ನವದೆಹಲಿ: ಮಾನವ-ಆನೆ ಸಂಘರ್ಷ ತಡೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು, ಸ್ವಯಂ ಪ್ರೇರಿತವಾಗಿ ಮುಂದೆ ಬರುವ ಅರಣ್ಯವಾಸಿಗಳ ಸ್ಥಳಾಂತರಕ್ಕೆ ಕಾಂಪಾ ನಿಧಿಯಿಂದ 800 ಕೋಟಿ ರೂ. ಮಂಜೂರು ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಂಡ್ರೆ, ಪರಿಹಾರಾತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ಕಾಂಪಾ)ದಡಿ ರಾಜ್ಯಕ್ಕೆ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ರಾಜ್ಯದಲ್ಲಿ 6395 ಆನೆಗಳಿದ್ದು, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೂರಾರು ಆನೆಗಳಿವೆ. ಇವುಗಳ ದಾಳಿಯಿಂದ ಸಾವು ನೋವು ಸಂಭವಿಸುತ್ತಿದೆ. ಹೀಗಾಗಿ ಕಾಡಿನಿಂದ ನಾಡಿಗೆ ಆನೆಗಳು ಬಾರದಂತೆ ನಿಯಂತ್ರಿಸಲು ಈಗಾಗಲೇ .393 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಿದ್ದು, ಪ್ರಸ್ತುತ 200 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ 300 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಾಡಿದಲ್ಲಿ ಆನೆ ಹಾವಳಿ ನಿಯಂತ್ರಿಸಬಹುದಾಗಿದೆ. ಹೀಗಾಗಿ ಕಾಂಪಾ ನಿಧಿಯಲ್ಲಿರುವ ರಾಜ್ಯದ ಹಣದಲ್ಲಿ 500 ಕೋಟಿ ರೂ.ಗಳನ್ನು ಮಂಜೂರು ಮಾಡುವಂತೆ ಭೂಪೇಂದ್ರ ಯಾದವ್ ಅವರಿಗೆ ಬೇಡಿಕೆ ಸಲ್ಲಿಸಿ ಮನವರಿಕೆ ಮಾಡಿಕೊಡಲಾಗಿದ್ದು, ಅವರು ಹಣ ಪರಿಗಣಿಸುವ ಭರವಸೆ ನೀಡಿದ್ದಾರೆ ಎಂದರು.
ಕುದುರೆಮುಖ ಅರಣ್ಯವಾಸಿಗಳ ಸ್ಥಳಾಂತರಕ್ಕೆ 300 ಕೋಟಿ ರೂ.ಗೆ ಬೇಡಿಕೆ:
ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ 2005ರಿಂದ ಇಲ್ಲಿವರೆಗೆ 356 ಕುಟುಂಬಗಳು ಸ್ಥಳಾಂತರಗೊಂಡಿವೆ. ರಾಜ್ಯ ಸರ್ಕಾರ ಇವರಿಗೆ ವಿಶೇಷ ಪ್ಯಾಕೇಜ್ ನೀಡಿ 142 ಕೋಟಿ ರೂ. ಪರಿಹಾರ ನೀಡಿದೆ. 688.57 ಎಕರೆ ಭೂಮಿ ಅರಣ್ಯ ಇಲಾಖೆಗೆ ಲಭಿಸಿದೆ ಎಂದರು.
ಆದರೆ ಇನ್ನೂ 42 ಗ್ರಾಮಗಳು, 108 ಜನವಸತಿಗಳು, 1382 ಕುಟುಂಬಗಳಿದ್ದು ಇಲ್ಲಿ ಒಟ್ಟಾರೆ 5177 ಜನರು ವಾಸಿಸುತ್ತಿದ್ದಾರೆ. ಇವರಲ್ಲಿ ಹಲವರು ಸ್ವಯಂ ಪ್ರೇರಿತವಾಗಿ ಸ್ಥಳಾಂತರಕ್ಕೆ ಸಮ್ಮತಿಸಿದ್ದಾರೆ. 300 ಕುಟುಂಬಗಳನ್ನು ಸ್ಥಳಾಂತರಿಸಿದರೆ 597 ಎಕರೆ ಅರಣ್ಯ ಇಲಾಖೆಗೆ ಹೆಚ್ಚುವರಿಯಾಗಿ ಲಭಿಸುತ್ತಿದೆ. ಇದಕ್ಕೆ ಕ್ಯಾಂಪಾದಿಂದ 300 ಕೋಟಿ ರೂ. ನೀಡಿದರೆ ಸ್ಥಳಾಂತರ ಕಾರ್ಯ ಸುಗಮವಾಗುತ್ತದೆ, ಮುಖ್ಯವಾಹಿನಿಗೆ ಅವರನ್ನು ತರಲು ನೆರವಾಗುತ್ತದೆ ಎಂಬ ವಿಷಯವನ್ನು ಭೂಪೇಂದ್ರಯಾದವ್ ಅವರಿಗೆ ತಿಳಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಕುದುರೆಮುಖಕ್ಕೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರು.
ಇದರ ಜೊತೆಗೆ ರಾಜ್ಯದ ಎತ್ತಿನಹೊಳೆ ಯೋಜನೆ, ಕಳಸ ಬಂಡೂರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.