲಿ ಕಾಣಬಹುದು. ಒಬ್ಬ ಮಹಿಳೆ ತನ್ನ ಕುಟುಂಬದ ಜೊತೆ ಜೊತೆಗೆ, ಸಾರ್ವಜನಿಕ ಕ್ಷೇತ್ರದಲ್ಲಿ ವೈಚಾರಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಸಾಂಪ್ರದಾಯಿಕ ಪುರುಷ ಮತ್ತು ಮಹಿಳೆಯ ದೌರ್ಜನ್ಯಗಳನ್ನು, ಮೌಲ್ಯಧಾರಿತ ಮಹಿಳೆ ಒಟ್ಟಿಗೆ ಎದುರಿಸಬೇಕಾಗುತ್ತದೆ. ಇಂತಹ ಮಾಲ್ಯಾಧಾರಿತ ಮಹಿಳೆಯನ್ನು ಮಾನಸಿಕವಾಗಿ ಚಿತ್ರಹಿಂಸೆ ಮಾಡುವುದರ ಮೂಲಕ ಆಕೆಯ ಮೌಲ್ಯಧಾರಿತ ಬದುಕಿನ ಹರಣ ಮಾಡಲು ನಿರಂತರ ಪ್ರಯತ್ನ ನಡೆಯುತ್ತಿರುತ್ತದೆ. ಭಾರತದ ವೈವಿಧ್ಯಮಯ ಸಮಾಜದಲ್ಲಿ ಹೆಣ್ಣು ಭಾವನಾತ್ಮಕವಾಗಿ ಹೆಚ್ಚು ಪೂಜ್ಯನೀಯಳು, ಹಾಗೆಯೇ ಅದಕ್ಕಿಂತ ಹೆಚ್ಚು ಶೋಷಿತಳೂ ಹೌದು ಎನ್ನುವುದು ದುರಂತವೇ ಸರಿ. ಇಲ್ಲಿ ಹೆಣ್ಣು ಅಂತರ್ಯದ ತುಮಲಗಳ ಜೊತೆಗೆ, ತನ್ನ ವೈಚಾರಿಕ ಮೌಲ್ಯಗಳನ್ನು ಬೆನ್ನಿಗೆ ಕಟ್ಟಿಕೊಂಡು ಪುರುಷ ಸಮಾಜದ ಬಾಹ್ಯ ಪ್ರತಿಕ್ರಿಯೆಗಳ ಜೊತೆಗೂ ಸಂಘರ್ಷ ಮಾಡುವ ತಲ್ಲಣಗಳ ವಿಚಿತ್ರ ಪರಿಸ್ಥಿತಿಯಲ್ಲಿ ಆಕೆ ಬದುಕಬೇಕಾಗುತ್ತದೆ. ಮೌಲ್ಯಗಳನ್ನು ಕಟ್ಟಿಕೊಂಡ ಮಹಿಳೆ ಏಕೆ ಮಾನಸಿಕ ಅಭದ್ರತೆಯಲ್ಲಿ ಬದುಕುತ್ತಾಳೆಂದರೆ, ತನ್ನ ಜ್ಞಾನದ ಅರಿವಿನಾಳದಿಂದ ಕಂಡುಕೊಂಡ ಮೌಲ್ಯಾಧಾರಿತ ಬದುಕನ್ನು ಸ್ವಾತಂತ್ರ್ಯದಿಂದ ಅನುಭವಿಸಲು, ಅನೇಕ ಬಾರಿ ಆಕೆಯ ಕುಟುಂಬವೇ ಅವಕಾಶ ಮಾಡಿಕೊಡುವುದಿಲ್ಲ. ಇನ್ನು ಸಮಾಜ ಮುಕ್ತವಾಗಿ ಅವಕಾಶ ಮಾಡಿಕೊಡುವುದು ದೂರದ ವಿಷಯ.
ಆಕೆ ಕುಟುಂಬದ ಕಟ್ಟು ಪಾಡಿನ ಚೌಕಟ್ಟಿಗೆ ಹೊಂದಿಕೊಳ್ಳುತ್ತಾ ತನಗೆ ತಾನೇ ದ್ರೋಹ ಮಾಡಿಕೊಂಡು, ಖಿನ್ನತೆಯ ಬದುಕಿನ ಕಂಕಣವನ್ನು ಧರಿಸಿಕೊಂಡು, ಮೊಗದಲ್ಲಿ ನಗುವಿನ ಒಡವೆಯ ಅಲಂಕಾರದಿಂದ ತನ್ನ ಮನಸ್ಸಿನಲ್ಲಿಯೇ ಮೌಲ್ಯಗಳಿಗೆ ಸಮಾಧಿ ಕಟ್ಟಿಕೊಂಡು ಬದುಕಲು ಸಜ್ಜಾಗುತ್ತಾಳೆ.
3)ಭೌದ್ಧಿಕ ನೆಲೆಗಟ್ಟಿನ ರೂಪದಲ್ಲಿ ಮಹಿಳಾ ಅಸ್ಮಿತೆ…..
“ಹೆಣ್ಣು ಮಕ್ಕಳಿಗೆ ನೀವೇನು ತಿದ್ದಬೇಡಿ, ಅವರಿಗೆ ಶಿಕ್ಷಣವನ್ನು ಕೊಡಿ, ಅವರೇ ತಮ್ಮ ಜೀವನವನ್ನು ರೂಪಿಸಿಕೊಂಡು ಈ ಸಮಾಜವನ್ನು ತಿದ್ದುತ್ತಾರೆ.” ಎಂದು ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ, ಮಹಿಳೆಯರ ಹುಟ್ಟು ಸ್ವಭಾವವೇ ಕಲಿಕೆ. ಆಕೆ ನಿರಂತರ ಬದುಕಿನ ಪಾಠಗಳನ್ನು ಕಲಿಯುವ ವಿಧೇಯ ವಿದ್ಯಾರ್ಥಿನಿ ಇದ್ದಹಾಗೆ. ಆಕೆಗೆ ಸರಿಯಾದ ವಿದ್ಯಾಭ್ಯಾಸ ಸಿಕ್ಕರೆ ಆಕೆಯ ಬೌದ್ಧಿಕ ಮಟ್ಟ ಯಾವ ಪುರುಷರಿಗೂ ಕಡಿಮೆ ಇರುವುದಿಲ್ಲ, ಆದರೆ ಆಕೆ ಸದಾ ತನಗೆ ತಾನು ಸ್ವಯಂಕೃತ ಶಿಕ್ಷೆಗೆ ಒಳಪಡುತ್ತಾಳೆ. ತನ್ನ ಭೌದ್ಧಿಕ ಮನಸ್ಥಿತಿಯ ಬಗ್ಗೆ ಅಪಾರ ಆತ್ಮಭಿಮಾನ ಮತ್ತು ಆತ್ಮವಿಶ್ವಾಸವಿದ್ದರೂ, ವ್ಯವಸ್ಥಿತವಾಗಿ ಆಕೆಯ ಮೇಲೆ ನಡೆಯುವ ದಾಳಿಗಳಿಗೆ ತನಗೆ ತಾನೆ ಶಿಕ್ಷೆಗೆ ವಿಧಿಸಿಕೊಳ್ಳುತ್ತಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಹಾಡಿ ಹೊಗಳಿದರೂ, ಆಕೆ ತನಗಿಂತ ಮಿಗಿಲು ಎಂದು ಒಪ್ಪಿಕೊಳ್ಳದ ಪುರುಷ ಸಮಾಜದ ಮನಸ್ಥಿತಿ ಇಂದಿಗೂ ಜೀವಂತವಾಗಿದೆ. “ಹೆಣ್ಣು ಎಂದರೆ ಕೇವಲ ಮನೆಯ ಗೃಹಲಕ್ಷ್ಮಿ ಅಲ್ಲ, ಆಕೆ ಸಮಾಜದ ಇರುವಿಕೆಯ ಸಾಕ್ಷಿ “
ಅವಳು ಜೋರಾಗಿ ನಕ್ಕರೆ ಜರಿವರು,
ಅವಳು ಅತ್ತಾಗ ಕುಹಕವಾಡುವರು,
ಅವಳು ನಿರ್ಭೀತಿಯಿಂದ ಓಡಾಡಿದರೆ ಗಯ್ಯಾಳಿ ಎನ್ನುವರು,
ನೇರವಾಗಿ ಮಾತಾಡಿದರೆ ಜಗಳಗಂಟಿ ಎನ್ನುವರು,
ಅವಳು ತನ್ನ ಆಸೆ ಆಕಾಂಕ್ಷೆಗಳನ್ನು ಮುಕ್ತವಾಗಿ ಹೇಳಿಕೊಂಡರೆ ನಾಚಿಕೆಗೆಟ್ಟವಳು ಎನ್ನುವರು,
ದಿಟ್ಟತನದಿಂದ ತನ್ನ ಬದುಕನ್ನು ಕಟ್ಟಿಕೊಂಡರೆ ಗಂಡು ಬೀರಿ ಎನ್ನುವರು,
ಹೀಗೆ ಆಕೆ ಸಮಾಜದ ಸರ್ವ ಕ್ಷೇತ್ರಗಳಲ್ಲಿ ಸಮಾನತೆಯಿಂದ ತನ್ನ ಬದುಕನ್ನು ಕಟ್ಟಿಕೊಂಡಾಗ , ಸತತವಾಗಿ ತನ್ನ ಅಸ್ಮಿತೆಗಾಗಿ ಹೋರಾಟ ಮಾಡಬೇಕಾಗುತ್ತದೆ. ” ಪುರುಷನ ಅಣತೆಯಂತೆ ಬದುಕಿದಾಗ ಮಾತ್ರ ಮಹಿಳೆ ಪೂಜ್ಯನೀಯಳು, ಅದೇ ಪುರುಷನಿಗೆ ಪ್ರಶ್ನೆ ಮಾಡಿದಾಗ ಆಕೆ ಪತಿತಳು ” ಎನ್ನುವ ಪುರುಷ ಪ್ರಧಾನವಾದ ಬದುಕು ಆಕೆಯ ಅಸ್ಮಿತೆಯನ್ನು ಇಂದಿಗೂ ಅಣಕಿಸುತ್ತಿದೆ.
4)ಸಾಂಸ್ಕೃತಿಕ ರಾಜಕಾರಣದ ರೂಪದಲ್ಲಿ ಮಹಿಳಾ ಅಸ್ಮಿತೆ…..
ಸಾಂಸ್ಕೃತಿಕ ರಾಜಕಾರಣ ಎನ್ನುವುದು ಮಹಿಳೆಯರನ್ನು ಸಾರ್ವಜನಿಕವಾಗಿ ಹರಣ ಮಾಡುತ್ತಿರುವ ಬ್ರಹ್ಮಾಸ್ತ್ರವೆಂದರೆ ತಪ್ಪಾಗಲಾರದು. ಇದನ್ನು ನಮ್ಮ ಮಹಿಳೆಯರು ಮೊದಲು ಅರ್ಥಮಾಡಿಕೊಳ್ಳುವ ಅನಿವಾರ್ಯತೆ ಇದೆ .ಮಹಿಳೆಯರಿಗೆ ನಮ್ಮ ಸಮಾಜದಲ್ಲಿ ಪೂಜ್ಯನೀಯ ಸ್ಥಾನಮಾನ ಕೊಟ್ಟರೂ, ಸಮಾಜದ ಎದೆಯ ಭಾವದಲ್ಲಿ ಆಕೆ ಪೂಜ್ಯಳೇ ? ಎಂದು ಪ್ರಶ್ನೆ ಮಾಡಬೇಕಾದ ಸಕಾಲವಿದು .
“ಹೆಣ್ಣೊಂದು ಕಲಿತರೆ ಶಾಲೆಯೆಂದು ತೆರೆದಂತೆ” ಎನ್ನುವ ಮಾತಿನಂತೆ ,ಆಕೆ ಕೇವಲ ಅಕ್ಷರಸ್ತೆಯಾದರೆ ಸಾಲದು, ಈ ಸಮಾಜವನ್ನು ಅರ್ಥೈಸಿಕೊಳ್ಳುವ ಅನಿವಾರ್ಯತೆ ಇಂದಿನ ಆಧುನಿಕ ಮಹಿಳೆಗೆ ಅವಶ್ಯಕವಾಗಿದೆ.
ಭಾರತ ದೇಶದಲ್ಲಿ ಸಾಂಸ್ಕೃತಿಕವಾಗಿ ಮಹಿಳೆಯರನ್ನು ಹೊಗಳಿ ಹೊನ್ನಶೂಲಕ್ಕೇರಿಸಿ, ಬೇಕಾದ ರೀತಿಯಲ್ಲಿ, ಬೇಕಾದ ಸಮಯದಲ್ಲಿ ಆಕೆಯನ್ನು ಬಳಕೆ ಮಾಡಿಕೊಳ್ಳುವ ಪುರುಷ ಸಮಾಜದ ವ್ಯವಸ್ಥಿತ ಶೋಷಣೆ ಈಗಲೂ ನಡೆಯುತ್ತಿದೆ. ಈ ಪುರುಷ ಮನಸ್ಥಿತಿಯ ಹುನ್ನಾರವನ್ನು ಮೆಟ್ಟಿನಿಲ್ಲುವ ಅನಿವಾರ್ಯತೆಯನ್ನು ಇಂದಿನ ಆಧುನಿಕ ಮಹಿಳೆ ಅರ್ಥಮಾಡಿಕೊಳ್ಳಬೇಕಾಗಿದೆ.
ಈ ರೀತಿಯ ಪರೋಕ್ಷ ದಾಳಿಗೆ ಕಾರಣವೇನೆಂದರೆ, ಸಂವಿಧಾನದಲ್ಲಿ ಅನುಚ್ಛೇದ 14 ರ ಪ್ರಕಾರ ಮಹಿಳಾ ಸಮಾನತೆಗೆ ಅವಕಾಶ ನೀಡಿದ್ದು ಅಲ್ಲದೆ, ದೇಶದಲ್ಲಿ ಅನೇಕ ಮಹಿಳಾಪರ ಕಾನೂನುಗಳು ಪುರುಷ ಸಮಾಜದ ಅಹಂಕಾರಕ್ಕೆ ಸವಾಲಾಗಿವೆ. ಇದಕ್ಕಾಗಿ ಮಹಿಳೆಯರೆಲ್ಲರೂ ಇಂದು ಬೆರಳಿಕೆಯ ಕ್ಷೇತ್ರಗಳಲ್ಲಿ ತನ್ನ ಅಸ್ಮಿತೆಯ ಹೋರಾಟದ ನಡುವೆಯೂ ಸಾಧನೆ ಮಾಡುವ ಅತ್ಯದ್ಭುತವಾದ ಅವಕಾಶವನ್ನು ಸಂವಿಧಾನ ನಮಗೆ ಕೊಟ್ಟಿರುವುದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಸ್ಮಿತೆ ರಮಾಬಾಯಿಯೆಂದರೆ ತಪ್ಪಾಗಲಾರದು.
ಹೀಗೆ ಬಾಬಾ ಅವರು ಸವಿಂಧಾನದಲ್ಲಿ ಮಹಿಳಾ ಸಮಾನತೆಗೆ ಅವಕಾಶ ಮಾಡಿಕೊಟ್ಟ ಪರಿಣಾಮವಾಗಿ, ನಾವಿಂದು ಅನೇಕ ಕ್ಷೇತ್ರಗಳಲ್ಲಿ ಮಹಿಳಾ ಸಹಭಾಗಿತ್ವದೊಂದಿಗೆ, ಆಕೆಯ ಅಭಿವ್ಯಕ್ತಿಗೆ ಅವಕಾಶವಿರುವುದು ನಿರ್ವಿವಾದ. ಒಂದು ವೇಳೆ ಸಂವಿಧಾನದಲ್ಲಿ ಮಹಿಳಾ ಸಮಾನತೆ ಇಲ್ಲವಾಗಿದ್ದರೆ, ಆ ಶೋಷಣೆ ಘನಘೋರವಾಗಿರುತ್ತಿತ್ತು ಎನ್ನುವುದು ಕಹಿಸತ್ಯ.
ಮಹಿಳಾ ಸಮಾನತೆಯನ್ನು ಒಪ್ಪಿಕೊಳ್ಳದ ಪುರುಷ ಸಮಾಜ, ಬಹಿರಂಗವಾಗಿ ಆಕೆಯನ್ನು ತಳ್ಳಿ ಹಾಕಲು ಸಾಧ್ಯವಾಗದ ಕಾರಣ, ಆಕೆಯ ಅರಿವಿಗೆ ಬಾರದ ಹಾಗೆ, ಸಂಸ್ಕ್ರತಿಗಳ ನೆಪದಲ್ಲಿ, ಅವಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದೇ ಇಂದಿನ ಸಾಂಸ್ಕೃತಿಕ ರಾಜಕಾರಣದ ಭಾಗವಾಗಿದೆ.
ಈ ಕೆಲವು ನುಡಿಗಟ್ಟುಗಳನ್ನು ನೋಡಿ:
“ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಅಂದರೆ “ಹೆತ್ತ ತಾಯಿ – ಹೊತ್ತ ಭೂಮಿ ಸ್ವರ್ಗಕ್ಕಿಂತ ಮಿಗಿಲು” ಎಂದು ಹಾಡಿ ಹೊಗಳುವ ಈ ಸಮಾಜದಲ್ಲಿ, ಹಿಂದೆಂದಿಗಿಂತಲೂ ಹೆಚ್ಚು ವೃದ್ದಾಶ್ರಮಗಳು, ಅಭಲಾಶ್ರಮಗಳು ಸಾಂಸ್ಕೃತಿಕ ರಾಜಕಾರಣದ ಭಾಗವಾಗಿವೆ.
“ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ” – “ಎಲ್ಲಿ ಸ್ತ್ರೀ ಯರನ್ನು ಗೌರವಿಸುತ್ತಾರೋ , ಅಲ್ಲಿ ದೇವತೆಗಳು ವಾಸಮಾಡುತ್ತಾರೆ ” ಎನ್ನುವ ಮಂತ್ರವನ್ನು ಜಪಿಸುತ್ತಲೇ, ಈ ದೇಶದಲ್ಲಿ ಪ್ರತಿ 6 ಸೆಕೆಂಡಿಗೆ ಒಂದರಂತೆ ನಡೆಯುವ ಅತ್ಯಾಚಾರಗಳು, ಕ್ಷಣ ಕ್ಷಣಕ್ಕೂ ನಡೆಯುತ್ತಿರುವ ಮಹಿಳಾ ಮಾನಸಿಕ ದೌರ್ಜನ್ಯಗಳು ,ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಯುವ ಸಾಮೂಹಿಕ ಅತ್ಯಾಚಾರಗಳು, ಯಾಸಿಡ್ ದಾಳಿಗಳು ,ಲಿಂಗಬ್ರೂಣ ಹತ್ಯೆ, ಕುಸಿಯುತ್ತಿರುವ ಹೆಣ್ಣು ಮಕ್ಕಳ ಅನುಪಾತ ಇವೆಲ್ಲವಗಳ ಹಿಂದೆ, ಕಾಣದಂತೆ ಸಾಂಸ್ಕೃತಿಕ ರಾಜಕಾರಣ ಮಹಿಳೆಯರ ಮೇಲೆ ದಾಳಿ ಮಾಡುತ್ತಿದೆ.
“ಕಾರ್ಯೇಷು ದಾಸಿ: ದಾಸಿ ಎನ್ನುವ ಪದವೇ ದಾಸ್ಯದ ಸೂಚಕ ಮದುವೆ ಮತ್ತು ಮುಂತಾದ ವೇದಿಕೆಗಳ ಮೇಲೆ ಬಹಿರಂಗವಾಗಿ ಈ ಮಂತ್ರವನ್ನು ಪಠಣ ಮಾಡುವಾಗ, ಮಹಿಳೆಯರಿಂದಲೇ ಚಪ್ಪಾಳೆ ಹಾಕಿಸಿಕೊಳ್ಳುವ ಅಂಶಗಳ ಹಿಂದಿನ ಸಾಂಸ್ಕೃತಿಕ ರಾಜಕಾರಣ ಪ್ರಜ್ಞಾವಂತ ಮಹಿಳೆಯರನ್ನು ಕಂಡು ಕುಹಕವಾಡುತ್ತಿದೆ. ಹೀಗೆ ಶಾಸ್ತ್ರಗಳ ಮೂಲಕ ಮಹಿಳೆಯರನ್ನು ವ್ಯವಸ್ಥಿತವಾಗಿ ತುಳಿತಕ್ಕೆ ಒಳಪಡಿಸುವುದು ಈ ದೇಶದಲ್ಲಿ ಅತಿ ಹೆಚ್ಚು ಕಾಣಬಹುದು.
ಪೂಜೆ – ಪುನಸ್ಕಾರಗಳ ನೆಪದಲ್ಲಿ,
ವೃತ -ಆಚರಣೆಗಳ ನೆಪದಲ್ಲಿ,
ಕಲಶ -ಕುಂಭಗಳ ನೆಪದಲ್ಲಿ ,
ವಸ್ತ್ರಾಲಂಕಾರದ ನೆಪದಲ್ಲಿ ,
ವೈಧ್ಯವ್ಯದ ಸಾಂಪ್ರದಾಯಿಕ ಮೌಡ್ಯಗಳ ನೆಪದಲ್ಲಿ,
ಅನೇಕ ರೀತಿಯಲ್ಲಿ, ಮಹಿಳೆಯರ ಮೇಲೆ ಸಾಂಸ್ಕೃತಿಕ ದಾಳಿ ಹೆಗ್ಗಿಲ್ಲದೆ ನಡೆಯುತ್ತಿದೆ. ಈ ಎಲ್ಲಾ ಅಂಶಗಳಲ್ಲಿ ಮಹಿಳೆಯರೇ ಸಂತೋಷವಾಗಿ ಪಾಲ್ಗೊಂಡು ಅವುಗಳ ಪೋಷಣೆಯನ್ನು ಮಾಡುತ್ತಾ ಬಂದಿರುವುದು ವಿರ್ಪಯಾಸವಷ್ಟೆ ಅಲ್ಲ ಮನುಕುಲದ ದುರಂತವಲ್ಲದೇ ಇನ್ನೇನು.
ಕೊನೆಯ ಒಂದು ಉದಾಹರಣೆಯೊಂದಿಗೆ ಈ ವಿಷಯಕ್ಕೆ ಅಲ್ಪವಿರಾಮ ಹೇಳುತ್ತಾ, ಪ್ರತಿಯೊಂದು ವೇದಿಕೆಯ ಮೇಲೂ, ಸಾಧನೆಗೈದ ಪುರುಷನನ್ನು ಹೊಗಳುವಾಗ ” ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆಯೂ ಒಬ್ಬ ಮಹಿಳೆ ಇರುತ್ತಾಳೆ” ಎಂದು ಘಂಟಾಘೋಷವಾಗಿ ಹೊಗಳುವ ಮಾತಿನಲ್ಲಿಯೂ ಕೂಡ ಮಹಿಳೆಯನ್ನು ಪುರುಷನ ಹಿಂದೆಯೇ ಇಟ್ಟು ಸಂಭ್ರಮಿಸುತ್ತದೆ ಈ ಸಮಾಜ, ಅದರ ಬದಲಾಗಿ “ಪ್ರತಿಯೊಬ್ಬ ಯಶಸ್ವಿ ಪುರುಷನ ಜೊತೆಗೆ ಒಬ್ಬ ಮಹಿಳೆ ಇರುತ್ತಾಳೆ “ಎನ್ನುವ ಮಾತು ಎಲ್ಲಾದರೂ ಕೇಳಿದ ನಿದರ್ಶನವಿದೆಯೇ? ಇದನ್ನು ಯಾರಾದರೂ ಒಮ್ಮೆಯಾದರೂ ಪ್ರಶ್ನೆ ಮಾಡಿರುವರೆ ? ಖಂಡಿತವಾಗಿಯೂ ಇಲ್ಲ. ಇದನ್ನೇ ವ್ಯವಸ್ಥಿತ ಸಾಂಸ್ಕೃತಿಕ ರಾಜಕಾರಣ ಎನ್ನುವುದು. ಪುರುಷ ಪ್ರಧಾನವಾದ ಈ ಸಮಾಜ ಮಹಿಳಾ ಸಮಾನತೆಯನ್ನು ಹಿಂದೆಯೂ ಒಪ್ಪಿಕೊಂಡಿಲ್ಲ, ಮುಂದೆಯೂ ಒಪ್ಪಿಕೊಳ್ಳುವುದಿಲ್ಲ. ಹೀಗಿರುವಾಗ ಮಹಿಳಾ ಅಸ್ಮಿತೆಯ ಸಮಗ್ರ ನೆಲೆಗಳ ವಿಶ್ಲೇಷಣೆ ಒಂದು ಗ್ರಾಂಥಿಕ ಪದವಷ್ಟೆ. ಮಹಾತ್ಮ ಗಾಂಧೀಜಿಯವರು ಹೇಳಿದ ಹಾಗೆ, ನಿಮ್ಮೊಂದಿಗೆ “ಪ್ರತಿಯೊಬ್ಬ ಪುರುಷನೊಳಗೆ ಒಬ್ಬ ಮಹಿಳೆ ಇರಬೇಕು. ಪ್ರತಿಯೊಬ್ಬ ಮಹಿಳೆಯೊಳಗೆ ಒಬ್ಬ ಪುರುಷನಿರಬೇಕು. ಅಂದಾಗ ಮಾತ್ರ ಸಮಾಜದ ಮಹಿಳಾ ಸಮಾನತೆಯನ್ನು ಕಾಣಲು ಸಾಧ್ಯ” ಒಂದು ವೇಳೆ ಇದ್ದನ್ನು ಅದೇ ಸಾಂಸ್ಕೃತಿಕವಾಗಿ ವಿಷ್ಲೇಶಿಸಬಹುದಾದರೆ, “ಶಿವನ ಅರ್ಧನಾರೀಶ್ವರ” ಹಾಗೂ ಪಾರ್ವತಿ ಮಹಾಕಾಳಿ ಸ್ವರೂಪವನ್ನು ತಾಳಿದಾಗ , ಶಿವನ ಎದೆಯ ಮೇಲೆ ಆಕೆ ಪಾದವಿಟ್ಟಾಗ ಶಾಂತಳಾಗುವಳು ಎಂದು ದೇವಾನುವದೇವತೆಗಳು ಹೇಳಿದಾಗ, ಶಿವ ಆಕೆಯ ಪಾದಕ್ಕೆ ತನ್ನ ಎದೆಯೊಡ್ಡುವ ಉದಾರಹರಣೆಯನ್ನು ಎಲ್ಲಾದರೂ ಅಳವಡಿಸಿಕೊಂಡದನ್ನು ನಾವು ಕಂಡಿದ್ದೇವೆಯೇ ?
ಸಮಾಜದ ಅಸ್ಮಿತೆಯ ಭಾಗವಾಗಿರುವ ಹೆಣ್ಣು ತನ್ನ ಅಸ್ಮಿತೆಯ ನೆಲೆಗಾಗಿ ಹೋರಾಟಮಾಡುವ ಕಾಲ ಕೊನೆಯಾಗಲಿ ಎಂಬ ಸದಾಶಯ ನಮ್ಮೆಲ್ಲರಲ್ಲೂ ಬರಲಿ.
ಪುರುಷನೊಳಗೊಬ್ಬ ಸ್ತ್ರೀ
ಸ್ರ್ತೀಯೊಳಗೊಬ್ಬ ಪುರುಷ,
ಸಮ ಸಮಾಜದ ಪರಿಕಲ್ಪನೆಗೆ,
ಇದುವೇ ಸಾಕಾರ ರೂಪ…..
ಪರಂಪರೆಯ ಪಾರುಪತ್ಯದಲಿ ಕೊಂದುಬಿಡುವಂತಾಗಲಿ ಶೋಷಣೆಯು,
ಸ್ತ್ರೀ -ಪುರುಷರ ಸಹಭಾಗಿತ್ವದ ಸಾರಥ್ಯ, ಸಾಗುವಂತಾಗಲಿ
ಸರ್ವೋದಯದ ಸಹಬಾಳ್ವೆಯ ದಿಕ್ಕಿನಡೆಗೆ….
ಇರಿಯದಿರು ಮಹಿಳೆಯರ
ಮೌಲ್ಯಾಧಾರಿತ ಬದುಕನ್ನು,
ತನ್ನೊಡಲ ಗರ್ಭದಲಿ
ಯಮಯಾತನೆಯ ಅನುಭವಿಸಿ, ತಾರುತಮ್ಯವಿಲ್ಲದೆ ಸಾಕಿ-ಸಲಿಹಿದಳು ನಿನ್ನನ್ನು, ಕ್ಷಣಕೊಮ್ಮೆ ಕೊಲ್ಲದಿರು
ನೀನಾಕೆಯನ್ನು…..
ಬೌದ್ಧಿಕ ನೆಲೆಗಟ್ಟಿನಲ್ಲಿ ಗಟ್ಟಿಗೊಳ್ಳುತ್ತಿಹಳು ಇಂದು ಎದೆಗಿಳಿಸಿಕೊಂಡು-ಅರಗಿಸಿಕೊಂಡು ಬಿಡು,
ಆಕೆಯ ಪ್ರತಿಭೆಯ ಎಂಬ ಪ್ರಭಾವಳಿಯನ್ನು, ಅನಾವರಣಗೊಳ್ಳಲಿ ಆಕೆಯ ಅಸ್ಮಿತೆಯ ಭವ್ಯತೆಯ ಬದುಕಿಂದು….
ಸಂಸ್ಕೃತಿಯ ಹೆಸರಲಿ ಶೋಷಣೆಯಾ ಸಹಿಸಿ,
ಸುಡು ಬಿಸಿಲ ಸಂಸ್ಕಾರದಾ ಬಯಲಿನಲಿ, ಬರಿಗಾಲಲಿ ನಡೆಯುತ್ತಿಹಳು.
ಅದರ ಅರಿವೇ ಇಲ್ಲದ ಆಕೆ,
ತನಗೆ ತಾನೇ ಸಮಾಜಕ್ಕೆ ಸಮರ್ಪಿಸಿ
ನಗು-ನಗುತ್ತಲೇ ಸಾಂಸ್ಕ್ರತಿಕ ರಾಜಕಾರಣಕ್ಕೆ ಬಲಿಯಾಗುತ್ತಿಹಳು…
ಬಲಿಯಾಗತ್ತಿಹಳು…..
ಮೇಲಿನ ಎಲ್ಲಾ ಅಂಶಗಳನ್ನು ಒಪ್ಪುವಂತಹ ಸ್ತ್ರೀವಾದಿ ಪುರುಷರಿಗೆ ಅಭಿನಂದನೆಗಳು ಸಲಿಸುತ್ತಾ……..
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯಗಳು….
- ಶೈಲಜಾ ಹಿರೇಮಠ, ಗಂಗಾವತಿ