ಮೈಸೂರು : ಥೈಲ್ಯಾಂಡ್ ಪ್ರವಾಸ ಕರೆದೊಯ್ಯುವ ಹೆಸರಿನಲ್ಲಿ ಹಲವಾರು ಗ್ರಾಹಕರಿಗೆ ಬಿಜೆಪಿ ಮುಖಂಡ ಪವನ್ ಪ್ರಭು ಎಂಬಾತ ಲಕ್ಷಾಂತರ ರೂ. ವಂಚಿಸಿರುವ ಆರೋಪ ಕೇಳಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಈತ ಪವನ್ ಪ್ರಭು ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ನಲ್ಲಿ ವಾಸವಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈತ ಪಿರಿಯಾಪಟ್ಟಣದ 6 ಮಂದಿ, ಮೈಸೂರಿನ ಇಬ್ಬರು , ಕೊಡಗಿನ ಓರ್ವರಿಗೆ ಪ್ರವಾಸದ ನೆಪದಲ್ಲಿ ವಂಚನೆ ಎಸಗಿದ್ದಾನೆ. ಪ್ರತಿಯೊಬ್ಬರಿಂದಲೂ ರೂ. 5 ಲಕ್ಷಕ್ಕೂ ಹೆಚ್ಚಿನ ಹಣವನ್ನು ಸುಲಿಗೆ ಮಾಡಿದ್ದಾನೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಪ್ರಭಾವಿ ರಾಜಕೀಯ ನಾಯಕರ ಜೊತೆ ಪೋಟೋ ತೆಗೆಸಿಕೊಂಡು ಗ್ರಾಹಕರನ್ನು ವಂಚಿಸುತ್ತಿದ್ದ. ಹಣ ನೀಡಿದ್ದರೂ ಪ್ರವಾಸ ಆಯೋಜನೆ ಮಾಡದೆ ಹಿಂದೇಟು ಹಾಕುತ್ತಿದ್ದ. ಕೇಳಿದರೆ ಇಲ್ಲ ಸಲ್ಲದ ಸಬೂಬು ಹೇಳಿ ಪವನ್ ಪ್ರಭು ತಪ್ಪಿಸಿಕೊಳ್ಳುತ್ತಿದ್ದ. ಇದರಿಂದ ಬೇಸತ್ತ ಪ್ರವಾಸಿಗರು ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ. ಆಗ ಆತ ಮೊಬೈಲ್ ಸ್ಚಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಹಣ ವಾಪಸ್ ಕೊಡುತ್ತಿಲ್ಲ. ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.