ಚುನಾವಣಾ ಬಾಂಡ್ ಬಹಿರಂಗ: ಅಂಬಾನಿ, ಆದಾನಿ ಹೆಸರು ಯಾಕಿಲ್ಲ?

Most read

ಸುಪ್ರೀ ಕೋರ್ಟ್ ತೀರ್ಪಿನ ಪ್ರಕಾರ ಭಾರತದ ಚುನಾವಣಾ ಆಯೋಗವು ಭಾರತೀಯ ಸ್ಟೇಟ್ ಬ್ಯಾಂಕ್ ತನಗೆ ಒದಗಿಸಿರುವ ಚುನಾವಣಾ ಬಾಂಡ್ ಗಳ ಎಲ್ಲಾ ಮಾಹಿತಿಗಳನ್ನು ಆಯೋಗದ ಜಾಲತಾಣದಲ್ಲಿ ಪ್ರಕಟಿಸಿದೆ. ಈ ಮೂಲಕ 1, ಏಪ್ರಿಲ್ 2019ರಿಂದ 15 ಫೆಬ್ರವರಿ 2024ರ ವರೆಗೆ ಚುನಾವಣಾ ಬಾಂಡ್ ಗಳ ಮೂಲಕ ಬೇರೆಬೇರೆ ರಾಜಕೀಯ ಪಕ್ಷಗಳಿಗೆ ಸಂದಾಯವಾಗಿರುವ ಹಣದ ಪ್ರಮಾಣ ಬಹಿರಂಗವಾಗಿದೆ. ಈ ಮಾಹಿತಿಯನ್ನು ರಹಸ್ಯವಾಗಿಯೇ ಇಡಲು ಆಡಳಿತಾರೂಢ ನರೇಂದ್ರ ಮೋದಿ ಸರ್ಕಾರ ಪ್ರಯತ್ನ ಮಾಡಿದ್ದರೂ ಸುಪ್ರೀಂ ಕೋರ್ಟು ಗಟ್ಟಿನಿಲುವು ತಳೆದಿದ್ದರಿಂದಾಗಿ ಇಷ್ಟು ದಿನ ಅಡಗಿಸಿಟ್ಟಿದ್ದ ಮಾಹಿತಿ ಇದೀಗ ಸಾಮಾನ್ಯ ಜನರಿಗೂ ತಿಳಿಯುವಂತಾಗಿದೆ.

ಈ ಅವಧಿಯಲ್ಲಿ ಒಟ್ಟು 22, 217 ವಿವಿಧ ಮುಖಬೆಲೆಯ ಬಾಂಡ್ ಗಳನ್ನು ಹಣವಂತರು ಮತ್ತು ಕಂಪನಿಗಳು ಎಸ್ ಬಿ ಐ ನಿಂದ ಖರೀದಿಸಿದ್ದಾರೆ. ಇವುಗಳಲ್ಲಿ 22,030 ಬಾಂಡುಗಳನ್ನು ವಿವಿಧ ರಾಜಕೀಯ ಪಕ್ಷಗಳು ನಗದೀಕರಿಸಿಕೊಂಡಿವೆ. ಇದರಲ್ಲಿ ಅತಿಹೆಚ್ಚು ಹಣ ಸಂದಾಯವಾಗಿರುವುದು ಭಾರತೀಯ ಜನತಾ ಪಕ್ಷಕ್ಕೆ. ಒಟ್ಟು 6,060 ಕೋಟಿ ರೂಪಾಯಿಗಳನ್ನು ಅಂದರೆ ಒಟ್ಟು ಹಣದ 47% ಅದೊಂದೇ ಪಕ್ಷ ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ 1,609 ಕೋಟಿ ರೂಪಾಯಿ ಪಡೆದ ತೃಣಮೂಲ ಕಾಂಗ್ರೆಸ್. ತದನಂತರದಲ್ಲಿ 1,421 ಕೋಟಿ ರೂಪಾಯಿ ಪಡೆದುಕೊಂಡಿರುವ ಭಾರತೀಯ ಕಾಂಗ್ರೆಸ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

ಈ ಚುನಾವಣಾ ಬಾಂಡ್ ದಾಖಲೆಗಳು ಸ್ಪಷ್ಟವಾಗಿ ತಿಳಿಸುವಂತೆ ಆಡಳಿತಾರೂಢ ಸರ್ಕಾರದಿಂದ ಲಾಭ ಪಡೆದವರೇ ಅತಿಹೆಚ್ಚು ಬಾಂಡ್ ಖರೀದಿಸಿದ ಬಿಜೆಪಿ ಪಕ್ಷಕ್ಕೆ ನೀಡಿರುವುದನ್ನು ಸೂಚಿಸುತ್ತವೆ. ಉದಾಹರಣೆಗೆ 2019ರಿಂದ 2023ರ ನಡುವೆ ಸುಮಾರು 48, 372 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿರುವ ಅನಿಲ್ ಅಗರವಾಲ್ ನ ವೇದಾಂತ ಲಿಮಿಟೆಡ್ ಕಂಪನಿಯು 400 ಚುನಾವಣಾ ಬಾಂಡುಗಳನ್ನು ಖರೀದಿಸಿದೆ. ಅದೇ ರೀತಿಯಲ್ಲಿ ಅಕ್ರಮ ಹಣ ಸಾಗಾಣಿಕೆ ಅಪರಾಧ ಎಸಗಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ಯಾಂಟಿಯಾಗೋ ಮಾರ್ಟಿನ್ ಮಾಲೀಕತ್ವದ ಲಾಟರಿ ಮಾರಾಟದ ಸಂಸ್ಥೆಯಾದ ಫ್ಯೂಚರ್ ಗೇಮಿಂಗ್ ಮತ್ತು ಹೊಟೆಲ್ ಸರ್ವೀಸಸ್, ಮೇಘಾ ಇಂಜಿನಿಯರಿಂಗ್ ಮತ್ತು ಇನ್ ಫ್ರಾಸ್ಟ್ರಕ್ಚರ್ಸ್, ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್, ಹಲ್ದಿಯಾ ಎನರ್ಜಿ ಲಿಮಿಡೆಟ್ ಗಳು ಕ್ರಮವಾಗಿ 1,368 ಬಾಂಡ್, 966 ಬಾಂಡ್, 410 ಬಾಂಡ್ ಮತ್ತು 377 ಬಾಂಡ್ ಖರೀದಿ ಮಾಡಿವೆ. ಇವುಗಳು ನೀಡಿದ ಹಣ ಭಾರತೀಯ ಜನತಾ ಪಕ್ಷಕ್ಕೆ ಸಂದಾಯವಾಗಿರುವುದನ್ನು ಈ ಅಂಕಿಅಂಶಗಳು ತೋರಿಸುತ್ತಿವೆ.

ಈ ಮಧ್ಯೆ ಸುಮಾರು 28 ಕಂಪನಿಗಳನ್ನು ಚುನಾವಣಾ ಬಾಂಡುಗಳನ್ನು ಮೊದಲು ಖರೀದಿಸಲು ಅವಕಾಶ ನೀಡಿದ 12, ಏಪ್ರಿಲ್ 2019ರಂದು ಅಥವಾ ನಂತರದಲ್ಲಿ ಹುಟ್ಟುಹಾಕಲಾಗಿದೆ. ಚುನಾವಣಾ ಬಾಂಡ್ ಖರೀದಿಸಿದ ಟಾಪ್ 10 ಕಂಪನಿಗಳಲ್ಲಿ ಈ ಹೊಸ ಕಂಪನಿಗಳು ಸೇರಿವೆ. ಇದೂ ಕೂಡಾ ಆಡಳಿತಾರೂಢ ಪಕ್ಷವಾದ ಬಿಜೆಪಿಗೆ ಚುನಾವಣಾ ಬಾಂಡ್ ಗಳು ಹೇಗೆ ಅನುಕೂಲಕರವಾಗಿ ಪರಿಣಮಿಸಿವೆ ಎಂಬುದನ್ನು ತೋರಿಸುತ್ತಿದೆ.

ನಹೀಂ ಖಾವೂಂಗಾ, ನ ಖಾನೇ ದೂಂಗಾ ಅಂದರೆ ತಿನ್ನೋದಿಲ್ಲ, ತಿನ್ನೋದಿಕ್ಕೂ ಬಿಡೋದಿಲ್ಲ ಎಂದು ಅಬ್ಬರಿಸುತ್ತಲೇ 2014ರಲ್ಲಿ ಅಧಿಕಾರಕ್ಕೆ ಬಂದಿದ್ದ ನರೇಂದ್ರ ಮೋದಿಯ ಬಿಜೆಪಿ ಹೇಗೆ ಬೇಜ್ಜಾನ್ ತಿನ್ನಲು ಬಿಟ್ಟು ತಾನೂ ಅದರ ಕಿಕ್ ಬ್ಯಾಕ್ ಪಾಲು ಪಡೆದುಕೊಂಡಿದೆ ಎಂಬುದನ್ನು ಈ ಚುನಾವಣಾ ಬಾಂಡ್ ಅಂಕಿಅಂಶಗಳು ಬಯಲು ಮಾಡಿವೆ. ಈ ಗುಟ್ಟು ರಟ್ಟಾಗುವ ಭಯದಿಂದಲೇ ಎಸ್ ಬಿ ಐ ಮೇಲೆ ಒತ್ತಡ ತಂದು ‘ಚುನಾವಣಾ ಬಾಂಡ್ ಮಾಹಿತಿ ಬಹಿರಂಗಪಡಿಸುವುದನ್ನು ಜೂನ್ ವರೆಗೂ ಮುಂದೂಡಲು ಬಿಜೆಪಿ ಯತ್ನಿಸಿತ್ತು. ಆದರೆ ಫೆಬ್ರವರಿ 15ರ ತೀರ್ಪಿನಲ್ಲಿ ಚುನಾವಣಾ ಬಾಂಡ್ ಗಳು ಸಂವಿಧಾನ ವಿರೋಧಿಯಾಗಿದ್ದು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಹೇಳಿದ್ದ ಸುಪ್ರೀಂ ಕೋರ್ಟು ಇಂದು ಇಡೀ ದೇಶಕ್ಕೆ ಮಾಹಿತಿ ತಿಳಿಯುವಂತೆ ಮಾಡಿದೆ.

ಚುನಾವಣಾ ಬಾಂಡ್ ಗಳ ಮೂಲಕ ಕಂಪನಿಗಳು ನೀಡುವ ಹಣ ಹೆಚ್ಚಿನ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಬೆಂಬಲದಿಂದ ಅಕ್ರಮವಾಗಿ ಗಳಿಸಿಕೊಂಡ ಹಣವೇ ಆಗಿರುತ್ತದೆ. ಅದು ಒಂದು ರೀತಿಯಲ್ಲಿ ಕಾನೂನುಬದ್ಧ ಗೊಳಿಸಿದ ಅಕ್ರಮ ಕಿಕ್ ಬ್ಯಾಕ್ ಎನ್ನಬಹುದು. ಈ ಹಣವನ್ನು ರಾಜಕೀಯ ಪಕ್ಷಗಳು ಚುನಾವಣೆಗೆ ಮತ್ತು ಇತರ ಖರ್ಚುಗಳಿಗೂ ಬಳಸಿಕೊಳ್ಳಬಹುದು.

ಅಂಬಾನಿ, ಆದಾನಿ, ಟಾಟಾ ಬಾಂಡ್ ಖರೀದಿಸಿಲ್ಲ!!

ಇದೀಗ ಚುನಾವಣಾ ಆಯೋಗದ ಜಾಲತಾಣದ ಮೂಲಕ ಬಹಿರಂಗವಾಗಿರುವ ಚುನಾವಣಾ ಬಾಂಡ್ ಮಾಹಿತಿಯಲ್ಲಿ ರಾಜಕೀಯ ಪಕ್ಷಗಳಿಗೆ ಹಣ ನೀಡಿರುವ ಒಂದು ಸಾವಿರಕ್ಕೂ ಹೆಚ್ಚು ಕಂಪನಿಗಳ ಪೈಕಿ ಗೌತಮ್ ಆದಾನಿ, ಅಂಬಾನಿ, ಬಿರ್ಲಾ, ಟಾಟಾ ಮುಂತಾದ ದೈತ್ಯ ಕಂಪನಿಗಳು ಯಾವುದೇ ಚುನಾವಣಾ ಬಾಂಡ್ ಖರೀದಿಸಿರುವ ಮಾಹಿತಿ ಇಲ್ಲ. ಇಡೀ ಲೋಕಕ್ಕೆ ತಿಳಿದಿರುವ ಸಂಗತಿ ಏನೆಂದರೆ 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ದಿನದಿಂದ ಇದುವರೆಗೂ ಬಿಜೆಪಿ ಸರ್ಕಾರದ ಅತಿಹೆಚ್ಚು ಪ್ರಯೋಜನ ಪಡೆದಿರುವ ಇಬ್ಬರು ಉದ್ಯಮ ದೈತ್ಯತೆಂದರೆ ಗೌತಮ್ ಆದಾನಿ ಮತ್ತು ಮುಖೇಶ್ ಅಂಬಾನಿ. ಇವರ ಕಂಪನಿಗಳ ಲಾಭದ ಪ್ರಮಾಣ ಹಲವಾರು ಪಟ್ಟು ಹೆಚ್ಚಿರುವುದೇ ಅಲ್ಲದೇ ಲಕ್ಷಾಂತರ ಕೋಟಿ ರೂಪಾಯಿಗಳ ಲಾಭ ಗಳಿಸಿಕೊಂಡಿದ್ದಾರೆ. ಹಾಗಾದರೆ ಕಿಕ್ ಬ್ಯಾಕ್ ಸಕ್ರಮ ಯೋಜನೆಯಾಗಿರುವ ಚುನಾವಣಾ ಬಾಂಡ್ ಯೋಜನೆ ಮೂಲಕ ಈ ದೈತ್ಯ ಕಾರ್ಪೊರೇಟ್ ಕಂಪನಿಗಳು ಮೋದಿ ಸರ್ಕಾರಕ್ಕೆ ಮತ್ತು ಭಾರತೀಯ ಜನತಾ ಪಕ್ಷಕ್ಕೆ ಕಿಕ್ ಬ್ಯಾಕ್ ನೀಡಿಲ್ಲ ಎಂದಾದರೆ ಮತ್ತೆ ಯಾವ ಮೂಲಕ ನೀಡಿರಬಹುದು ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ಈ ವಿಷಯದಲ್ಲಿ ಮೋದಿಗೂ ಈ ಬಿಲಿಯಾದಿಪತಿಗಳೂ ನಡೆದಿರಬಹುದಾದ ಒಪ್ಪಂದ (ಡೀಲ್) ಯಾವ ಬಗೆಯದ್ದಿರಬಹುದು ಎಂಬ ಪ್ರಶ್ನೆಯೂ ಮುಂದೆ ಬಂದಿದೆ. 2014ರ ಚುನಾವಣೆಗೆ ಮುನ್ನ ಚುನಾವಣಾ ಪ್ರಚಾರಕ್ಕೆ ನರೇಂದ್ರ ಮೋದಿಯವರಿಗೆ ಖಾಸಗಿ ವಿಮಾನ ಒದಗಿಸಿದ್ದ ಗೌತಮ್ ಆದಾನಿ ನಂತರ ಲಕ್ಷ ಲಕ್ಷ ಕೋಟಿ ಲಾಭ ಗಳಿಸಿದಾಗ ಮೋದಿಗಾಗಲೀ, ಬಿಜೆಪಿ ಪಕ್ಷಕ್ಕಾಗಲೀ ಏನೂ ಕೊಡದಿರುವ ಸಾಧ್ಯತೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೆ?

More articles

Latest article