Sunday, September 8, 2024

ವಿರ್ಮಶೆಯ ರಾಜಕಾರಣದ ಬಲಿಪಶು ಬಿ ಟಿ ಜಾಹ್ನವಿ : ಬರಗೂರು ಇಂಗಿತ

Most read

ಬೆಂಗಳೂರು: ‘ಕೂಗುಮಾರಿಗಳ ಕಾಲದಲ್ಲಿ ನಾವಿರುವುದರಿಂದ ಎಚ್ಚರದಿಂದ ಮಾತನಾಡಬೇಕು. ಪುಸ್ತಕವೊಂದು ಬರುವ ಮುಂಚೆನೆ ಅದರ ಬಗ್ಗೆ ವಿರ್ಮಶೆ ಶುರುವಾಗುದೇ ವಿಮರ್ಶೆ ರಾಜಕಾರಣ, ಕನ್ನಡ ಸಾಹಿತ್ಯದಲ್ಲಿಯೂ ಅಂತಹ ವಿಮರ್ಶೆಯ ರಾಜಕಾರಣ ಕೆಲಸ ಮಾಡಿದೆ. ಕೆಲವರನ್ನು ಮುಂದೆ ತರುವ ಕೆಲವರನ್ನು ಮರೆಮಾಚುವ ಈ ರಾಜಕಾರಣದ ಬಲಿಪಶು ಕತೆಗಾರ್ತಿ ಬಿ.ಟಿ.ಜಾಹ್ನವಿ’ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಇಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಕೌದಿ ಪ್ರಕಾಶನ ಹಾಗೂ ಬೀ ಕಲ್ಚರ್ ಆಯೋಜಿಸಿದ್ದ ಪ್ರಸಿದ್ಧ ಕಥೆಗಾರ್ತಿ ಬಿ ಟಿ ಜಾಹ್ನವಿ ಅವರ ‘ಒಬ್ರು ಸುದ್ಯಾಕೆ..ಒಬ್ರು ಗದ್ಲ್ಯಾಕೆ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಜಾಹ್ನವಿ ಅವರ ಕತೆಯಲ್ಲಿ ದಲಿತ‌ಲೋಕ ಮತ್ತು ಸ್ತ್ರೀ ಲೋಕವನ್ನು ಒಳಗೊಂಡಿದ್ದು, ಇಲ್ಲಿಯವರೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಬಂದಿರುವ ಸ್ತ್ರೀ ಲೋಕಕ್ಕಿಂತ ಬಹಳ ಭಿನ್ನವಾಗಿ ಕತೆಗಳು ಬಂದಿವೆ. ನನ್ನ ದೃಷ್ಟಿಯಲ್ಲಿ ಸ್ತ್ರೀ ವಾದ ಮತ್ತು ಸ್ತ್ರೀ ಸಂವೇದನೆ ಎರಡು ಬೇರೆ ಬೇರೆ’ ಎಂದು ಹೇಳಿದರು.

ಹಿರಿಯ ನ್ಯಾಯವಾದಿಗಳಾದ ಡಾ. ಸಿ ಎಸ್ ದ್ವಾರಕನಾಥ್ ಮಾತನಾಡಿ, ‘ಲಂಕೇಶರ “ದೂಷ್ಟಕೂಟ”ದಲ್ಲಿ ನಮ್ಮೊಂದಿಗೆ ಬಿ ಟಿ ಜಾಹ್ನವಿ ಇದ್ದರು’ ಎಂದು ಲಂಕೇಶ್ ಪತ್ರಿಕೆಯಲ್ಲಿನ ನೆನಪುಗಳನ್ನು ಮೆಲುಕು ಹಾಕಿದರು. ‘ಜಾಹ್ನವಿ ಅವರ ತಂದೆ ತಿಪ್ಪೇಸ್ವಾಮಿಯವರ ಮುಂದುವರಿದ ಭಾಗವಾಗಿ ಕಾಣುತ್ತಾರೆ’ ಎಂದರು.

ಪುಸ್ತಕದ ಕುರಿತು ಮಾತಾಡಿದ ವಿಮರ್ಶಕ, ಸಂಶೋಧಕ ಡಾ.ರವಿಕುಮಾರ್ ನೀಹ ಅವರು, ‘ಇಷ್ಟು ವರ್ಷಗಳ ಕಾಲ ಬಿ.ಟಿ.ಜಾಹ್ನವಿಯವರು ಬರೆಯುವುದನ್ನು ಬಿಟ್ಟಿದ್ದಕ್ಕೂ ಅವರ ಕಥಾಸಂಕಲನದ ಶೀರ್ಷಿಕೆಗೂ ಸಂಬಂಧವಿದೆ, ಸಾಹಿತ್ಯ ಲೋಕದ ಓದಿನ ರಾಜಕಾರಣ ಅವರ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದರು.

‘ಕನ್ನಡ ಸಾಹಿತ್ಯದಲ್ಲಿ ರೊಮ್ಯಾಂಟಿಸಮ್ ಜೊತೆಗೆ ದಲಿತ ಸಂವೇದನೆಯನ್ನು ಕೊಡುವುದು ಅಷ್ಟು ಸುಲಭವಲ್ಲ. ಓರ್ವ ದಲಿತ ಮಹಿಳೆಯಾಗಿ ಸಮಾಜದ ಮೇಲಿನ ದೊಡ್ಡ ಜವಬ್ದಾರಿ ಹೊತ್ತು ಸಮಾಜದ ಕಟ್ಟುಪಾಡುಗಳನ್ನು ಕತೆಯ ಮೂಲಕ ನಮ್ಮ ಮುಂದೆ ತಂದಿದ್ದಾರೆʼ ಎಂದು ಕತೆಗಾರ್ತಿ ದಯಾ ಗಂಗನಘಟ್ಟ ಹೇಳಿದರು.

‘ಒಬ್ಬ ಮಹಿಳಾ ಕತೆಗಾರ್ತಿಯಾಗಿ ಇಡೀ ಸಮುದಾಯದ ಜವಾಬ್ದಾರಿಯನ್ನು ಹೊತ್ತು ತನ್ನದೇ ಆದಂತಹ ರೀತಿಯಲ್ಲಿ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ ಎದುರಿಸುವ ಕತೆಗಳು ಹಾಗು ಹಸಿವಿನ ಕತೆ, ಅನ್ನಗಳಿಕೆ ಕತೆ, ವಿದ್ಯೆಗಳಿಕೆ ಕತೆ ಬಹಳ ಮುಖ್ಯವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಗಟ್ಟಿಗಿತ್ತಿಯಾಗಿರುವ ಹೆಣ್ಣಿನ ಪಾತ್ರಗಳು, ಕಿಲಾಡಿ ತನದ ಹೆಣ್ಣಿನ ಪಾತ್ರಗಳು, ಯಾವುದನ್ನೇ ಪ್ರಶ್ನೆ ಮಾಡದೇ ಸುಮ್ಮನೆ ಒಪ್ಪಿಕೊಳ್ಳುವ ಹೆಣ್ಣಿನ ಪಾತ್ರಗಳನ್ನು ಇವರ ಕತೆಗಳಲ್ಲಿ ಪದೇ ಪದೇ ಬರುತ್ತದೆ. ಇಡೀ ಪುಸ್ತಕದಲ್ಲಿ ‘ಹೋರಾಟ’ ಮತ್ತು ‘ನೆರೆಹಾವಳಿ’ ಎಂಬ ಕತೆಗಳು ನನ್ನನ್ನು ಮೌನವಾಗಿಸಿ ಬಿಟ್ಟವು ಎಂದರು.

ಕಥಾ ಸಂಕಲನದ ಲೇಖಕಿ ಬಿ ಟಿ ಜಾಹ್ನವಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, “ಬರೆಯುವುದೆ ಬೇಡ ಎಂದಾಗ ನನಗೆ ಸ್ಫೂರ್ತಿ ಕೊಟ್ಟಿದ್ದು, ಸಿದ್ದಲಿಂಗಯ್ಯ ಪ್ರಶಸ್ತಿ ಮತ್ತು ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ ಕಥಾ ಸಂಕಲನ ಪ್ರಕಟಣೆ” ಎಂದು ಕತೆರ್ಗಾತಿ ಬಿ ಟಿ ಜಾಹ್ನವಿ ಹೇಳಿದರು. ನಿಂತ ನೀರಿನಲ್ಲಿಯೆ ಕತೆ ಸೃಷ್ಟಿಸುತ್ತಿದ್ದ ನನ್ನಜ್ಜ, ಓದುವ ಗೀಳನ್ನು ಹಚ್ಚಿದ ನನ್ನಪ್ಪಾಜಿ, ಯಾವಾಗಲೂ ಪತ್ರಗಳನ್ನು ಬರೆಸುತ್ತಿದ್ದ ನನ್ನಮ್ಮ, ನನ್ನ ಪರಿಸರ ನನಗೆ ಲೇಖನಿ ಹಿಡಿಸಿ ಬರೆಸಿದವು. ಪಿ ಲಂಕೇಶ್ ನನಗೆ ಬರೆಯುವ ಅವಕಾಶವನ್ನು ಕೊಟ್ಟು ನನ್ನಂತಹ ಅನೇಕರನ್ನು ಬರಹಗಾರರನ್ನಾಗಿ ಮಾಡಿದರು ಎಂದು ನೆನೆಸಿಕೊಂಡರು.

More articles

Latest article