ಹೊಸದಿಲ್ಲಿ: ವ್ಯಾಪಕ ಹಿಂಸಾಚಾರದ ನಂತರ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಪಡೆದು ಈಗ ಭಾರತದಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ. ಈ ನಡುವೆ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಗೆ ರಾಷ್ಟ್ರಪತಿ ಮಹಮದ್ ಶಹಾಬುದ್ದೀನ್ ಹಸಿರು ನಿಶಾನೆ ನೀಡಿದ್ದು, ಬಾಂಗ್ಲಾ ದೇಶದ ಮೂವರು ಪ್ರಮುಖ ಗಣ್ಯರು ಹೊಸ ಸರ್ಕಾರದಲ್ಲಿ ಪ್ರಧಾನ ಪಾತ್ರ ವಹಿಸಲಿದ್ದಾರೆ.
ಸೋಮವಾರ ರಾಷ್ಟ್ರಪತಿ ಮಹಮದ್ ಶಹಾಬುದ್ದೀನ್ ಕರೆದಿದ್ದ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು, ಸೇನೆ ವಾಯುಪಡೆ ನೌಕದಳದ ಮುಖ್ಯಸ್ಥರು, ನಾಗರಿಕ ಸಮಾಜದ ಪ್ರಮುಖರು ಭಾಗವಹಿಸಿದ್ದರು.
ಬಾಂಗ್ಲಾದೇಶದಲ್ಲಿ ರಚನೆಯಾಗಲಿರುವ ಮಧ್ಯಂತರ ಸರ್ಕಾರದಲ್ಲಿ ಮೂವರು ಪ್ರಮುಖ ಗಣ್ಯರು ಪ್ರಧಾನ ಪಾತ್ರ ವಹಿಸುವ ಸಾಧ್ಯತೆ ಇದ್ದು ನೊಬೆಲ್ ಪ್ರಶಸ್ತಿ ವಿಜೇತ ಮಹಮದ್ ಯೂನುಸ್, ಮಾಜಿ ಪ್ರಧಾನಿ ಖಲೀದಾ ಜಿಯಾ ಮತ್ತು ವಿದ್ಯಾರ್ಥಿ ಸಂಘಟನೆ ಮುಖ್ಯಸ್ಥ ನಾಹಿದ್ ಇಸ್ಲಾಮ್ ಹೆಸರುಗಳು ಕೇಳಿಬರುತ್ತಿವೆ.
ಖಾಲೀದಾ ಜಿಯಾ: 1991ರಲ್ಲಿ ಬಾಂಗ್ಲಾದೇಶದ ಮೊಟ್ಟಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ನಡೆಸಿದ ಖಾಲೀದಾ ಜಿಯಾ ಅವರಿಗೆ ಈಗ 78 ವರ್ಷ ವಯಸ್ಸು. ಖಾಲೀದಾ ಅವರ ಆರೋಗ್ಯ ಸರಿ ಇಲ್ಲದೇ ಇದ್ದರೂ ಈಗ ಮಧ್ಯಂತರ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.
ಖಾಲೀದಾ ಜಿಯಾ 1996ರಲ್ಲಿ ಎರಡನೇ ಬಾರಿಗೆ ಪುನರಾಯ್ಕೆಯಾದರೂ, ಅಂದಿನ ಪ್ರಮುಖ ವಿರೋಧಪಕ್ಷಗಳು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದವು. ಶೇಖ್ ಹಸೀನಾ ಅವರ ಅವಾಮಿ ಲೀಗ್ ಮತ್ತು ಇತರ ಪಕ್ಷಗಳ ಪ್ರತಿರೋಧದಿಂದಾಗಿ ಖಾಲೀದಾ ಜಿಯಾ ಎರಡನೇ ಅವಧಿಗೆ ಕೇವಲ 12 ದಿನಗಳ ಕಾಲ ಪ್ರಧಾನಿಯಾಗಿದ್ದರು. ನಂತರ ಬಾಂಗ್ಲಾದೇಶದಲ್ಲಿ ಮತ್ತೆ ಚುನಾವಣೆ ನಡೆದಿದ್ದು, ಶೇಖ್ ಹಸೀನಾ ಗೆದ್ದು ಪ್ರಧಾನಿಯಾಗಿದ್ದರು.
ನಂತರ ಐದು ವರ್ಷಗಳ ಬಳಿಕ ಖಾಲೀದಾ ಜಿಯಾ ಮತ್ತೆ ಚುನಾವಣೆಗಳಲ್ಲಿ ಗೆದ್ದು ಪ್ರಧಾನಿಯಾಗಿದ್ದರು. 2007ರಲ್ಲಿ ಜಿಯಾ ಅವರನ್ನು ಭ್ರಷ್ಟಾಚಾರ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಶಿಕ್ಷೆಗೆ ಒಳಗಾದರು. ಆರೋಗ್ಯದ ಸಮಸ್ಯೆಗಳಿಂದಾಗಿ ಅವರು ಜೈಲುವಾಸದ ಬಹುತೇಕ ಅವಧಿಯನ್ನು ಆಸ್ಪತ್ರೆಯಲ್ಲೇ ಕಳೆದಿದ್ದರು.
ಮಧ್ಯಂತರ ಸರ್ಕಾರದಲ್ಲಿ ತೀವ್ರ ಅನಾರೋಗ್ಯದಿಂದ ಖಾಲೀದಾ ಜಿಯಾ ಪ್ರಧಾನಿಯಾಗಿ ನೇಮಕಗೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ.
ಮಹಮದ್ ಯೂನುಸ್: ಬಾಂಗ್ಲಾದೇಶದ ವಿಶ್ವಪ್ರಸಿದ್ಧ ಆರ್ಥಿಕ ತಜ್ಞ ಮಹಮದ್ ಯೂನುಸ್ ಅವರ ಹೆಸರು ಪ್ರಧಾನಿ ಹುದ್ದೆಗೆ ಬಲವಾಗಿ ಕೇಳಿಬರುತ್ತಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳೂ ಸಹ ಯೂನುಸ್ ಅವರೇ ಮಧ್ಯಂತರ ಸರ್ಕಾರದಲ್ಲಿ ಪ್ರಧಾನಿಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅಮೆರಿಕದಲ್ಲಿ ಪಿಎಚ್ ಡಿ ಪದವಿ ಪಡೆದ ನಂತರ ಬಾಂಗ್ಲಾದೇಶಕ್ಕೆ ಹಿಂದಿರುಗಿದ ಯೂನುಸ್ ಚಿತ್ತಗಾಂಗ್ ವಿಶ್ವವಿದ್ಯಾಲಯದಲ್ಲಿ ವಿಭಾಗ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು.
1983ರಲ್ಲಿ ಯೂನುಸ್ ಗ್ರಾಮೀಣ ಬ್ಯಾಂಕ್ ಸ್ಥಾಪಿಸಿದರು. ಬ್ಯಾಂಕ್ ಮೂಲಕ ತಲಾ 2000 ರುಪಾಯಿಗಳ ಸಣ್ಣ ಸಾಲ ಸೌಲಭ್ಯವನ್ನುಗ್ರಾಮೀಣ ಮಹಿಳೆಯರಿಗೆ ಕಲ್ಪಿಸಲಾಯಿತು. ಬ್ಯಾಂಕ್ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತ ಬಂದಿತು. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಗ್ರಾಮೀಣ ಭಾಗದಲ್ಲಿ ದೊಡ್ಡ ಮಟ್ಟದ ಆರ್ಥಿಕ ಕ್ರಾಂತಿಯೇ ಉಂಟಾಯಿತು. ಲಕ್ಷಾಂತರ ಜನರು ಬಡತನದ ರೇಖೆಯಿಂದ ಹೊರಗೆ ಬರಲು ಸಾಧ್ಯವಾಯಿತು. ಇದಕ್ಕಾಗಿ ಬಡವರ ಬ್ಯಾಂಕರ್ ಎಂದು ಯೂನುಸ್ ಅವರನ್ನು ಕರೆಯಲಾಯಿತು. ಯೂನುಸ್ ಅವರು ಆರಂಭಿಸಿದ ಮಾದರಿಯನ್ನು ಭಾರತ ಸೇರಿದಂತೆ ನೂರಕ್ಕೂ ಹೆಚ್ಚು ದೇಶಗಳು ಅಳವಡಿಸಿಕೊಂಡವು.
ಆದರೆ ಮಹಮದ್ ಯೂನುಸ್ ಅವರ ಮೇಲೂ ಭ್ರಷ್ಟಾಚಾರದ ಆರೋಪಗಳನ್ನು ಎಸಗಲಾಯಿತು. 83 ವರ್ಷದ ಯೂನುಸ್ ಇದೆಲ್ಲವೂ ರಾಜಕೀಯ ಪ್ರೇರಿತ ಎಂದು ಬಣ್ಣಿಸಿದರು. ಕಾರ್ಮಿಕ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಆರು ತಿಂಗಳ ಸೆರೆವಾಸವನ್ನೂ ವಿಧಿಸಲಾಯಿತು. ಆದರೆ ನಂತರ ಅವರು ಈ ಪ್ರಕರಣದಲ್ಲಿ ಜಾಮೀನು ಪಡೆದರು.
ನಾಹಿದ್ ಇಸ್ಲಾಂ: ಸಮಾಜಶಾಸ್ತ್ರ ವಿದ್ಯಾರ್ಥಿ ನಾಹಿದ್ ಇಸ್ಲಾಂ ʻತಾರತಮ್ಯದ ವಿರುದ್ಧ ವಿದ್ಯಾರ್ಥಿಗಳುʼ ಚಳವಳಿಯ ರಾಷ್ಟ್ರೀಯ ಸಂಯೋಜಕರಾಗಿ ಪ್ರತಿಭಟನೆಯ ನೇತೃತ್ವ ವಹಿಸಿದವರು. ಸರ್ಕಾರದ ಉದ್ಯೋಗದಲ್ಲಿ ಇದ್ದ ಮೀಸಲಾತಿ ವ್ಯವಸ್ಥೆ ಬದಲಾಯಿಸಬೇಕು ಎಂದು ಆಗ್ರಹಿಸಿ ಈ ಚಳವಳಿ ನಡೆಯಿತು.
ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರದ ವಿರುದ್ಧ ಅಕ್ಷರಶಃ ಸಮರವನ್ನೇ ಸಾರಿದ್ದ ನಾಹಿದ್ ಇಸ್ಲಾಂ ಮೀಸಲಾತಿ ಬದಲಾವಣೆಯಾಗುವಲ್ಲಿ ಪ್ರಧಾನ ಪಾತ್ರ ವಹಿಸಿದರು. ಆದರೆ ಬೇಡಿಕೆ ಈಡೇರಿದರೂ ಪ್ರತಿಭಟನೆಗಳು ನಿಲ್ಲಲಿಲ್ಲ. ಶೇಖ್ ಹಸೀನಾ ರಾಜೀನಾಮೆ ಕೊಡಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆಗಳನ್ನು ಮುಂದುವರೆಸಿದರು. ಪ್ರತಿಭಟನೆಗಳು ಹಿಂಸೆಗೆ ತಿರುಗಿ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ಭದ್ರತಾ ಸಿಬ್ಬಂದಿ ಹತರಾದರು.
ಕಳೆದ ಜುಲೈನಲ್ಲಿ ನಾಹಿದ್ ಅವರನ್ನು ಬಿಳಿಯ ಬಣ್ಣದ ದಿರಿಸು ತೊಟ್ಟಿದ್ದ 25 ಮಂದಿ ಆಗಂತುಕರು ಅಪಹರಣ ಮಾಡಿದ್ದರು. ಎರಡು ದಿನಗಳ ನಂತರ ಪುರ್ಬಾಚಲ್ ಬ್ರಿಡ್ಜ್ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದರು. ನಂತರ ಅವರನ್ನು ಮತ್ತೊಮ್ಮೆ ಅಪರಿಹರಿಸಲಾಗಿತ್ತು. ಬಾಂಗ್ಲಾ ಗುಪ್ತಚರ ಇಲಾಖೆಯ ಸಿಬ್ಬಂದಿಯೇ ಅಪಹರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.