ನೀವು ಮುಗ್ಧರೇನಲ್ಲ, ನಿಮ್ಮನ್ನು ಈಗಲೇ ಕ್ಷಮಿಸುತ್ತಿಲ್ಲ: ಬಾಬಾ ರಾಮದೇವ್‌ಗೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್

Most read

ಹೊಸದಿಲ್ಲಿ: ನಮ್ಮಿಂದ ತಪ್ಪಾಗಿದೆ, ಇನ್ನು ಮುಂದೆ ಹೀಗೆ ಮಾಡುವುದಿಲ್ಲ. ಈ ಬಾರಿ ನಮ್ಮನ್ನು ಕ್ಷಮಿಸಿ ಬಿಡಿ ಎಂದು ಪತಂಜಲಿ ಸಂಸ್ಥಾಪಕರುಗಳಾದ ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಇಂದು ಸುಪ್ರೀಂ ಕೋರ್ಟ್ ಮುಂದೆ ಖುದ್ದಾಗಿ ಹಾಜರಾಗಿ ಅಂಗಲಾಚಿದರು. ಕ್ಷಮೆ ಯಾಚನೆಯ ನಂತರವೂ ತಣ್ಣಗಾಗದ ಪೀಠ, ನಿಮ್ಮ ಕ್ಷಮೆಯ ಬಗ್ಗೆ ನಾವು ಯೋಚಿಸುತ್ತೇವೆ. ಕೋರ್ಟಿನಲ್ಲಿ ಏನಾಗುತ್ತಿದೆ ಎಂಬುದು ತಿಳಿಯದಷ್ಟು ನೀವು ಮುಗ್ಧರಲ್ಲ. ನಾವು ನಿಮ್ಮ ಕ್ಷಮಿಸುತ್ತೇವೆ ಎಂದು ಹೇಳುತ್ತಿಲ್ಲ. ನಿಮ್ಮ ಹಿಂದಿನ ಚರಿತ್ರೆಯ ವಿಷಯದಲ್ಲಿ ನಾವು ಕುರುಡರಾಗಲು ಸಾಧ್ಯವಿಲ್ಲ ಎಂದು ಗುಡುಗಿತು.

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಸಾನುದಿದ್ದೀನ್ ಅಮಾನುಲ್ಲಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಇಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಂದುವರೆಸಿತು.

ಪತಂಜಲಿ ಸಂಸ್ಥೆಯ ಔಷಧ ಉತ್ಪನ್ನಗಳಿಂದ ಎಲ್ಲ ರೋಗಗಳು ವಾಸಿಯಾಗುತ್ತವೆ ಎಂಬ ಸುಳ್ಳು ಪ್ರತಿಪಾದನೆಯ ಜಾಹೀರಾತುಗಳನ್ನು ಸಂಸ್ಥೆ ನೀಡಿತ್ತಲ್ಲದೆ ಆಧುನಿಕ ವೈದ್ಯ ಪದ್ಧತಿ ಸುಳ್ಳು ಮತ್ತು ಮೋಸ ಎಂದು ಜಾಹೀರಾತುಗಳಲ್ಲಿ ಹೇಳಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ದಾವೆ ಹೂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಸದುದ್ದೇಶಗಳನ್ನು ತೋರ್ಪಡಿಸಿಕೊಳ್ಳಲು, ಹಲವು ಸ್ವಯಂಪ್ರೇರಿತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪತಂಜಲಿ ಮುಖ್ಯಸ್ಥರು ಕೋರ್ಟ್ ಮುಂದೆ ಮುಚ್ಚಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಏಪ್ರಿಲ್ 23 ಕ್ಕೆ ಮುಂದೂಡಲಾಯಿತು.

ಸುಪ್ರೀಂ ಕೋರ್ಟ್ ಇಂದು ಕೋರ್ಟ್ ಹಾಲ್ ನಲ್ಲಿ ಉಪಸ್ಥಿತರಿದ್ದ ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಅವರನ್ನೇ ನೇರವಾಗಿ ಪ್ರಶ್ನಿಸಿದ್ದು ವಿಶೇಷವಾಗಿತ್ತು.

ಇಂದು ವಿಚಾರಣೆ ಆರಂಭವಾಗುತ್ತಿದ್ದಂತೆ ಪತಂಜಲಿ ಪರ ವಕೀಲ ಮುಕುಲ್ ರೋಹ್ಟಗಿ ತಮ್ಮ ಇಬ್ಬರೂ ಕಕ್ಷಿದಾರರು ಬೇಷರತ್ ಕ್ಷಮೆ ಯಾಚಿಸುತ್ತಿರುವಾಗಿ ನ್ಯಾಯಾಲಯಕ್ಕೆ ತಿಳಿಸಿದರು.

ನಾವು ಸಂಪೂರ್ಣವಾಗಿ ಕ್ಷಮೆ ಯಾಚಿಸುತ್ತೇವೆ ಎಂದು ಮುಕುಲ್ ರೋಹ್ಟಗಿ ಹೇಳುತ್ತಿದ್ದಂತೆ ಈ ಸಂಬಂಧ ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಅವರನ್ನು ಮಾತಾಡಿಸಲು ಬಯಸುತ್ತೇವೆ ಎಂದು ನ್ಯಾಯಾಧೀಶರು ಹೇಳಿದರು.

ನ್ಯಾ ಕೊಹ್ಲಿ: ನಾವು ನಿಮ್ಮ ಹೇಳೀಕೆಗಳನ್ನು ಓದಿದ್ದೇವೆ. ನೀವು ಏನನ್ನು ಹೇಳಬಯಸುತ್ತೀರಿ?
ರಾಮದೇವ್: ಪರಮ ಆದರಣೀಯ ಜಡ್ಜ್ ಸಾಹೇಬ್ ಮಹೋದಯಾ, ಅನ್ ಕಂಡಿಷನಲಿ, ಹಮ್ನೆ…. ಜೋ ಭೀ ಹಮ್ಸೆ ಹುಯಿ, ಅಪಾಲಜೈಸ್ ಕಿಯಾ ಹೈ. (ಅತ್ಯಂತ ಗೌರವಾನ್ವಿತ ನ್ಯಾಯಾಧೀಶರೇ, ನಾವು ಏನನ್ನು ಮಾಡಿದ್ದೇವೋ ಅದಕ್ಕೆ ಬೇಷರತ್ತಾಗಿ ಕ್ಷಮೆ ಯಾಚಿಸುತ್ತೇವೆ.)

ನ್ಯಾ: ಅಮಾನುಲ್ಲಾ: ಕಾನೂನು ಎಲ್ಲರಿಗೂ ಒಂದೇ ಆಗಿದೆ.

ರಾಮದೇವ್:‌ ಮುಂದೆ ಈ ವಿಷಯದಲ್ಲಿ ಜಾಗರೂಕರಾಗಿರುತ್ತೇವೆ. ಕೆಲಸದ ಉತ್ಸಾಹದಲ್ಲಿ ಹೀಗಾಗಿದೆ. ಮುಂದೆ ಹೀಗಾಗುವುದಿಲ್ಲ.

ಈ ಸಂದರ್ಭದಲ್ಲಿ ನ್ಯಾಯಾಲಯ ಖಾಯಿಲೆಗಳನ್ನು ಗುಣಪಡಿಸುತ್ತೇವೆ ಎಂಬ ಪ್ರತಿಪಾದನೆ ಮಾಡದಂತೆ ನಿರ್ದೇಶಿಸಿತು. ಕೆಲವು ನಿರ್ದಿಷ್ಟ ಖಾಯಿಲೆಗಳ ಚಿಕಿತ್ಸೆಗೆ ಔಷಧಿಗಳನ್ನು ನೀಡುತ್ತೇವೆ ಎಂದು ಜಾಹೀರಾತು ನೀಡುವಂತಿಲ್ಲ. ವೈದ್ಯರೇ ಆಗಲಿ, ಔಷಧಿ ವ್ಯಾಪರಿಗಳೇ ಆಗಲಿ ಇದನ್ನು ಮಾಡುವಂತಿಲ್ಲ. ಹೀಗೆ ಜಾಹೀರಾತು ನೀಡುವುದು ಬೇಜವಾಬ್ದಾರಿತನ. ಪ್ರತಿಯೊಬ್ಬ ನಾಗರಿಕನೂ ಕಾನೂನು ಪಾಲಿಸಬೇಕು ಎಂದು ನ್ಯಾಯಾಲಯ ಹೇಳಿತು.

ಆಗಿರುವ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ತಾವೇ ಒಂದಷ್ಟು ಕ್ರಮ ಕೈಗೊಳ್ಳುವುದಾಗಿ ಹೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ್ಯಾಯಾಲಯ ಏ.23ಕ್ಕೆ ಮುಂದೂಡಿತು. ಅಂದು ಇಬ್ಬರೂ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರುವಂತೆ ನ್ಯಾಯಾಲಯ ಆದೇಶಿಸಿತು.

ಇದನ್ನೂ ಓದಿ:

More articles

Latest article