ಚುನಾವಣಾ ಬಾಂಡ್:‌ ಮತ್ತೆ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾದ ಎಸ್‌ ಬಿಐ

Most read

ಹೊಸದಿಲ್ಲಿ: ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಚುನಾವಣಾ ಆಯೋಗ ನಿನ್ನೆ ಪ್ರಕಟಿಸಿದ್ದರೂ, ಮಾಹಿತಿಗಳನ್ನು ಹಂಚಿಕೊಳ್ಳದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತೆ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದೆ.

2017ರಲ್ಲಿ ಜಾರಿಗೆ ತರಲಾದ ಚುನಾವಣಾ ಬಾಂಡ್‌ ಯೋಜನೆಯನ್ನು ಅಸಂವಿಧಾನಿಕ ಎಂದು ಹೇಳುವ ಮೂಲಕ ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್‌ ಸಂಬಂಧ ಪಟ್ಟ ಮಾಹಿತಿಗಳನ್ನು ಬಹಿರಂಗಪಡಿಸುವಂತೆ ಆದೇಶಿಸಿತ್ತು.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ನೇತೃತ್ವದ ಸಂವಿಧಾನಪೀಠ ಇಂದೂ ಪ್ರಕರಣದ ವಿಚಾರಣೆ ಆರಂಭಿಸಿ, ಚುನಾವಣಾ ಬಾಂಡ್‌ ಗಳಿಗೆ ಸಂಬಂಧಿಸಿದ ಪೂರ್ಣ ಮಾಹಿತಿಯನ್ನು ಬಹಿರಂಗಪಡಿಸದ ಸ್ಟೇಟ್‌ ಬ್ಯಾಂಕ್‌ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿತು.

ವಿಚಾರಣೆ ಆರಂಭವಾಗುತ್ತಿದ್ದಂಎ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ಪರವಾಗಿ ಯಾರು ಹಾಜರಾಗಿದ್ದಾರೆ, ಅವರು ಯಾಕೆ ಬಾಂಡ್‌ ಸಂಖ್ಯೆಗಳನ್ನು ಬಹಿರಂಗಗೊಳಿಸಿಲ್ಲ ಎಂದು ಪೀಠ ಪ್ರಶ್ನಿಸಿತು. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಪಾರ್ಟಿ ತೀರ್ಪಿನಲ್ಲಿ ಭಾಗೀದಾರ ಅಲ್ಲ, ಅವರಿಗೆ ನೋಟೀಸ್ ನೀಡಬಹುದು ಎಂದು ಅಡ್ವೊಕೇಟ್‌ ಜನರಲ್ ತಿಳಿಸಿದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ತೀರ್ಪು ಅತ್ಯಂತ ಸ್ಪಷ್ಟವಾಗಿದೆ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಲ್ಲ ಮಾಹಿತಿ ಬಹಿರಂಗಪಡಿಸಬೇಕು ಎಂದರು.

ಸ್ಟೇಟ್‌ ಬ್ಯಾಂಕ್‌ ಇಂಡಿಯಾಗೆ ನೋಟಿಸ್‌ ನೀಡಿ, ಅವರಿಗೂ ಈ ಪ್ರಕರಣ ಸಂಬಂಧ ಹೇಳಿಕೊಳ್ಳುವುದಿದೆ ಎಂದು ಅಡ್ವೊಕೇಟ್‌ ಜನರಲ್‌ ವಿನಂತಿಸಿದರು. ಮುಂದಿನ ವಿಚಾರಣೆ ಸಂದರ್ಭದಲ್ಲಿ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ವಕೀಲರು ಹಾಜರಿರಬೇಕು ಎಂದು ನ್ಯಾಯಮೂರ್ತಿಗಳು ತಾಕೀತು ಮಾಡಿದರು.

ಈ ಸಂಬಂಧ ನೋಟಿಸ್‌ ಜಾರಿ ಮಾಡಿದ ಸುಪ್ರೀಂ ಕೋರ್ಟ್‌ ಮಾ.18ರಂದು ವಿಚಾರಣೆಗೆ ಹಾಜರಾಗಿ, ತನ್ನಿಂದ ಆಗಿರುವ ಲೋಕಪದ ಕುರಿತು ಸ್ಪಷ್ಟನೆ ನೀಡಲು ಎಸ್‌ ಬಿಐಗೆ ಆದೇಶಿಸಿದೆ.

More articles

Latest article