ಹೊಸದಿಲ್ಲಿ: ಸಂವಿಧಾನವನ್ನು ಬದಲಿಸುವ ಭಾರತೀಯ ಜನತಾ ಪಕ್ಷಕ್ಕೆ 400 ಸ್ಥಾನಗಳನ್ನು ಗೆಲ್ಲುವ ಅವಶ್ಯಕತೆ ಎಂದು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನೀಡದೇ ಇರಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆಗೆ ಈಗಾಗಲೇ ಬಿಜೆಪಿ ಶಿಸ್ತು ಸಮಿತಿ ಕಾರಣ ಕೇಳಿ ನೋಟೀಸ್ ನೀಡಿದ್ದು, ಈ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ. ಇದು ಅವರ ಸ್ವಂತ ಅಭಿಪ್ರಾಯ ಎಂದು ಸಂವಿಧಾನ ವಿರೋಧಿ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿದೆ.
ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತ್ ಕುಮಾರ್ ಹೆಗಡೆ ಪದೇಪದೇ ಕೋಮುದ್ವೇಷ ಹರಡುವ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿರುವುದಲ್ಲದೆ, ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ.
ಭಾರತೀಯ ಜನತಾ ಪಕ್ಷ ಈಗಾಗಲೇ ಘೋಷಿಸಿರುವ 195 ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಗಡೆ ಮಾದರಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡುವವರಿಗೆ ಕೊಕ್ ನೀಡಿ ಹೊಸಬರಿಗೆ ಅವಕಾಶ ನೀಡಲಾಗಿದೆ. ದೆಹಲಿಯ ಸಂಸದರಾದ ರಮೇಶ್ ಬಿದೂರಿ ಮತ್ತು ಪರ್ವೇಶ ಸಾಹಿಬ್ ಸಿಂಗ್ ವರ್ಮಾ ಅವರಿಗೂ ಅವರ ಹರಕು ಬಾಯಿಯಿಂದಾಗಿ ಟಿಕೆಟ್ ನೀಡಲಾಗಿಲ್ಲ.
ಪಕ್ಷಕ್ಕೆ ಗೆಲ್ಲಬಲ್ಲ ಶಕ್ತಿ ಉಳ್ಳ ಅಭ್ಯರ್ಥಿಗಳೇ ಮುಖ್ಯವಾದರೂ ಸಹ, ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತ ಬಂದಿರುವವರ ಕುರಿತೂ ನಾವು ಒಂದು ಕಣ್ಣು ಇಟ್ಟಿರುತ್ತೇವೆ. ಇಂಥವರಿಗೆ ಟಿಕೆಟ್ ನೀಡದೇ ಇರುವುದು ಸಾರ್ವಜನಿಕ ಜೀವನದಲ್ಲಿ ನಾವು ಹೇಗೆ ವರ್ತಿಸಬೇಕು ಎಂಬುದಕ್ಕೆ ಸ್ಪಷ್ಟ ಸಂದೇಶ ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಲವು ಸಂದರ್ಭಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ ಪಕ್ಷದ ಮುಖಂಡರಿಗೆ ಸಂದೇಶ ನೀಡಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು NDTV ಗೆ ತಿಳಿಸಿದ್ದಾರೆ.
ದೇಶದ ಸಂವಿಧಾನವನ್ನು ಹೊಸದಾಗಿ ಬರೆಯಬೇಕು, ಅದಕ್ಕಾಗಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು. ಈ ಹಿಂದೆಯೂ ಸಹ ಅವರು ನಾವು (ಬಿಜೆಪಿ) ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂದು ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ಪಕ್ಷ ಭಾರತ ಸಂವಿಧಾನದಲ್ಲಿ ಅನವಶ್ಯಕ ವಿಷಯಗಳನ್ನು ತುಂಬಿದೆ. ಹಿಂದೂ ಸಮಾಜವನ್ನು ಕುಗ್ಗಿಸುವ ಹಲವಾರು ಕಾನೂನುಗಳು ಸಂವಿಧಾನದಲ್ಲಿ. ಇದೆಲ್ಲ ಬದಲಾಗಬೇಕು. ಈಗ ಇರುವ ಸ್ಥಾನಗಳ ಬಲದಲ್ಲಿ ಬಿಜೆಪಿಗೆ ಸಂವಿಧಾನ ಬದಲಿಸಲು ಸಾಧ್ಯವಿಲ್ಲ. ಸಂವಿಧಾನಕ್ಕೆ ತಿದ್ದುಪಡಿಯಾಗಬೇಕೆಂದರೆ ನಾವು 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ಹೆಗಡೆ ಶನಿವಾರ ಬಿಜೆಪಿ ಸಭೆಯೊಂದರಲ್ಲಿ ಹೇಳಿದ್ದರು.
ಹೆಗಡೆ ಹೇಳಿಕೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿಕೆ ನೀಡಿದ ಕರ್ನಾಟಕ ಬಿಜೆಪಿ, ಸಂವಿಧಾನದ ಕುರಿತ ಅನಂತ್ ಕುಮಾರ್ ಹೆಗಡೆ ಹೇಳಿಕೆ ಅವರ ವೈಯಕ್ತಿಕ, ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಭಾರತೀಯ ಜನತಾ ಪಕ್ಷ ಯಾವತ್ತಿಗೂ ಭಾರತ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯವನ್ನು ಮಾಡುತ್ತದೆ ಎಂದು ಪೋಸ್ಟ್ ಮಾಡಿತ್ತು.
ಬಿಜೆಪಿ ನಾಯಕ ಗೌರವ್ ಭಾಟಿಯಾ, ಹೆಗಡೆ ಹೇಳಿಕೆ ಸಂಬಂಧಿಸಿದಂತೆ ಅವರಿಂದ ಸ್ಪಷ್ಟನೆ ಕೇಳಲಾಗಿದೆ ಎಂದು ANI ಗೆ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿದ್ದರು.
ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸುವ 20 ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಸಿದ್ಧವಾಗಿದ್ದು, ಎರಡನೇ ಪಟ್ಟಿ ಬಿಡುಗಡೆ ಸಂದರ್ಭದಲ್ಲಿ ಈ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲಾಗುವುದು. ಈ ಬಾರಿ ಕರ್ನಾಟಕದಿಂದ 10 ಹೊಸ ಮುಖಗಳು ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇದೆ. ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಅವರುಗಳನ್ನೂ ಸಹ ಈ ಬಾರಿ ಕಣಕ್ಕಿಳಿಸುವ ಸಂಭವವಿದೆ.