ಹೊಸದಿಲ್ಲಿ: ಇಂಡಿಯನ್ ಪ್ರಿಮಿಯರ್ ಲೀಗ್ ನ 17ನೇ ಆವೃತ್ತಿ ಆರಂಭಗೊಳ್ಳುವ ಒಂದು ದಿನ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಹಿಂದೆ ಸರಿಯುವುದಾಗಿ ಎಂ.ಎಸ್.ಧೋನಿ ಘೋಷಿಸುತ್ತಿದ್ದಂತೆ, ಆಘಾತಗೊಂಡಿರುವ ಅಭಿಮಾನಿಗಳು ಕ್ರಿಕೆಟ್ ಯುಗವೊಂದು ಮುಗಿದುಹೋಯಿತು ಎಂದು ಮಮ್ಮಲ ಮರುಗಿದ್ದಾರೆ.
ನಿಸ್ಸಂದೇಹವಾಗಿ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿರುವ ಧೋನಿ ಇನ್ನು ಮುಂದೆ ಯಾವುದೇ ತಂಡವನ್ನು ಮುನ್ನಡೆಸುವುದಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಅಭಿಮಾನಿಗಳು ಪರದಾಡುತ್ತಿದ್ದಾರೆ. ಹೀಗಾಗಿ #endofanera ಎಂಬ ಹ್ಯಾಶ್ ಟ್ಯಾಗ್ ಎಲ್ಲೆಡೆ ಟ್ರೆಂಡ್ ಆಗುತ್ತಿದೆ.
ಅಚ್ಚರಿಯ ಬೆಳವಣಿಗೆಯಲ್ಲಿ ಇಂದು ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ತ್ಯಜಿಸುತ್ತಿರುವುದಾಗಿ ಹೇಳುವುದರೊಂದಿಗೆ ತಂಡದ ನಾಯಕತ್ವವನ್ನು ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಅವರಿಗೆ ವಹಿಸಿದ್ದರು. ರುತುರಾಜ್ 2013ರಿಂದಲೂ ಚೆನ್ನೈ ತಂಡದ ಭಾಗವಾಗಿದ್ದು, ಈವರೆಗೆ 52 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.
ಧೋನಿ ನಾಯಕತ್ವದಿಂದ ಕೆಳಗಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಪೋಸ್ಟ್ ಗಳನ್ನು ಹಾಕಿದ ಅಭಿಮಾನಿಗಳು ಇದುವರೆಗಿನ ಧೋನಿ ಸಾಧನೆಗಳನ್ನು ಕೊಂಡಾಡುತ್ತ, ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.
ಈ ನಡುವೆ, ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ರೋಹಿತ್ ಶರ್ಮ ಅವರನ್ನು ತೆಗೆದುಹಾಕಿರುವುದರಿಂದ ಐಪಿಎಲ್ ಇತಿಹಾಸದ ಇಬ್ಬರು ಯಶಸ್ವಿ, ಶ್ರೇಷ್ಠ ಆಟಗಾರರ ನಾಯಕತ್ವ ಈ ಸೀಜನ್ ನಲ್ಲಿ ಇಲ್ಲದಂತಾಗಿದೆ. ಐದು ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಟ್ಟಿರುವ ರೋಹಿತ್ ಶರ್ಮಾ ಅವರನ್ನು ಮುಂಬೈ ನಾಯಕತ್ವದಿಂದ ಕೆಳಗಿಳಿಸಿ, ಅವರ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ನೇಮಿಸಲಾಗಿದೆ. ಧೋನಿ ಮತ್ತು ರೋಹಿತ್ ಶರ್ಮಾ ಇಬ್ಬರೂ ತಲಾ ಐದು ಬಾರಿ ಐಪಿಎಲ್ ವಿಜೇತ ತಂಡಗಳನ್ನು ಮುನ್ನಡೆಸಿದ್ದಾರೆ.