ಕೋಲಾರ: ಛಾಯಾಗ್ರಾಹಕ ಏಕ ಕಾಲಕ್ಕೆ ಕಲಾವಿದ, ತಂತ್ರಜ್ಞ ಮತ್ತು ಇತಿಹಾಸಕಾರ ಕೂಡ ಆಗಿರುತ್ತಾನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ಕೋಲಾರ ಜಿಲ್ಲಾ ಮತ್ತು ತಾಲ್ಲೂಕು ಛಾಯಾಗ್ರಾಹಕರ ಮತ್ತು ವಿಡಿಯೊಗ್ರಾಫರ್ ಗಳ ಸಂಘ ಆಯೋಜಿಸಿದ್ದ “ವಿಶ್ವ ಛಾಯಾಗ್ರಹಣ ದಿನಚರಣೆ” ಯನ್ನು ಉದ್ಘಾಟಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಮಾತನಾಡಿದರು.
ಏಕೆಂದರೆ ಛಾಯಾಗ್ರಹಣ ಎನ್ನುವುದೇ ಕಲೆ, ವಿಜ್ಞಾನ ತಂತ್ರಜ್ಞಾನದ ಸಮಾಗಮ ಎಂದರು.
ಫೋಟೋ ತೆಗೆಸಿಕೊಂಡವರಿಗೆ, ಫೋಟೋ ತೆಗೆದವರಿಗೆ ಸಾವು ಇರಬಹುದು. ಆದರೆ ಫೋಟೋಗಳು ಚಿರಂಜೀವಿ. ಫೋಟೋಗಳಿಗೆ ಸಾವಿಲ್ಲ . ಹೀಗಾಗಿ ಛಾಯಾಚಿತ್ರಗಳು ಇತಿಹಾಸವನ್ನು ಹೇಳುತ್ತವೆ. ಛಾಯಾಗ್ರಾಹಕ ಕ್ಲಿಕ್ಕಿಸಿದ್ದು ಇತಿಹಾಸವಾಗಿ ದಾಖಲಾಗುತ್ತದೆ ಎಂದು ವಿವರಿಸಿದರು.
ನನ್ನ ತಾತ, ನನ್ನ ಅಜ್ಜಿ ಹೇಗಿದ್ದರು ಎನ್ನುವುದನ್ನು ನಾನು ನನ್ನ ಮಕ್ಕಳಿಗೆ ತಿಳಿಸಲು, ಅವರ ಬದುಕನ್ನು ಅರ್ಥ ಮಾಡಿಸಲು ಬಹಳ ಸುಲಭವಾದ ಮಾರ್ಗ ಎಂದರೆ ಆ ಕಾಲದಲ್ಲಿ ತೆಗೆದ ಫೋಟೋಗಳು.
ಅಜ್ಜ ಅಜ್ಜಿಯರು ಮೊಮ್ಮಕ್ಕಳು ಅಂಬೆಗಾಲಿಡುವ ಫೋಟೋವನ್ನು ನೋಡಿ, ಸಣ್ಣ ಮರದ ಕುದುರೆ ಮೇಲೆ ಕುಳಿತು ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ನೋಡಿ ಪಡುವ ಸಂಭ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ಒಂದು ಫೋಟೋ ಒಂದು ಕತೆ, ಕಾದಂಬರಿಯನ್ನೇ ಹೇಳುವ ಶಕ್ತಿ ಇರುತ್ತದೆ. ಸಾವಿರ ಪದಗಳ ಒಂದು ಲೇಖನದಲ್ಲಿ ವಿವರಿಸಬಹುದಾಗಿದ್ದನ್ನು ಒಂದು ಕ್ಲಿಕ್ ನಲ್ಲಿ ಹೇಳಬಹುದು ಎಂದರು.
ಹೀಗಾಗಿ ಛಾಯಾಗ್ರಾಹಕನ ಒಳಗಣ್ಣು ಸದಾ ತೆರೆದಿರುತ್ತದೆ. ನಾವು ಬರೆದ ಪ್ರತೀ ಪದಗಳು, ಲೇಖನಗಳು ಹಳತಾಗುತ್ತವೆ. ಆದರೆ, ಛಾಯಾಗ್ರಾಹಕರ ಪ್ರತೀ ಕ್ಲಿಕ್ ಗಳೂ ಇತಿಹಾಸ, ಚರಿತ್ರೆಗೆ ದಾಖಲಾಗುತ್ತವೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತ ಹೇಗಿತ್ತು, ಬೆಂಗಳೂರು ಹೇಗಿತ್ತು ಎನ್ನುವುದನ್ನು ನಾನು ನನ್ನ ಮಕ್ಕಳಿಗೆ ಮಾತುಗಳಲ್ಲಿ, ಪದಗಳಲ್ಲಿ ಪರಿಣಾಮಕಾರಿಯಾಗಿ ವಿವರಿಸಲು ಸಾಧ್ಯವೇ ಇಲ್ಲ. ಆದರೆ ಆ ಸಂದರ್ಭದ ಫೋಟೋಗಳು ಎಲ್ಲವನ್ನೂ ಹೇಳಿ ಬಿಡುತ್ತವೆ ಎಂದರು.
ಪುಲಿಟ್ಜರ್ ಪ್ರಶಸ್ತಿ ( Pulitzer ) ಪುರಸ್ಕೃತ ಕೆವಿನ್ ಕಾರ್ಟರ್ ತೆಗೆದ ಜಗತ್ಪ್ರಸಿದ್ದ ಫೋಟೋವನ್ನು ಪ್ರಸ್ತಾಪಿಸಿದ ಅವರು, ಒಂದು ರಣಹದ್ದು ಮೈ ಮೂಳೆ ಬಿಟ್ಟುಕೊಂಡಿದ್ದ ಹೆಣ್ಣು ಮಗುವೊಂದನ್ನು ತಿನ್ನಲು ಕಾದು ಕುಳಿತಿದೆ. ಆ ಮಗು ಗಂಜಿ ಕೇಂದ್ರಕ್ಕೆ ತೆವಳಿಕೊಂಡು ಹೋಗಲು ಯತ್ನಿಸುತ್ತಿದೆ…
ಇದು ಸೂಡಾನ್ ದೇಶದ ಚಿತ್ರ. ಯುದ್ಧ ಸಂತ್ರಸ್ಥ ಸೂಡಾನ್ ನಲ್ಲಿ ಕೆವಿನ್ ಕಾರ್ಟರ್ ಕ್ಲಿಕ್ಕಿಸಿದ ಫೋಟೋ ಇದು. 1993 ರ ಈ ಫೋಟೋಗೆ 1994 ರಲ್ಲಿ ಫುಲಿಟ್ಜರ್ ಪ್ರಶಸ್ತಿ ಬಂತು. ಈ ಪ್ರಶಸ್ತಿ ಬಂದ ಸುದ್ದಿ ಕೇಳಿ ಕೆವಿನ್ ಸಂಭ್ರಮ ಪಡಲಿಲ್ಲ. ಕಣ್ಣೀರು ಹಾಕಿದ.
ಈ ಫೋಟೋ ಆತನನ್ನು ಬಹಳ ಕಾಡಿತು. ಮಾನಸಿಕವಾಗಿ ಜರ್ಜರಿತನಾಗಿದ್ದ ಎಂದು ವಿವರಿಸಿ ತಮ್ಮ ವೃತ್ತಿ ಜೀವನದ ಕೆಲವು ಘಟನೆಗಳನ್ನು ಸ್ಮರಿಸಿಕೊಂಡರು.
ಮನುಷ್ಯ ಜಗತ್ತಿನ ಮೇಲೆ ಯುದ್ಧದ ಕ್ರೌರ್ಯಗಳು ಮಾಡುವ ಭೀಕರತೆಯನ್ನು war photographer ಗಳು ತೆಗೆದ ಚಿತ್ರಗಳು ಹೇಳುತ್ತವೆ ಎಂದರು.