ಬೆಂಗಳೂರು: ಗುಜರಾತ್ ನರಮೇಧ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಕ್ರಿಮಿನಲ್ ಹಿನ್ನೆಲೆಯ ಕುರಿತು ಮಾತನಾಡಿದ್ದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಅವರಿಗೆ ಜೈಲೇ ಗತಿಯಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬೆದರಿಕೆ ಒಡ್ಡಿದ್ದಾರೆ.
ತಮ್ಮ ರಾಜಕೀಯ ವಿರೋಧಿಗಳನ್ನು ಸರ್ಕಾರಿ ಏಜೆನ್ಸಿಗಳನ್ನು ಬಳಸಿಕೊಂಡು ಜೈಲಿಗೆ ಕಳುಹಿಸುವ ಬಿಜೆಪಿ ಸರ್ಕಾರದ ನೀತಿಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮಾಜಿ ಶಾಸಕರೋರ್ವರನ್ನು ಜೈಲಿಗೆ ಕಳುಹಿಸುವುದಾಗಿ ಬಹಿರಂಗವಾಗಿಯೇ ಬೆದರಿಕೆ ಒಡ್ಡಿರುವ ಘಟನೆ ಇದಾಗಿದೆ.
ಅಮಿತ್ ಶಾ ಕುರಿತು ಯತೀಂದ್ರ ಅವರು ನೀಡಿರುವ ಹೇಳಿಕೆ ಕೊಬ್ಬಿನ ಹೇಳಿಕೆಯಾಗಿದೆ, ಅವರೊಬ್ಬ ಮಾನಸಿಕ ಅಸ್ವಸ್ಥೆ ಎಂದು ಆರ್. ಅಶೋಕ್ ಮಾಧ್ಯಮವೊಂದಕ್ಕೆ ನೀಡಿದ್ದ ಪ್ರತಿಕ್ರಿಯೆಯಲ್ಲಿ ನಾಲಿಗೆ ಹರಿಬಿಟ್ಟು ಮಾತನಾಡಿದ್ದಾರೆ.
ಚಾಮರಾಜನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ, ಗುಜರಾತ್ನಲ್ಲಿ ನರಮೇಧ ಮಾಡಿದವರು ಯಾರು? ಇಂತಹವರು ದೇಶದ ಉನ್ನತ ಸ್ಥಾನದಲ್ಲಿದ್ದಾರೆ. ಇಂತವರನ್ನ ಪ್ರಧಾನಿ ಮೋದಿಯವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ. ದೇಶದ ಇತಿಹಾಸದಲ್ಲೇ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಸರ್ಕಾರ ಎಂದರೆ ಅದು ಮೋದಿ ಸರ್ಕಾರ. ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಅಂತ ಹೇಳಿದ್ದರು. ಈಗ ನಿರೋದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಮಾಡುವುದು ಕೇಂದ್ರ ಸರ್ಕಾರದ ಹೊಣೆ ಅಲ್ಲ ಅಂತ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.
ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರುತ್ತೇವೆ ಎಂದಿದ್ದರು, ತಂದರೇ? ಸ್ವಿಸ್ ಬ್ಯಾಂಕ್ ಅಲ್ಲಿ ಯಾರ್ ಯಾರ ಖಾತೆಯಲ್ಲಿ ಕಪ್ಪು ಹಣ ಇದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಿಲ್ಲ. ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನ ಬಂದ್ರೆ ಸಂವಿಧಾನ ಬದಲಾವಣೆ ಮಾಡೋದೇ ನಮ್ಮ ಹಿಡನ್ ಅಜೆಂಡಾ ಎಂದು ಬಿಜೆಪಿ ನಾಯಕರೇ ಹೇಳಿದ್ದಾರೆ. ಕೊಟ್ಟ ಮಾತುಗಳನ್ನು ಈಡೇರಿಸದೆ ಈಗ ಚುನಾವಣೆಯ ಹೊತ್ತಲ್ಲಿ ಮತ್ತೆ ಭರವಸೆ ನೀಡುತ್ತಿರುವ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಕೂಡದು ಎಂದು ಅವರು ಹೇಳಿದ್ದರು.
ಅಮಿತ್ ಶಾ ಅವರು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳಿಂದಾಗಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರುವುದಕ್ಕೂ ಮುನ್ನ ಗುಜರಾತ್ ನಿಂದ ಗಡೀಪಾರಾಗಿದ್ದಲ್ಲದೆ, ಹಲವು ತಿಂಗಳುಗಳ ಕಾಲ ವಿಚಾರಾಣಾಧೀನ ಖೈದಿಯಾಗಿ ಜೈಲಿನಲ್ಲಿ ಇದ್ದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.