ಬೆಂಗಳೂರು: ಮುಚ್ಚಿಹೋಗಿರುವ ಚರಂಡಿ ಮತ್ತು ಮ್ಯಾನ್ ಹೋಲ್ ಗಳನ್ನು ಸ್ವಚ್ಚಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ‘ಬ್ಯಾಂಡಿಕೂಟ್‘ ರೋಬೋಟ್ ಎಂಬ ಯಂತ್ರಗಳನ್ನು ಬಳಸಲು ತೀರ್ಮಾನಿಸಿದೆ. ಈ ಆಧುನಿಕ ತಂತ್ರಜ್ಞಾನದ ಸ್ವಚ್ಚತಾ ರೋಬೋಟ್ ಗಳನ್ನು ಚೆನ್ನೈ ತಿರುವನಂತಪುರಂ ಮೊದಲಾದ ಪಾಲಿಕೆಗಳು ಬಳಸುತ್ತಿವೆ. ಚರಂಡಿಗಳನ್ನು ಸ್ವಚ್ಚಗೊಳಿಸಲು ಮಾನವರ ಬಳಕೆ ಕಡಿಮೆ ಮಾಡಿ ರೋಬೋಟ್ ಗಳನ್ನು ಬಳಸುವುದು ಪ್ರಮುಖ ಉದ್ದೇಶವಾಗಿದೆ.
ಇತ್ತೀಚೆಗೆ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ಎಂ.ಮಹೇಶ್ವರ್ ರಾವ್ ಅವರು ಮಾತನಾಡಿ ಒಳಚರಂಡಿಗಳನ್ನು ಸ್ವಚ್ಚಗೊಳಿಸಲು ‘ಬ್ಯಾಂಡಿಕೂಟ್‘ ರೋಬೋಟ್ ಗಳನ್ನು ಬಳಸಲು ನಿರ್ಧರಿಸಲಾಗಿದೆ. ಈ ರೋಬೋಟ್ ಗಳನ್ನು ವಿವಿಧ ನಗರಗಳಲ್ಲಿ ಬಳಕೆ ಮಾಡಲಾಗುತ್ತಿದ್ದು, ಫಲಿತಾಂಶ ಉತ್ತಮವಾಗಿದೆ ಎಂದರು.
ಈ ಸೆಮಿ ಸ್ವಯಂಚಾಲಿತ ರೋಬೋಟ್ ಗಳು ನೇರವಾದ ಚರಂಡಿಗಳಲ್ಲಿರುವ ತ್ಯಾಜ್ಯ ವಸ್ತುಗಳನ್ನು ಹೀರಿಕೊಳ್ಳುವ ಮೂಲಕ ಸ್ವಚ್ಚಗೊಳಿಸುತ್ತವೆ. ಈ ನಿಟ್ಟಿನಲ್ಲಿ ಪಾಲಿಕೆಯು ಈ ರೋಬೋಟ್ ಗಳ ಕಾರ್ಯವೈಖರಿ ಮತ್ತು ತಂತ್ರಜ್ಞಾನವನ್ನು ಪರಿಶೀಲಿಸುತ್ತಿದೆ. ಡ್ರೋಣ್ ಮಾದರಿಯಲ್ಲಿ ರೋಬೋಟ್ ಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ.
‘ಬ್ಯಾಂಡಿಕೂಟ್‘ ಹೇಗೆ ಕೆಲಸ ಮಾಡಲಿದೆ?
‘ಬ್ಯಾಂಡಿಕೂಟ್‘ ರೋಬೋಟ್ ಯಂತ್ರವು ಮುಚ್ಚಿಹೋಗಿರುವ ಚರಂಡಿಗಳು ಮತ್ತು ಮ್ಯಾನ್‌ಹೋಲ್‌ಗಳನ್ನು ಸ್ವಚ್ಚಗೊಳಿಸುವಲ್ಲಿ ಯಶಸ್ವಿಯಾಗಿವೆ. ಕೇರಳದ ಪ್ರಮುಖ ಸ್ಟಾರ್ಟ್ ಅಪ್ ಆಗಿರುವ ಜೆನ್ ರೋಬೋಟಿಕ್ ಇನ್ನೋವೇಶನ್ಸ್, ‘ಬ್ಯಾಂಡಿಕೂಟ್ ರೋಬೋಟ್ ಅನ್ನು ಆವಿಷ್ಕಾರಗೊಳಿಸಿದೆ. ದೇಶದ ವಿವಿಧ ಪಾಲಿಕೆಗಳು ಈ ಸಂಸ್ಥೆಯಿಂದ ರೋಬೋಟ್ ಗಳನ್ನು ಖರೀದಿಸುತ್ತಿವೆ.
50 ಕೆಜಿ ತೂಗುವ ಬ್ಯಾಂಡಿಕೂಟ್ ರೋಬೋಟಿಕ್ ಸ್ಕ್ಯಾವೆಂಜರ್ ಅನ್ನು ಸುಗಮವಾಗಿ ಸಾಗಿಸಲು ನಾಲ್ಕು ರೋಬೋಟಿಕ್ ಕಾಲುಗಳನ್ನು ಹೊಂದಿರುತ್ತದೆ. ಇದು 360 ಡಿಗ್ರಿ ಚಲನೆಯನ್ನು ಹೊಂದಿರುತ್ತದೆ. ರೋಬೋಟಿಕ್ ತೋಳನ್ನು ಹೊಂದಿದ್ದು, ಇದು ಮ್ಯಾನ್‌ಹೋಲ್ ಗಳ ಮೂಲೆ ಮೂಲೆಗಳಿಂದ ಘನ ತ್ಯಾಜ್ಯವನ್ನು ಹೊರತೆಗೆದು ಬಕೆಟ್‌ನಲ್ಲಿ ಸಂಗ್ರಹಿಸುತ್ತದೆ.
ಬ್ಯಾಂಡಿಕೂಟ್ ಗಳ ಬೆಲೆ ರೂ.15 ಲಕ್ಷ ದಿಂದ ರೂ. 45 ಲಕ್ಷ ವರೆಗೆ ಸಾಮರ್ಥ್ಯದ ಮೇಲೆ ನಿಗದಿಯಾಗಿದೆ. ಬೃಹತ್ ಮತ್ತು ಮಿನಿ ಆವೃತ್ತಿಯಲ್ಲಿ ಲಭ್ಯವಿದೆ. ಬ್ಯಾಂಡಿಕೂಟ್ ಬ್ಯಾಟರಿ ಮೂಲಕ ಕಾರ್ಯ ನಿರ್ವಹಿಸಲಿದೆ. ಎರಡು ಲಿಥಿಯಂ ಬ್ಯಾಟರಿಗಳನ್ನು ಅಳವಡಿಸಲಾಗಿದ್ದು ವೇಗವಾಗಿ ಅಂದರೆ 15 ನಿಮಿಷಗಳಲ್ಲಿ ಚಾರ್ಜಿಂಗ್ ಮಾಡಬಹುದಾಗಿದೆ.15 ನಿಮಿಷಗಳ ಚಾರ್ಜಿಂಗ್ ಮಾಡಿದರೆ ಸುಮಾರು 3 ಗಂಟೆ ಕಾಲ ಕಾರ್ಯನಿರ್ವಹಿಸಬಹುದಾಗಿದೆ. ಬ್ಯಾಟರಿ ಜತೆಗೆ ಸೌರಶಕ್ತಿಯೊಂದಿಗೂ ಕಾರ್ಯ ನಿರ್ವಹಿಸಲಿದೆ.