ಬೆಂಗಳೂರು: ಭಾರತೀಯ ಜನತಾ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೆ ಟಿಕೆಟ್ ವಂಚಿತರ ಬೇಗುದಿ ಎಲ್ಲಡೆ ಕಾಣಿಸಿಕೊಳ್ಳುತ್ತಿದೆ. ಪಕ್ಷದ ನಾಯಕರ ವಿರುದ್ಧ ಬಹಿರಂಗ ಬಂಡಾಯ ಏಳುವ ಧೈರ್ಯ ಬಹುತೇಕರಿಗೆ ಇಲ್ಲದೇ ಇದ್ದರೂ ಚುನಾವಣೆಯಲ್ಲಿ ನೀಡಬಹುದಾದ ಒಳ ಏಟು ಪಕ್ಷಕ್ಕೆ ಹಿನ್ನೆಡೆ ತರುವ ಎಲ್ಲ ಸಾಧ್ಯತೆಗಳೂ ಕಾಣಿಸುತ್ತಿದೆ.
ಟಿಕೆಟ್ ವಂಚಿತ ನಾಯಕರು, ಮೋದಿಯವರೇ ನಮ್ಮ ನಾಯಕರು, ಪಕ್ಷ ಬಿಡೋದಿಲ್ಲ ಎಂದು ಹೇಳಿಕೆಗಳ ಮೇಲೆ ಹೇಳಿಕೆ ನೀಡುತ್ತಿದ್ದರೂ ಅಂತರಂಗದಲ್ಲಿ ಕುದಿಯುತ್ತಿದ್ದು, ಈ ಬೇಗುದಿ ಚುನಾವಣೆಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ತಮಗೆ ಟಿಕೆಟ್ ನೀಡಲಾಗುತ್ತಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಭಾವನಾತ್ಮಕ ಹೇಳಿಕೆ ನೀಡಿ, ಪಕ್ಷ ತೊರೆಯುವುದಿಲ್ಲ ಎಂಬ ಸ್ಪಷ್ಟನೆ ನೀಡಿದ್ದರು. ಆದರೆ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಅಭ್ಯರ್ಥಿ ಮಾಡಿರುವುದು ಸ್ಥಳೀಯ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಕ್ಷೇತ್ರದ ಕಡೆ ತಲೆ ಹಾಕಿಲ್ಲ ಎಂಬ ಗಂಭೀರ ಆರೋಪ ಎದುರಿಸಿ, ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಜನರಿಂದ ಗೋಬ್ಯಾಕ್ ಶೋಭಕ್ಕ ಎಂಬ ಅಭಿಯಾನದಿಂದ ಮುಜುಗರಕ್ಕೆ ಈಡಾಗಿದ್ದ ಶೋಭಾ ಅವರನ್ನು ಬೆಂಗಳೂರು ಉತ್ತರಕ್ಕೆ ಯಾಕೆ ಕಳಿಸಿದರು? ಬೆಂಗಳೂರು ಉತ್ತರ ಕ್ಷೇತ್ರವೇನು ಕಸದ ತೊಟ್ಟಿಯೇ, ಅಲ್ಲಿ ಏನೂ ಕೆಲಸ ಮಾಡದವರು ಇಲ್ಲಿ ಏನು ಮಾಡುತ್ತಾರೆ ಎಂಬುದು ಬಿಜೆಪಿ ನಾಯಕರ ವಾದವಾಗಿದೆ.
ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಭಾರೀ ನಿರಾಶೆ ಆಗಿದ್ದು, ಹುಬ್ಬಳ್ಳಿ-ಧಾರವಾಡ ಅಥವಾ ಹಾವೇರಿಯಿಂದ ಅವರು ಟಿಕೆಟ್ ಬಯಸಿದ್ದರು. ಮೋದಿ ಆಪ್ತ ಬಳಗದಲ್ಲಿರುವ ಪ್ರಹ್ಲಾದ ಜೋಷಿ ನಿರೀಕ್ಷೆಯಂತೆ ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ ಕ್ಷೇತ್ರದ ಟಿಕೆಟ್ ಪಡೆದುಕೊಂಡಿದ್ದಾರೆ. ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಬಾಕಿ ಇದ್ದು, ಅಲ್ಲಾದರೂ ತಮ್ಮ ಹೆಸರು ಬರಬಹುದೇ ಎಂಬ ನಿರೀಕ್ಷೆಯಲ್ಲಿ ಜಗದೀಶ್ ಶೆಟ್ಟರ್ ಇದ್ದಾರೆ. ಆದರೆ ಪಕ್ಷಕ್ಕೆ ಮರಳಿ ಬಂದ ನಂತರ ಜಗದೀಶ್ ಶೆಟ್ಟರ್ ಅವರಿಗೆ ಮೊದಲಿನ ಮರ್ಯಾದೆ ಸಿಗುತ್ತಿಲ್ಲ. ಪೋಸ್ಟರ್, ಬ್ಯಾನರುಗಳಲ್ಲೂ ಅವರ ಹೆಸರು ಕಾಣಿಸುತ್ತಿಲ್ಲ, ಪಕ್ಷದ ಸಭೆಗಳಿಗೂ ಅವರಿಗೆ ಆಹ್ವಾನ ನೀಡಲಾಗುತ್ತಿಲ್ಲ. ಹೀಗಾಗಿ ಜಗದೀಶ್ ಶೆಟ್ಟರ್ ಮತ್ತೆ ಮುನಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಶಿಷ್ಯನಿಂದಲೇ ಸೋಲು ಅನುಭವಿಸಿದ ಸಿ.ಟಿ.ರವಿ ಈಗ ಅಕ್ಷರಶಃ ಬೀದಿಗೆ ಬಿದ್ದಂತಾಗಿದೆ. ಈ ಬಾರಿ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿ ಹೇಗಾದರೂ ಟಿಕೆಟ್ ಗಿಟ್ಟಿಸಬೇಕು ಎಂದು ಅವರು ಪ್ರಯತ್ನ ನಡೆಸಿದ್ದರು. ಅವರ ಪ್ರಯತ್ನದ ಭಾಗವಾಗಿ ಶೋಭಾ ಕರಂದ್ಲಾಜೆಯವರೇನೋ ಕ್ಷೇತ್ರದಿಂದ ಹೊರಗೆ ಹೋದರು. ಆದರೆ ಸಿ.ಟಿ.ರವಿಗೆ ಟಿಕೆಟ್ ಸಿಗಲಿಲ್ಲ. ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಅಲ್ಲಿ ಟಿಕೆಟ್ ದೊರಕಿದೆ. ಹೀಗಾಗಿ ಸಿ.ಟಿ.ರವಿ ಇನ್ನಷ್ಟು ವರ್ಷಗಳ ಕಾಲ ನಿರುದ್ಯೋಗಿಯಾಗಬೇಕಿದೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಾನೇ ರಾಜ ಎಂಬಂತೆ ಮೆರೆಯುತ್ತಿದ್ದ ಪ್ರತಾಪ್ ಸಿಂಹ ಅವರಿಗೆ ದೊಡ್ಡ ಆಘಾತವೇ ಆಗಿದೆ. ಅವರ ಜಾಗವನ್ನು ರಾಜಮನೆತನದ ಯದುವೀರ ಒಡೆಯರ್ ತುಂಬಿದ್ದಾರೆ. ಅಲ್ಲಿಗೆ ಪ್ರತಾಪ್ ಸಿಂಹ ಅವರ ಮೈಸೂರು ನಂಟು ಮುಗಿದಂತಾಗಿದೆ. ಯದುವೀರ್ ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪ್ರತಾಪ್ ಸಿಂಹ ಹೇಳುತ್ತಿದ್ದರೂ, ಕಳೆದ ಎರಡು ಮೂರು ದಿನಗಳಿಂದ ಯದುವೀರ್ ಕುರಿತು ಅವರು ಆಡಿರುವ ಮಾತುಗಳು ಪಕ್ಷದ ನಾಯಕರನ್ನು ಕೆರಳಿಸಿದೆ. ಯದುವೀರ್ ವಿರುದ್ಧ ಎದುರಾಳಿ ಪಕ್ಷದವರು ಬಳಸಬಹುದಾದ ಎಲ್ಲ ಅಸ್ತ್ರಗಳನ್ನು ಪ್ರತಾಪ್ ಸಿಂಹ ಅವರೇ ನೀಡಿದ್ದಾರೆ. ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಕೆಲಸ ಮಾಡುವ ಎಂಪಿ ನಿಮಗೆ ಬೇಕೇ ಅಥವಾ ನೀವು ಯಾರದ್ದೋ ಮನೆ ಮುಂದೆ ಕಾದು ನಿಲ್ಲುತ್ತೀರೇ? ಎಂದು ಪ್ರತಾಪ್ ಸಿಂಹ ಹೇಳಿದ್ದರು. ಅರಮನೆ ಕುರಿತು ಅನೇಕ ವ್ಯಾಜ್ಯಗಳು ನ್ಯಾಯಾಲಯಗಳಲ್ಲಿ ಇದ್ದು, ರಾಜಮನೆತನದ ಪಕ್ಷ ಬಿಟ್ಟು ಜನರ ಹಿತದಲ್ಲಿ ಅವುಗಳಲ್ಲಿ ರಾಜಿಯಾಗಲು ಯದುವೀರ ಒಡೆಯರ್ ಸಿದ್ಧರಿದ್ದಾರೆಯೇ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದರು. ಎಸಿ ಕೊಠಡಿ ಬಿಟ್ಟು ಬೀದಿಗೆ ಬರುವುದಾದರೆ ನನ್ನ ಸ್ವಾಗತ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಇವುಗಳನ್ನು ಪ್ರಸ್ತಾಪಿಸುವ ಸಾಧ್ಯತೆ ಹೆಚ್ಚು. ಪ್ರತಾಪ್ ಸಿಂಹ ಏನೇ ಹೊರಗೆ ಹೇಳಿಕೊಂಡರೂ ಈ ಚುನಾವಣೆಯಲ್ಲಿ ಅವರೂ ಸಹ ಒಳ ಏಟು ನೀಡುವ ಸಾಧ್ಯತೆಯೇ ಹೆಚ್ಚು.
ಹಾವೇರಿಯಲ್ಲಿ ಶಿವಕುಮಾರ್ ಉದಾಸಿ, ಕೊಪ್ಪಳದಲ್ಲಿ ಕರಡಿ ಸಂಗಣ್ಣ ಟಿಕೆಟ್ ವಂಚಿತರಾಗಿದ್ದು ಈಗಾಗಲೇ ತಮ್ಮ ಆಪ್ತರೊಂದಿಗೆ ಅಸಮಾಧಾನ ಹಂಚಿಕೊಂಡಿದ್ದಾರೆ. ಈ ಅಸಮಾಧಾನ ಇನ್ನಷ್ಟು ಸ್ಫೋಟಗೊಂಡು ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆಯೇ ಕಾದು ನೋಡಬೇಕು.
ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟಿಕೆಟ್ ಕಳೆದುಕೊಂಡಿದ್ದು, ಇವರಿಗೆ ಟಿಕೆಟ್ ತಪ್ಪಿದ್ದಕ್ಕೆ ಯಾರಲ್ಲೂ ಅಸಮಾಧಾನ ಇದ್ದಂತೆ ಕಾಣುತ್ತಿಲ್ಲ. ಬದಲಾಗಿ ಕಟೀಲ್ ಹೋಗಿದ್ದೇ ಒಳ್ಳೆಯದಾಯ್ತು ಎಂಬ ಭಾವನೆ ಎಲ್ಲರಲ್ಲಿದೆ. ಲೋಕಸಭಾ ಸದಸ್ಯರಾಗಿ ಮೋದಿ ಹೆಸರು ಹೇಳಿಕೊಂಡು ಗೆದ್ದು ಬರುವುದನ್ನು ಬಿಟ್ಟರೆ ಕ್ಷೇತ್ರಕ್ಕೆ ಅವರಿಂದ ಏನೂ ಆಗಿಲ್ಲ ಎಂದು ಪಕ್ಷದ ಮುಖಂಡರೇ ಹೇಳುತ್ತಾರೆ. ಈ ಬಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಎಂಬುವವರಿಗೆ ಅಲ್ಲಿ ಟಿಕೆಟ್ ನೀಡಲಾಗಿದೆ. ಬಿಜೆಪಿ ಭದ್ರಕೋಟೆಯಾದ ದಕ್ಷಿಣ ಕನ್ನಡದಲ್ಲಿ ಬ್ರಿಜೇಶ್ ಅವರಿಗೆ ದೊಡ್ಡ ಸವಾಲೇನೂ ಎದುರಾಗಲಾರದು. ಇನ್ನೊಂದೆಡೆ ನಳೀನ್ ಕುಮಾರ್ ಕಟೀಲ್ ಅವರಿಗೆ ಪಕ್ಷದ ವಿರುದ್ಧ ಬಂಡಾಯ ಸಾರುವ ಧೈರ್ಯ ಸಾಹಸ ಕನಸು ಮನಸಲ್ಲೂ ಇಲ್ಲ.
ಬೀದರ್ ಕ್ಷೇತ್ರದಲ್ಲಿ ಭಗವಂತ್ ಖೂಬಾ ಅವರಿಗೆ ಮತ್ತೆ ಟಿಕೆಟ್ ನೀಡಿರುವುದು ಆ ಕ್ಷೇತ್ರದ ಬಿಜೆಪಿ ಶಾಸಕರುಗಳು, ನಾಯಕರ ಕಣ್ಣು ಕೆಂಪಾಗಿಸಿದೆ. ಶಾಸಕರಾದ ಪ್ರಭು ಚೌಹಾಣ್, ಶರಣು ಸಲಗರ ಬಹಿರಂಗವಾಗಿಯೇ ಖೂಬಾ ವಿರುದ್ಧ ಸಮರ ಸಾರಿದ್ದರು. ಅಲ್ಲದೆ ಹಲವು ನಾಯಕರು ಯಾವುದೇ ಕಾರಣಕ್ಕೂ ಖೂಬಾ ಅವರಿಗೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದರು. ಈಗ ಖೂಬಾ ಅವರಿಗೆ ಮತ್ತೆ ಟಿಕೆಟ್ ನೀಡಿರುವುದರಿಂದ ಶಾಸಕರುಗಳು, ಮುಖಂಡರು ಅಸಹಕಾರದ ಬಾವುಟ ಹಿಡಿಯುವುದು ನಿಶ್ಚಿತ.
ಇನ್ನು ಪಕ್ಷದ ವಿರುದ್ಧ ಬಹಿರಂಗ ಬಂಡಾಯವನ್ನೇ ಸಾರಿದಂತೆ ಕಾಣಿಸಿಕೊಳ್ಳುತ್ತಿರುವವರು ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದ ಈಶ್ವರಪ್ಪ ಪಕ್ಷನಿಷ್ಠೆಯನ್ನು ಪ್ರದರ್ಶಿಸಿ ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಘೋಷಿಸಿಕೊಂಡಿದ್ದರು. ಆದರೆ ಈ ಬಾರಿ ಅವರ ಮನಸ್ಥಿತಿ ಬದಲಾದಂತಿದೆ. ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಕೊಡಿ ಎಂದು ಈಶ್ವರಪ್ಪ ಅಂಗಲಾಚಿದ್ದರು. ಆದರೆ ಹೈಕಮಾಂಡ್ ಕ್ಯಾರೇ ಎಂದಿಲ್ಲ. ಹೀಗಾಗಿ ಈಶ್ವರಪ್ಪ ಬುಸುಬುಸು ಎನ್ನುತ್ತಿದ್ದಾರೆ. ಯಡಿಯೂರಪ್ಪ ವಿರುದ್ಧ ಕಿಡಿಕಾರುತ್ತಿದ್ದಾರೆ. ನನ್ನ ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಗುಟುರು ಹಾಕಿದ್ದಾರೆ. ಆದರೆ ದೆಹಲಿಯಿಂದ ಒಂದು ಫೋನ್ ಬಂದರೆ ಈಶ್ವರಪ್ಪ ಮೆತ್ತಗಾಗುತ್ತಾರೆ ಎಂದು ಅವರನ್ನು ಬಲ್ಲವರು ಹೇಳುತ್ತಾರೆ. ಪಕ್ಷ ಬಿಡುವ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಧೈರ್ಯ, ಛಲ ಈಶ್ವರಪ್ಪನವರಿಗೆ ಇದ್ದಂತಿಲ್ಲ. ಮಿಗಿಲಾಗಿ ತನ್ನ ವಿರೋಧಿಗಳನ್ನು ಐಟಿ, ಇಡಿ ಬಿಟ್ಟು ಕಂಗಾಲು ಮಾಡುವ ಬಿಜೆಪಿ ಹೈಕಮಾಂಡ್ ತಂತ್ರಗಳು ಅವರಿಗೆ ಗೊತ್ತಿಲ್ಲದೇ ಏನಿಲ್ಲ. ಹೀಗಾಗಿ ಈಶ್ವರಪ್ಪ ಬಹಿರಂಗ ಬಂಡಾಯ ಸಾರುವ ಸಾಧ್ಯತೆ ಇಲ್ಲ. ಆದರೆ ಶಿವಮೊಗ್ಗ ಸಂಸದ, ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ವಿರುದ್ಧ ಮುಂದಿನ ಚುನಾವಣೆಯಲ್ಲಿ ಮುಗುಮ್ಮಾಗಿ ಕೆಲಸ ಮಾಡುವ ಸಾಧ್ಯತೆಯನ್ನು ಇಲ್ಲವೆನ್ನಲಾಗದು.
ಭಾರತೀಯ ಜನತಾ ಪಕ್ಷ ರಾಜ್ಯದ 28 ಕ್ಷೇತ್ರಗಳ ಪೈಕಿ ಈಗಾಗಲೇ 20 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಮೂರು ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಉಳಿದಿರುವ ಐದು ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲ ಉಳಿದುಕೊಂಡಿದೆ. ಉತ್ತರ ಕನ್ನಡದಲ್ಲಿ ಅನಂತ ಕುಮಾರ್ ಹೆಗಡೆಗೆ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂಬುದು ನಿಶ್ಚಿತ. ಇಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಥವಾ ಅನಂತ್ ನಡುವೆ ಯಾರಿಗಾದರೂ ಟಿಕೆಟ್ ಸಿಗಬಹುದು. ಚಿಕ್ಕಬಳ್ಳಾಪುರದಲ್ಲಿ ಡಾ. ಕೆ.ಸುಧಾಕರ್ ಟಿಕೆಟ್ ಕೇಳಿದ್ದಾರೆ. ಅಲೋಕ್ ವಿಶ್ವನಾಥ್ ಎಂಬುವವರು ಕೂಡ ಸ್ಪರ್ಧೆಯಲ್ಲಿದ್ದು ಇಬ್ಬರ ಪೈಕಿ ಯಾರಿಗೆ ಟಿಕೆಟ್ ದೊರೆಯಲಿದೆ ಎಂಬ ಕುತೂಹಲ ಉಳಿದುಕೊಂಡಿದೆ.
ಚಿತ್ರದುರ್ಗದಲ್ಲಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೆಸರು ಕೇಳಿಬರುತ್ತಿದೆ. ಹಾಲಿ ಸಂಸದ ಎ.ನಾರಾಯಣಸ್ವಾಮಿ ಪ್ರಬಲ ಸ್ಪರ್ಧಿಯಾಗಿದ್ದು, ಜೊತೆಗೆ ಮಾಜಿ ಸಂಸದ ಜನಾರ್ದನ ಸ್ವಾಮಿ ಕೂಡ ಸೆಣೆಸುತ್ತಿದ್ದಾರೆ. ರಾಯಚೂರು ಕ್ಷೇತ್ರದ ಟಿಕೆಟ್ ಘೋಷಣೆ ಮಾಡದ ಹಿನ್ನೆಲೆಯಲ್ಲಿ ಹಾಲಿ ಸಂಸದ ರಾಜಾ ಅಮರೇಶ್ ನಾಯಕ್ ಗೆ ತಲೆನೋವು ಶುರುವಾಗಿದೆ. ಇಲ್ಲಿ ಬಿ.ವಿ.ನಾಯಕ್ ಕೂಡ ಟಿಕೆಟ್ ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಲವು ನಾಯಕರಿಗೆ ಟಿಕೆಟ್ ನಿರಾಕರಿಸಿದ್ದು, ಸಾಕಷ್ಟು ಬೇಗುದಿಗೆ ಕಾರಣವಾಗಿತ್ತು. ಅದರ ಪರಿಣಾಮ ಚುನಾವಣಾ ಫಲಿತಾಂಶದಲ್ಲೂ ಕಾಣಿಸಿಕೊಂಡಿತ್ತು. ಈ ಬಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಬಿಜೆಪಿ ಹಲವು ಪ್ರಯೋಗಗಳನ್ನು ಮಾಡಿದ್ದು, ಸ್ಥಳೀಯ ನಾಯಕರಲ್ಲಿ ಗೊಂದಲ ಮೂಡಿಸಿದೆ. ಟಿಕೆಟ್ ವಂಚಿತರು ನೇರವಾಗಿ ಬಂಡಾಯದ ಬಾವುಟ ಹಿಡಿಯದೇ ಹೋದರೂ, ಒಂದೇ ಪಕ್ಷದ ಅಭ್ಯರ್ಥಿಗೆ ಒಳ ಏಟು ನೀಡುವ ಅಥವಾ ಅರೆಮನಸಿನಿಂದ ಕೆಲಸ ಮಾಡುವ ಸಾಧ್ಯತೆ ಹೆಚ್ಚಾಗಿದೆ.