ಇನ್ನುಮುಂದೆ ದೇಶದಲ್ಲಿ ಪಿಟ್ ​ಬುಲ್ ಸೇರಿ ಹಲವು ಅಪಾಯಕಾರಿ ನಾಯಿಗಳನ್ನು ಸಾಕುವಂತಿಲ್ಲ: ಕೇಂದ್ರ ಸರ್ಕಾರ ಆದೇಶ

Most read

ಪಿಟ್ ​ಬುಲ್​, ಅಮೆರಿಕನ್​ ಬುಲ್ ​ಡಾಗ್​, ರೊಟ್ಟಿವೈಲರ್​ ಸೇರಿದಂತೆ ಹಲವಾರು ನಾಯಿಯ ತಳಿಗಳನ್ನು “ಅಪಾಯಕಾರಿ” ಎಂದು ಕೇಂದ್ರ ಸರ್ಕಾರ ಗುರುತಿಸಿದ್ದು, ಅಂತಹ ನಾಯಿಗಳನ್ನು ಸಂತಾನೋತ್ಪತ್ತಿ, ಸಾಕುವ, ಮಾರಾಟ ಮಾಡುವುದನ್ನು ದೇಶದಲ್ಲಿ ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.

ಕೇಂದ್ರ ಪಶುಸಂಗೋಪನೆ ಇಲಾಖೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ಮಾನವನ ಜೀವಕ್ಕೆ ಅಪಾಯ ತಂದೊಡ್ಡುವ ಪಿಟ್​ ಬುಲ್​, ಅಮೆರಿಕನ್​ ಬುಲ್ ​ಡಾಗ್​ ಸೇರಿ ಹಲವಾರು ವಿವಿಧ ತಳಿಯ ವಿದೇಶಿ ನಾಯಿಗಳನ್ನು ಸಾಕಲು ಅನುಮತಿ ನೀಡದಂತೆ ಸೂಚಿಸಿದೆ. ಜೊತೆಗೆ ಅಂತಹ ತಳಿಗಳ ನಾಯಿಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ನಿಷೇಧ ವಿಧಿಸಲಾಗಿದೆ.

ಮಕ್ಕಳು, ಹಿರಿಯರ ಮೇಲೆ ಮಾರಣಾಂತಿಕ ದಾಳಿ ಮಾಡಿ ಆಕ್ರಮಣ ಮಾಡುವ ನಾಯಿಗಳನ್ನು ಜನರು ಸಾಕುವುದಕ್ಕೆ ಅವಕಾಶ ನೀಡಬಾರದು. ನಾಯಿಗಳನ್ನು ವಿವಿಧ ಸ್ಪರ್ಧೆಗೆ ಬಳಸುವುದನ್ನೂ ನಿಷೇಧಿಸಬೇಕು ಎಂದು ಪ್ರಾಣಿ ದಯಾ ಸಂಘ (ಪೆಟಾ)ವು ಮನವಿ ಸಲ್ಲಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ.

ಕಳೆದ ಹಲವು ತಿಂಗಳಿನಿಂದ ಇಂತಹ ಅಪಾಯಕಾರಿ ನಾಯಿಗಳು ಮಕ್ಕಳು, ವಯೋವೃದ್ದರು ಹಾಗೂ ಯುವಕರನ್ನು ಬಿಡದೆ ಆಕ್ರಮಣ ಮಾಡಿ ಪ್ರಾಣಕ್ಕೆ ಸಂಚುಕಾರ ತಂದಿಟ್ಟಿ ಪ್ರಕರಣಗಳು ದಾಖಲಾದ ಬೆನ್ನಲ್ಲೇ ಹಲವು ದೂರುಗಳು ಕೇಂದ್ರ ಸರ್ಕಾರದ ಅಂಗಳಕ್ಕೆ ಹೋಗಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರವು ಇಂತಹ ಅಪಯಕಾರಿ ನಾಯಿ ತಳಿಗಳನ್ನು ಸಾಕುವುದು, ಬ್ರೀಡ್ ಮಾಡುವುದು, ಅಮದು ಮಾಡಿಕೊಳ್ಳುವುದು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಿದೆ.

ಪಿಟ್ ​ಬುಲ್ಸ್​ ನಾಯಿಯ ಮಾರಣಾಂತಿಕ ದಾಳಿ ಘಟನೆಗಳು ಈವರೆಗೆ ದೇಶದ ಹಲವೆಡೆ ವರದಿಯಾಗಿವೆ. ಇತ್ತೀಚಿಗೆ ದೆಹಲಿಯಲ್ಲಿ ಪಿಟ್ ಬುಲ್ ಕಚ್ಚಿದ್ದರಿಂದ ವ್ಯಕ್ತಿಯೊಬ್ಬರು ಕಾಲು ಮುರಿದು 17 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ನೆರೆಯವನ ಮೇಲೆ ದಾಳಿ ಮಾಡಲು ತಾನು ಸಾಕಿದ್ದ ಪಿಟ್​​ಬುಲ್ ಅನ್ನು ಮಾಲೀಕನೊಬ್ಬ ಛೂ ಬಿಟ್ಟಿದ್ದ. ಇದರಿಂದ ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡಿದ್ದ. ಗಾಜಿಯಾಬಾದ್‌ ನಲ್ಲಿ ಪಿಟ್ ಬುಲ್ ದಾಳಿಗೆ 10 ವರ್ಷದ ಮಗುವು ಸಾವು ಬದುಕಿನ ನಡುವೆ ಹೋರಾಟ ನಡೆಸಿತ್ತು.

ಇದಲ್ಲದೆ, ಹೆಚ್ಚಿನ ಪೆಟ್​​ ಶಾಪ್‌ ಗಳು ಮತ್ತು ಬ್ರೀಡರ್‌ ಗಳು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಪ್ರಾಣಿ ದಯಾ ಸಂಘಗಳಲ್ಲಿ ನೋಂದಣಿ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ನಾಯಿ ಸಾಕಣೆ ಮತ್ತು ಮಾರುಕಟ್ಟೆ ನಿಯಮಗಳು 2017 ಮತ್ತು ಪೆಟ್ ಶಾಪ್ ನಿಯಮಗಳು 2018 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಪಿಟ್​ಬುಲ್ ಟೆರಿಯರ್, ಟೋಸಾ ಇನು, ಅಮೆರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲೆರಿಯೊ, ಡೋಗೊ ಅರ್ಜೆಂಟಿನೋ, ಅಮೆರಿಕನ್ ಬುಲ್‌ಡಾಗ್, ಬೋರ್‌ಬೋಲ್, ಕಂಗಲ್, ಶಫರ್ಡ್​ ಡಾಗ್ಸ್​, ಟೊರ್ನ್‌ಜಾಕ್, ಬ್ಯಾಂಡೋಗ್, ಸರ್ಪ್ಲಾನಿನಾಕ್, ಜಪಾನೀಸ್ ಟೋಸಾ, ಅಕಿತಾ, ಮಾಸ್ಟಿಫ್ಸ್, ರೊಟ್ವೀಲರ್, ರೊಡೇಸಿಯನ್ ರಿಜ್​ಬ್ಯಾಕ್​, ವುಲ್ಫ್​ ಡಾಗ್ಸ್​, ಕೆನಾರಿಯೊ, ಅಕ್ಬಾಶ್ ಮತ್ತು ಮಾಸ್ಕೋ ಗಾರ್ಡ್​ಡಾಗ್ ನಾಯಿಗಳನ್ನು ನಿಷೇಧಿಸಲಾಗಿದೆ.

More articles

Latest article