ಸರ್ಜಾಪುರದಿಂದ ಹೆಬ್ಬಾಳವರೆಗಿನ 36.59 ಕಿಮೀ ಉದ್ದದ ಮೆಟ್ರೋ 3A ಹಂತಕ್ಕೆ ಸಚಿವ ಸಂಪುಟ ಒಪ್ಪಿಗೆ

Most read





ಬೆಂಗಳೂರು: ಬೆಂಗಳೂರಿನ ಆಗ್ನೇಯ ಭಾಗದ ಸರ್ಜಾಪುರದಿಂದ ಉತ್ತರ ಭಾಗದ ಹೆಬ್ಬಾಳದವರೆಗಿನ ನಮ್ಮ ಮೆಟ್ರೋದ 3A ಹಂತಕ್ಕೆ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
 36.59 ಕಿಮೀ ಉದ್ದದ ಈ ಮಾರ್ಗದ ಯೋಜನೆ ಅನುಮೋದನೆಗಾಗಿ ಕೇಂದ್ರ ಸರಕಾರಕ್ಕೆ ಕಳುಹಿಸಲಾಗುತ್ತದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.50ರಷ್ಟು ಬಂಡವಾಳ ಹೂಡಲಿವೆ.
ಬಹುಶಃ 2025ರ ಡಿಸೆಂಬರ್‌ ವೇಳೆಗೆ ಅಥವಾ ಅದಕ್ಕೂ ಮುನ್ನವೇ ಅನುಮೋದನೆ ದೊರಕಿದರೂ ದೊರಕಬಹುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿ.ನ (ಬಿಎಂಆರ್‌ ಸಿಎಲ್)‌ ಅಧಿಕಾರಿಯೊಬ್ಬರು ಹೇಳುತ್ತಾರೆ.  ಅನುಮೋದನೆ ನೀಡಿದ ನಂತರ ಐದೂವರೆ ವರ್ಷ ಅಂದರೆ 2031 ರೊಳಗೆ ಪೂರ್ಣಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಒಮ್ಮೆ 3A ಹಂತದ ಮಾರ್ಗವೂ ಆರಂಭವಾದರೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ 258.79 ಕಿಮೀಗೆ ವಿಸ್ತರಣೆಯಾಗಲಿದೆ.

ಯೋಜನೆಯ ಒಟ್ಟು ಉದ್ದ 35.59 ಕಿಮೀ; ಸರ್ಜಾಪುರದಿಂದ ಹೆಬ್ಬಾಳವರೆಗೆ ಸಂಪರ್ಕ; ಎತ್ತರಿಸಿದ ಮಾರ್ಗ 22.14 ಕಿಮೀ; ಭೂಗತ ಮಾರ್ಗ 14.45 ಕಿಮೀ; ನಿಲ್ದಾಣಗಳು 17 ಎತ್ತರಿಸಿದ ಮತ್ತು 11 ಭೂಗತ ನಿಲ್ದಾಣಗಳಿರಲಿವೆ. ಇಬ್ಲೂರು, ಅಗರ, ಡೈರಿ ವೃತ್ತ, ಕೆ. ಆರ್.‌ ಸರ್ಕಲ್‌ ಮತ್ತು ಹೆಬ್ಬಾಳ ಸೇರಿ ಒಟ್ಟು 5 ಇಂಟರ್‌ ಚೇಂಜ್‌ ನಿಲ್ದಾಣಗಳಿರಲಿವೆ.
ಭೂ ಸ್ವಾದೀನ, ವಿಸ್ತೃತ ವರದಿ ಮತ್ತಿತರ ಯೋಜನಾ ಪೂರ್ವ ಚಟುವಟಿಕೆಗಳನ್ನು ಬಿಎಂಆರ್‌ ಸಿಎಲ್‌ ನಡೆಸಿದೆ ಎಂದು ತಿಳಿದು ಬಂದಿದೆ. ಕೇಂದ್ರ ಸರ್ಕಾರ ಅನುಮೋದನೆ ನೀಡಿದ ನಂತರವೇ ಭೂಮಿ ಅಗೆಯುವ ಕಾರ್ಯ ಆರಂಭವಾಗಲಿದೆ. ಈ ಕೆಂಪು ಯೋಜನೆಗೆ ಸಂಬಂಧಪಟ್ಟಂತೆ ರಾಜ್ಯ ಸಚಿವ ಸಂಪುಟ ಸಮ್ಮತಿ ಸೂಚಿಸಿರುವುದು ಪ್ರಮುಖ ಹೆಜ್ಜೆಯಾಗಿದೆ. ಸರ್ಕಾರದ ಈ ತೀರ್ಮಾನದಿಂದ ಕಾಮಗಾರಿಗೂ ಮುನ್ನ ಕೈಗೊಳ್ಳಬೇಕಾದ ಕೆಲಸಗಳನ್ನು ನಿರ್ವಹಿಸಲು ದಾರಿ ಮಾಡಿಕೊಟ್ಟಿದೆ ಎಂದು ಬಿಎಂಆರ್‌ ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ ರಾವ್‌ ತಿಳಿಸಿದ್ದಾರೆ.

36.59 ಕಿಮೀ ಮಾರ್ಗದ] ಯೋಜನಾ ವೆಚ್ಚ 28,045 ಕೋಟಿ ರೂ ಎಂದು ಅಂದಾಜು ಮಾಡಲಾಗಿದೆ. ಪ್ರತಿ ಕಿಲೋ ಮೀಗೆ 776 ಕೋಟಿ ರೂ,ಗಳಷ್ಟಿದೆ. ನಮ್ಮ ಮೆಟ್ರೋ ಇತಿಹಾಸಕ್ಕೆ ಹೋಲಿಸಿದರೆ ಈ ಹಿಂದಿನ ಪ್ರತಿ ಕಿಮೀ ಗೆ ತಗುಲಿದ ವೆಚ್ಚಕ್ಕೆ ಹೋಲಿಸಿದರೆ  ಇದು ಅತಿ ದೊಡ್ಡ ವೆಚ್ಚವಾಗಿದೆ. ಈ ಯೋಜನಾ ವೆಚ್ಚದ ಭಾಗದಲ್ಲಿ ಶೇ.35 ರಷ್ಟು ಅಂದರೆ 10,458 ಕೋಟಿ ರೂ.ಗಳಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆಯಲಾಗುತ್ತದೆ. ಉಳಿದ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒದಗಿಸುತ್ತವೆ. ಭೂಸ್ವಾದೀನಕ್ಕೆ ಅಂದಾಜು 5000 ಕೋಟಿ ರೂ ತಗುಲಲಿದ್ದು, ಇದನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಭರಿಸಲಿದೆ.


More articles

Latest article