ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅಲ್ಪ ಅಂತರದಲ್ಲಿ ಸೋತರೆ ಅದಕ್ಕೆ ಎಚ್.ಡಿ.ರೇವಣ್ಣ ಕಾರಣ!

Most read

ಹಾಸನ: ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಜ್ವಲ್ ರೇವಣ್ಣ ಈ ಬಾರಿ ಅಲ್ಪ ಅಂತರದಲ್ಲಿ ಸೋತರೆ ಅದಕ್ಕೆ ಎಚ್.ಡಿ.ರೇವಣ್ಣ ಕಾರಣವಾಗುತ್ತಾರೆ. ಹೇಗೆ ಅಂತೀರಾ? ಈ ವರದಿ ಓದಿ.

ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಎರಡನೇ ಬಾರಿ ಆಯ್ಕೆ ಬಯಸಿ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹಾಸನ ದೇವೇಗೌಡರ ಕುಟುಂಬದ ಭದ್ರಕೋಟೆ. ಆದರೆ ಈ‌ ಬಾರಿ ಪ್ರಜ್ವಲ್ ಹಾದಿ‌ ಅಷ್ಟು ಸುಗಮವಾಗಿಯೇನೂ ಇಲ್ಲ. ದೇವೇಗೌಡರ ರಾಜಕೀಯ ವೈರಿ ಜಿ.ಪುಟ್ಟಸ್ವಾಮಿ ಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಕಾಂಗ್ರೆಸ್ ಸ್ಪರ್ಧಿಯಾಗಿ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಹಾಸನದ ಮಾಜಿ ಶಾಸಕ ಬಿಜೆಪಿಯ ಪ್ರೀತಂ ಗೌಡ ಜೆಡಿಎಸ್ ಬಿಜೆಪಿ ಮೈತ್ರಿಯನ್ನು ಇನ್ನೂ ಅರಗಿಸಿಕೊಳ್ಳಲು ಆಗದೆ ಪ್ರಚಾರದಲ್ಲಿ ತೊಡಗಿಲ್ಲ‌. ಪ್ರೀತಂ ಗೌಡ ಅವರ ಕೆಲವು ಅನುಯಾಯಿಗಳು ಈಗಾಗಲೇ ಶ್ರೇಯಸ್ ಪಟೇಲ್ ಪರವಾಗಿ ಪ್ರಚಾರಕ್ಕೆ ಇಳಿದಿರುವುದು ಜೆಡಿಎಸ್ ಪಾಳಯದಲ್ಲಿ ಆತಂಕ ಹುಟ್ಟಿಸಿದೆ.

ಇದೆಲ್ಲದರ ನಡುವೆ ಪ್ರಜ್ವಲ್ ರೇವಣ್ಣ ಇನ್ನೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಎಚ್.ಡಿ.ರೇವಣ್ಣ ಕೂಡ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಎಚ್.ಡಿ.ರೇವಣ್ಣ ನೀವಂದುಕೊಂಡಂತೆ ಪ್ರಜ್ವಲ್ ಅವರ ತಂದೆಯಲ್ಲ. ಇವರು ಬೇರೆ ರೇವಣ್ಣ. ಈ ಬಾರಿಯ ಫಲಿತಾಂಶ ಫೊಟೋ ಫಿನಿಷ್ ಹಂತ‌ ಎಚ್.ಡಿ.ರೇವಣ್ಣ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಪ್ರಜ್ವಲ್ ವಿರುದ್ಧ ಸ್ಪರ್ಧೆಗೆ ಇಳಿದಿರುವ ಮತ್ತೋರ್ವ ಎಚ್.ಡಿ.ರೇವಣ್ಣ ಚನ್ನರಾಯಪಟ್ಟಣ ತಾಲ್ಲೂಕು ದಂಡಿಗನಹಳ್ಳಿ ಹೋಬಳಿ ಕೋಡಿಹಳ್ಳಿಯವರು. ಇವರಿಗೆ 48 ವರ್ಷ ವಯಸ್ಸು. ಅವರೀಗ ಪೂರ್ವಾಂಚಲ ಮಹಾ ಪಂಚಾಯತ್ ಪಾರ್ಟಿಯಿಂದ ಕಣಕ್ಕೆ ಇಳಿದಿದ್ದಾರೆ. ಅವರಿಗೆ ಇದು ಮೊದಲ ಚುನಾವಣೆಯೇನಲ್ಲ. ಹಿಂದೆಯೂ ಹಲವು ಬಾರಿ ಸ್ಪರ್ಧೆ ಮಾಡಿದ್ದಾರೆ.

ಇವರ ಹೆಸರು ಮೂಲತಃ ಎಚ್.ಡಿ.ರೇವಣ್ಣ ಅಲ್ಲ, ಕೆ.ಡಿ.ರೇವಣ್ಣ ಅರ್ಥಾತ್ ಕೋಡಿಹಳ್ಳಿ ದೊಡ್ಡೇಗೌಡ ರೇವಣ್ಣ. 2009ರ ಲೋಕಸಭಾ ಚುನಾವಣೆಯಲ್ಲಿ ಅವರು ಇದೇ ಹೆಸರಿನಲ್ಲಿ ಸ್ಪರ್ಧಿಸಿ 14,447 ಮತಗಳನ್ನು ಪಡೆದಿದ್ದರು! ನಂತರ ಅವರು ಹೆಸರು ಬದಲಿಸಿಕೊಂಡು ಎಚ್.ಡಿ.ರೇವಣ್ಣ ಆದರು. ಎಚ್ ಎಂದರೆ ಹುಚ್ಚೇಗೌಡ(ಅಜ್ಜ), ಡಿ ಎಂದರೆ ದೊಡ್ಡೇಗೌಡ (ಅಪ್ಪ). ಹೆಸರು ಬದಲಾವಣೆಗೆ ರೇವಣ್ಣ ಅವರ ಬಳಿ ಒಂದು ಸಮರ್ಥನೆಯೂ ಇದೆ. ಕೆ.ಡಿ.ರೇವಣ್ಣ ಹೆಸರಿನಲ್ಲಿ ಕೆ.ಡಿ ಎಂಬುದು ಆಡುಮಾತಲ್ಲಿ ಕೇಡಿ ಆಗುತ್ತದೆ. ಅದು ನನಗೆ ಇಷ್ಟವಾಗದೇ ಹೆಸರು ಬದಲಿಸಿಕೊಂಡೆ ಎನ್ನುತ್ತಾರೆ ಅವರು.

2014ರಲ್ಲಿ ರೇವಣ್ಣ ತಮ್ಮ‌ ಹೊಸ ಹೆಸರಿನೊಂದಿಗೆ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆಗ ಅವರಿಗೆ ದೊರೆತ ಮತಗಳು 6,798!

2023ರ ಹೊಳೆನರಸೀಪುರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನ ಎಚ್.ಡಿ.ರೇವಣ್ಣ ಮತ್ತು ಕಾಂಗ್ರೆಸ್ ಶ್ರೇಯಸ್ ಪಟೇಲ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟು, ರೇವಣ್ಣ ಕೇವಲ 3152 ಮತಗಳಿಂದ ಗೆದ್ದರು. ಈ ಚುನಾವಣೆಯಲ್ಲೂ ಪೂರ್ವಾಂಚಲ ಮಹಾ ಪಂಚಾಯತ್ ಪಾರ್ಟಿಯಿಂದ ಸ್ಪರ್ಧಿಸಿದ್ದ ಎಚ್.ಡಿ.ರೇವಣ್ಣ 2,061 ಮತ ಪಡೆದುಕೊಂಡಿದ್ದರು.

ರೇವಣ್ಣ ತಾವೊಬ್ಬ ಕೃಷಿ ಕೂಲಿಕಾರರೆಂದು ಹೇಳಿಕೊಳ್ಳುತ್ತಾರೆ. 50. ಗ್ರಾಂ ಚಿನ್ನ ಸೇರಿದಂತೆ ಚರಾಸ್ತಿ ಎಂಟು ಲಕ್ಷ ರುಪಾಯಿ ಇದೆ. ಒಂದು ಎಕರೆ ಇಪ್ಪತ್ತೆರಡು ಗುಂಟೆ ಕೃಷಿ‌ಜಮೀನು ಇದೆ. ಎಸ್ ಎಸ್ ಎಲ್ ಸಿಯವರೆಗೆ ಅವರು ಓದಿದ್ದಾರೆ.

ಹಿಂದೊಮ್ಮೆ ವಿಧಾನಸಭೆ ಚುನಾವಣೆಯ‌ ಸಂದರ್ಭದಲ್ಲಿ ಮಾಜಿ‌ ಸಚಿವ ರೇವಣ್ಣ ಕುಟುಂಬದಿಂದ ನಾಮಪತ್ರ ಹಿಂದಕ್ಕೆ ಪಡೆಯಲು ಒತ್ತಡ ಬಂದಿತ್ತಂತೆ. ಚುನಾವಣೆಯ ನಂತರ ಕಾಂಟ್ರಾಕ್ಟ್ ಕೆಲಸ ನೀಡುವುದಾಗಿ ಆಮಿಷ ನೀಡಲಾಗಿತ್ತಂತೆ.‌ ಅವರ ಮಾತು ಕೇಳಿ ನಾಮಪತ್ರ‌ ಹಿಂದಕ್ಕೆ ಪಡೆದ ನಂತರ ಇವರ ಫೋನ್ ಗಳಿಗೆ ಸರಿಯಾದ ಸ್ಪಂದನೆ ಸಿಗಲಿಲ್ಲವಂತೆ. ಹೀಗಾಗಿ ಇವರು ಮತ್ತೆ ಮತ್ತೆ ಸ್ಪರ್ಧಿಸುತ್ತಲೇ ಬಂದಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ ರೇವಣ್ಣ ಎಷ್ಟು ಮತ ಪಡೆಯಲಿದ್ದಾರೆ ಎಂದು ಕಾದು ನೋಡಬೇಕಿದೆ. ರೇವಣ್ಣ ಅವರ ಹೆಸರು ನೋಡಿ ಗೊಂದಲದಿಂದ ಇವರಿಗೆ ಮತ ನೀಡೋರು ಎಷ್ಟು ಮಂದಿ ಎಂಬ ಕುತೂಹಲವೂ ಇದೆ. ಏನೇ ಆಗಲಿ, ತುರುಸಿನ ಹಣಾಹಣಿ ನಡೆದು ಪ್ರಜ್ವಲ್ ಸೋತರೆ ಈ ಎಚ್.ಡಿ.ರೇವಣ್ಣ ಕಾರಣವಾದರೆ ಆಶ್ಚರ್ಯವಿಲ್ಲ.

More articles

Latest article