ಸಂವಿಧಾನದ ಸಮಾನತೆಯ ಆಶಯ ಅನುಷ್ಠಾನ ಇಂದು ಸುಲಭವಾಗಿದೆಯೇ? ನಮ್ಮವರೊಡನೆಯೇ ಹೋರಾಡಬೇಕಿರುವ ಈ ಸ್ಥಿತಿಯಲ್ಲಿ ಲಿಂಗ ಸಮಾನತೆಯ ದಾರಿಯಲ್ಲಿರುವ ಅಡೆತಡೆಗಳೇನು, ಮಹಿಳೆಯರೇನು ಮಾಡಬೇಕು ಎಂಬ ಕುರಿತು ಸಾಮಾಜಿಕ ಚಿಂತಕರೂ, ಲೇಖಕರೂ ಆಗಿರುವ ರೂಪ ಹಾಸನ ಅವರು ಬರೆದಿರುವ ಲೇಖನ ಇಲ್ಲಿದೆ
ನೂರಾ ಹದಿನಾಲ್ಕನೆಯ, ಮತ್ತೊಂದು ಅಂತರಾಷ್ಟಿçÃಯ ಮಹಿಳಾ ದಿನಾಚರಣೆ! “ಮಹಿಳೆಯರಲ್ಲಿ ಹೂಡಿಕೆ ಮಾಡಿ: ಪ್ರಗತಿಯನ್ನು ವೇಗಗೊಳಿಸಿ” ಎಂಬುದು ಈ ಬಾರಿಯ ಘೋಷಣೆ! ಇದು ಭಾರತದ ಹೆಣ್ಣು ಸಂಕುಲಕ್ಕೆ ಅದೆಷ್ಟು ಅನ್ವಯವಾಗುತ್ತದೋ ಗೊತ್ತಿಲ್ಲ. ಈ ದಿನಾಚರಣೆಯೂ ಹೆಚ್ಚಾಗಿ ಕೃತಕ ವಾರ್ಷಿಕ ಆಚರಣೆಯಾಗಿಬಿಟ್ಟಿರುವ ಕಾಲದಲ್ಲಿ, ಭಾರತ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅದ್ಧೂರಿ ಆಡಂಬರಗಳೂ ಮುಗಿದಿವೆ! ಇನ್ನೀಗಲಾದರೂ ಭಾರತದ ಅಂದಾಜು ಅರ್ಧದಷ್ಟಿರುವ ಹೆಣ್ಣು ಸಂಕುಲದ ಪರಿಸ್ಥಿತಿ ಈಗ ಯಾವ ಹಂತ ತಲುಪಿದೆ ಎಂಬುದನ್ನಳೆಯಲು, ಬಹುಶಃ ಇದು ಸೂಕ್ತ ಕಾಲಘಟ್ಟ. ಹೆಣ್ಣಿನ ಸ್ವಾತಂತ್ರ‍್ಯ, ಸಮಾನತೆ, ಸ್ವಾಯತ್ತೆ, ಅಸ್ಮಿತೆ, ಸುರಕ್ಷತೆ, ನೆಮ್ಮದಿ- ಗಳಿಸಬೇಕೆಂಬ ತೀವ್ರ ಹಂಬಲದAತೆ ಸಾಧಿಸಿದ್ದೆಷ್ಟು, ಇನ್ನೂ ತಲುಪಬೇಕಿರುವ ಹಾದಿ ಎಷ್ಟು ದೂರ, ಎಷ್ಟು ದುರ್ಗಮ? ಪಿತೃಪ್ರಾಧಾನ್ಯ ಕುಟುಂಬ, ಪುರುಷ ಕೇಂದ್ರಿತ ಸಮಾಜ, ಪುರುಷಾಳ್ವಿಕೆಯಲ್ಲಿ ಅನುಭವಿಸಬೇಕಾಗಿ ಬಂದಿರುವ ಅಸಮಾನತೆಯ ತಳಮಳ, ತಾರತಮ್ಯದ ಕಳವಳದೊಂದಿಗೆ ಈಗ ದೌರ್ಜನ್ಯದ ಸಂಕಟ, ಜಾತಿ/ಮತಗಳ ಹುನ್ನಾರ, ವ್ಯಾಪಾರೀ ಜಗತ್ತಿನ ಕ್ರೌರ್ಯ, ಭ್ರಷ್ಟತೆಯ ಗಾಳ, ರಾಜಕೀಯದ ಷಡ್ಯಂತ್ರ… ಎಲ್ಲವೂ ಸೇರಿಬಿಟ್ಟಿವೆ! ಹೀಗಿರುವಾಗ ಇವೆಲ್ಲಕ್ಕೆ ಅರಿವಿದ್ದೋ ಇಲ್ಲದೆಯೋ ಬಲಿಪಶುವಾಗಬೇಕಿರುವ ಹೆಣ್ಣು ಸಂಕುಲದ ಸ್ಥಿತಿ ಮತ್ತಷ್ಟು ಸೂಕ್ಷ್ಮವಾಗುತ್ತಾ ಸಾಗಿದೆ.
“ಮಹಿಳೆ ಎಲ್ಲಿ ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸುತ್ತವೆ” ಎಂದು ಸನಾತನ ಸುಳ್ಳುಗಳನುದುರಿಸುವುದು ಒಂದೆಡೆಯಾದರೆ, ಬಂಧನದಿAದ ಬಿಡುಗಡೆಗೊಂಡ ಬೆರಳೆಣಿಕೆಯ ಕೆಲ ಹೆಣ್ಣುಗಳು, ‘ಇಂದು ಮಹಿಳೆ ಪುರುಷನಿಗೆ ಸಮಾನಳಾಗಿದ್ದಾಳೆ. ಅವನಿಗಿಂಥ ಯಾವುದರಲ್ಲೂ ಕಡಿಮೆ ಇಲ್ಲ’ ಎಂದು ನಾಲ್ಕೆöÊದು ಸಾಧಿತ, ಧೀರೋದ್ಧಾತ್ತ ಮಹಿಳೆಯರ ಹೆಸರು ಉದ್ಘರಿಸಿ, ಹೆಮ್ಮೆ ಪಟ್ಟುಕೊಳ್ಳುವ ಎರಡು ಅತಿಗಳ ನಡುವೆ ನಾವಿದ್ದೇವೆ! ಆದರೆ ಮೇಲ್ಪದರದ ಈ ಎರಡೂ ಬಣ್ಣದ ಪರದೆಗಳನ್ನು, ಪದರ ಪದರವಾಗಿ ಬಿಚ್ಚುತ್ತಾ ಹೋದರೆ ಕಣ್ಕಟ್ಟಿನ ಒಳಗಿರುವ ವಾಸ್ತವದ ಬೇರೆಯದೇ ಹೆಣ್ಣಿನ ‘ಅಸಮಾನ ಭಾರತ’ ಕಾಣಲಾರಂಭಿಸುತ್ತದೆ!
ಇಂದು ಅನೇಕ ಎಳೆಯ ಕಂದಮ್ಮಗಳೂ ಪುರುಷ ವಿಕೃತಿಗೆ, ಬಲಾತ್ಕಾರಕ್ಕೆ ಸಿಲುಕಿ ನಲುಗುತ್ತಿವೆ. ಅತ್ಯಾಚಾರದ ಪ್ರಮಾಣ ಏರುತ್ತಾ ಹೋಗಿ, ಈಗ ಪ್ರತಿ 15 ನಿಮಿಷಕ್ಕೊಬ್ಬ ಹೆಣ್ಣುಮಗಳ ಅತ್ಯಾಚಾರವಾಗುವ ಹಂತ ತಲುಪಿ, ಕಳೆದೊಂದು ದಶಕದಲ್ಲಿ 1200%ರಷ್ಟು ಅತ್ಯಾಚಾರಗಳು ಹೆಚ್ಚಳವಾಗಿರುವುದು ರಾಷ್ಟಿçÃಯ ದಾಖಲೆಯಲ್ಲಿ ಸೇರಿ ಹೋಗಿದೆ! ಇದರಲ್ಲಿ ವ್ಯಾಪಕವಾಗುತ್ತಿರುವ ಸಾಮೂಹಿಕ ಅತ್ಯಾಚಾರಗಳೂ ಸೇರಿ, ಪುರುಷ ಕ್ರೌರ್ಯದ ಹೀನತೆಗೆ ದಿಗ್ಬ್ರಾಂತಿಯಾಗುತ್ತಿದೆ. ದಾಖಲಾಗದ ದೌರ್ಜನ್ಯದ ಪ್ರಕರಣಗಳ ಸಂಖ್ಯೆ ಅದಿನ್ನೆಷ್ಟಿದೆಯೋ! ಇಷ್ಟೇ ಅಲ್ಲ- ಗರ್ಭದಲ್ಲೇ ಹೆಣ್ಣನ್ನು ಹೊಸಕಿ ಬಿಸಾಡಲಾಗುತ್ತಿದೆ. ಎಗ್ಗಿಲ್ಲದೇ ನಡೆಯುತ್ತಿರುವ ಹೆಣ್ಣುಮಕ್ಕಳ ಕಣ್ಮರೆ, ಕಳ್ಳಸಾಗಣೆ, ಮಾರಾಟ, ಆಸಿಡ್ ದಾಳಿ, ಮರ್ಯಾದಾ ಹೀನ ಹತ್ಯೆ, ಲೈಂಗಿಕ ಜೀತ, ಬಂಡವಾಳಶಾಹಿ ಕಪಿಮುಷ್ಠಿಗೆ ಸಿಕ್ಕ ವೇಶ್ಯಾವಾಟಿಕೆ ಮತ್ತು ಅದರ ಅಸಂಖ್ಯ ರೂಪಗಳು, ಕಡಿವಾಣವಿಲ್ಲದ ಬಾಲ್ಯವಿವಾಹ, ಅನವಶ್ಯಕ ಗರ್ಭಕೋಶಗಳ ಹನನ…. ಒಂದೇ ಎರಡೇ? ಈ ಪರಿಯಲ್ಲಿ ಪ್ರತಿ ಕ್ಷಣ, ಹೆಣ್ಣು ಜೀವದ ಮೇಲಿನ ಕ್ರೌರ್ಯಗಳು ಅವಿರತ ಇಲ್ಲಿ ನಡೆಯುತ್ತಿವೆ.
ನಮ್ಮೀ ದೇಶದಲ್ಲಿ ಹೆಣ್ಣು ಜೀವವನ್ನು ಹಿಂಡುತ್ತಿರುವ ಹಿಂಸೆಯ ಬಗೆಗಳು ಅತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣವಾಗಿಬಿಟ್ಟಿವೆ. ಹೆಣ್ಣು ಸಂಕುಲವನ್ನು ಭೀತಿಗೊಳಿಸುವ, ದಮನಗೊಳಿಸುವ, ನಿರ್ನಾಮಗೊಳಿಸುವ ಕರಾಳ ಹಾದಿಯಲ್ಲಿ ಭಾರತ ದಾಪುಗಾಲಿಡುತ್ತಿರುವಂತೆ ಗೋಚರಿಸುತ್ತಿದೆ! ಹೀಗಾಗಿ ಇವೆಲ್ಲವೂ ಸೇರಿ- ಈ ಅಭಿವೃದ್ಧಿಯದೆಂದೇ ಗುರುತಿಸಲಾಗುತ್ತಿರುವ ಕಾಲಘಟ್ಟದಲ್ಲೂ, ಸಮಾಜದ ಒಟ್ಟು ಅಭಿವೃದ್ಧಿ ಪರಿಕಲ್ಪನೆಯಿಂದ ಮಹಿಳೆ ದೂರವೇ ಉಳಿಯುವಂತಾಗಿರುವುದೂ ಮತ್ತು ಅವಳ ಸಂಕಟದ ಮೂಲಗಳೂ ಇವೇ ಆಗಿರುವುದನ್ನು ಗುರುತಿಸಿಕೊಳ್ಳಲೇಬೇಕಿದೆ. ಈಗಲಾದರೂ ಹೆಣ್ಣಿನ ಪ್ರತಿ ಸಮಸ್ಯೆಯನ್ನು ಪ್ರತ್ಯೇಕವಾಗಿ ಮತ್ತು ಸಮಗ್ರವಾಗಿ ಅಧ್ಯಯನಕ್ಕೊಳಪಡಿಸಬೇಕಿದೆ. ಜೊತೆಗೆ ನಮ್ಮ ಮುಂದಿರುವAತಹ ಹೆಣ್ಣು ಸಂಕುಲದ ಈ ಎಲ್ಲ ಬಹುಮುಖಿ ಸಮಸ್ಯೆಗಳಿಗೆ ಮೂಲಮಟ್ಟದಲ್ಲಿ ಪರಿಹಾರವನ್ನು ಕಂಡುಕೊಳ್ಳಲು, ಬಹು ಆಯಾಮಗಳಲ್ಲಿ ನಾವು ಯೋಚಿಸಿ ಹೆಜ್ಜೆಗಳನ್ನು ಇಡಬೇಕಿದೆ.
ಮೊದಲನೆಯದಾಗಿ ಹೆಣ್ಣುಮಕ್ಕಳು ಕೇವಲ ಓಟ್ ಬ್ಯಾಂಕ್‌ಗಳಾಗಿ ಅಲ್ಲ- ಎಲ್ಲ ಹಂತಗಳಲ್ಲೂ ಅರ್ಧದಷ್ಟು ರಾಜಕೀಯ ನಾಯಕತ್ವವನ್ನು ಪ್ರತಿಷ್ಠಾಪಿಸುವ ದಿಕ್ಕಿನಲ್ಲಿ ಒಗ್ಗೂಡಿ ಪ್ರಯತ್ನಿಸಬೇಕು. ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಅರ್ಧದಷ್ಟು ತೊಡಗುವಂತಾಗುವುದಷ್ಟೇ ಅಲ್ಲ, ಸಮರ್ಪಕವಾಗಿ ಸಂವಿಧಾನದ ಸಮಾನತೆಯ ಆಶಯ ಅನುಷ್ಠಾನ ಆಗುವ ಹಾಗೆ ಮಾಡುವಂತಹ ಸವಾಲನ್ನು ಕೂಡ ಪ್ರಥಮ ಜವಾಬ್ದಾರಿಯಾಗಿ ನಾವು ಸ್ವೀಕರಿಸಬೇಕು.
ಎರಡನೆಯದಾಗಿ ಹೆಣ್ಣಿನ ಮೇಲಿನ ಎಲ್ಲ ಬಗೆಯ ಹಿಂಸೆ, ಕ್ರೌರ್ಯಕ್ಕೆ ತಡೆಯೊಡ್ಡಲು ಬೇಕಾದ ರಚನಾತ್ಮಕ, ಸಂಘಟನಾತ್ಮಕ, ವಿಕೇಂದ್ರೀಕೃತ ಕಾರ್ಯ ಯೋಜನೆಗಳನ್ನು ಚರ್ಚಿಸಿ, ಆಮೂಲಾಗ್ರವಾಗಿ ಸಿದ್ಧಪಡಿಸಿಕೊಳ್ಳಬೇಕು. ಜೊತೆಗೆ, ಹೆಣ್ಣು ಸಂಕುಲ ಇಲ್ಲಿ ನೆಮ್ಮದಿಯಾಗಿ, ಘನತೆ, ಗೌರವದಿಂದ ಬದುಕಲಿಕ್ಕೆ ಏನೆಲ್ಲ ಬೇಕು? ಎನ್ನುವುದರ ಕುರಿತು, ಸರ್ಕಾರದ ಎದುರಿಗೆ ಸಮಸ್ಯೆಗಳ ಪರಿಹಾರಕ್ಕೆ ಸಶಕ್ತವಾದ ಬೇಡಿಕೆಯನ್ನು ಸರಿಯಾದ ಸಮಯಗಳಲ್ಲಿ ಇಡುವಂತಹ ಕಾರ್ಯಯೋಜನೆಯನ್ನು ಸಿದ್ಧಗೊಳಿಸಬೇಕು. ಜೊತೆಗೆ ಇದನ್ನು ಆಗು ಮಾಡಲು ಸರ್ಕಾರದ ಪ್ರತಿಹಂತದ ಅನುಷ್ಠಾನದಲ್ಲಿ ಜವಾಬ್ದಾರಿಯುತ ಹೆಣ್ಣುಮಕ್ಕಳು ಸೇರ್ಪಡೆಯಾಗಲು ಬೇಕಾದಂತಹ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಉದಾಹರಣೆಗೆ ರಾಜ್ಯ ಹಾಗೂ ಕೇಂದ್ರ ಬಜೆಟ್ ಮಂಡನೆಯ ಸಮಯದಲ್ಲಿ ಮಹಿಳಾ ಅವಶ್ಯಕತೆಯ ಹಕ್ಕೊತ್ತಾಯಗಳು ಕಡ್ಡಾಯವಾಗಿ ಸರ್ಕಾರ ಹಾಗೂ ಆಡಳಿತ ಯಂತ್ರದ ಮೇಲೆ ಪ್ರಭಾವ ಬೀರಬೇಕು.
ಮೂರನೆಯದಾಗಿ ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ದಮನಿಸುವ ಮನಸ್ಥಿತಿಯನ್ನು ಮೂಲಮಟ್ಟದಲ್ಲಿ ಬದಲಾಯಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದರ ಕುರಿತು ಸಮಗ್ರವಾಗಿ ಯೋಚಿಸಿ ಪರಿಹಾರಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ಇದಕ್ಕಾಗಿ ಜಾರಿಯಾಗಿರುವ ಹತ್ತು ಹಲವು ಸರ್ಕಾರಿ ಆದೇಶಗಳನ್ನು ವಿಕೇಂದ್ರೀಕೃತ ನೆಲೆಯಲ್ಲಿ ಅನುಷ್ಠಾನಕ್ಕೆ ತರಲು ಸಮಗ್ರವಾಗಿ ಪ್ರಯತ್ನಗಳು ನಡೆಯಬೇಕು.
ಕೊನೆಯದಾಗಿ ಸ್ವತಃ ಹೆಣ್ಣುಮಕ್ಕಳು ನಾವು, ನಮ್ಮ ಕೀಳರಿಮೆಗೆ ಕಾರಣಗಳೇನು ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ- ನಮ್ಮ ದೌರ್ಬಲ್ಯ, ಸಣ್ಣತನಗಳನ್ನು ಮೆಟ್ಟಿ ನಿಂತು, ವೈಯಕ್ತಿಕತೆಯನ್ನ ಮೀರಿ, ಒಟ್ಟು ಮಹಿಳಾ ಸಂಕುಲ ಸಂಘಟಿತವಾಗಿ, ಸಶಕ್ತವಾದ ಹೆಜ್ಜೆಗಳನ್ನೂರಿ ಸಮಾಜದಲ್ಲಿ ನೆಲೆ ನಿಲ್ಲುವಂತಾಗುವ ದಾರಿಗಳನ್ನು ಕಂಡುಕೊಳ್ಳಬೇಕು. ಇದಕ್ಕಾಗಿ ಯುವಜನಾಂಗವನ್ನೂ ಒಳಗೊಂಡು, ಅವಿರತ ಚಿಂತನಮAಥನಗಳು ನಡೆಯಬೇಕು. ಮುಂದಿನ ಹೆಣ್ಣು ಸಮುದಾಯ ತನ್ನ ದೇಹ, ಮನಸು, ಬುದ್ಧಿ -ಯಾವುದನ್ನೂ ಗುಲಾಮಗಿರಿಗೆ ಒಡ್ಡದೇ, ಸ್ವಾಭಿಮಾನದಿಂದ, ಸ್ವಾಯತ್ತತೆಯಿಂದ, ಘನತೆಯುತವಾಗಿ ಬದುಕವಂತಾಗಲು ಪ್ರಬಲ ಬೆಳಕಿನ ದಾರಿಗಳನ್ನು ನಾವೆಲ್ಲರೂ ಒಗ್ಗೂಡಿ ಕಂಡುಕೊಳ್ಳುವAತಾಗಬೇಕು. ಈ ಆಶಯ ಕೇವಲ ಮಾತಾಗಿ ಉಳಿಯದೇ ಕೃತಿಯ ರೂಪದಲ್ಲಿ ಕಾರ್ಯಗತವಾಗುವೆಡೆಗೆ ನಮ್ಮ ಹೆಜ್ಜೆಗಳು ಸಾಗಬೇಕಿದೆ.
ಹೆಣ್ಣಿನ ಘನತೆ ಮತ್ತು ಅಸ್ಮಿತೆಯನ್ನು ಚೂರಾಗಿಸಲು ಸುತ್ತಲೂ ಕತ್ತಿ ಹಿರಿದು ನಿಂತಿರುವ ಎಲ್ಲ ದುಷ್ಟ ಶಕ್ತಿಗಳನ್ನೂ ಎದುರಿಸುವ ಬಗೆಗಳನ್ನು ಅನಾದಿಯಿಂದ ಹೆಜ್ಜೆ ಹೆಜ್ಜೆಗೂ ಹುಡುಕುತ್ತಲೇ ಬಂದಿದ್ದೇವೆ. ಆದರೆ ಈಗದನ್ನು ಮತ್ತಷ್ಟು ತೀವ್ರವೂ, ಸೂಕ್ಷ್ಮವೂ, ಹರಿತವೂ ಆಗಿಸಲೇಬೇಕಿದೆ. ಸಮತ್ವ ಮತ್ತು ಸಮತೋಲನದ ಘನತೆಯ ಕನಸಿನ ಸಾಕಾರಕ್ಕಾಗಿ ಕ್ರೌರ್ಯವನ್ನು ಹಿಮ್ಮೆಟ್ಟಿಸುವ ದಾರಿಗಳನ್ನು ತುರ್ತಾಗಿ ಕಂಡುಕೊಳ್ಳಲೇಬೇಕಿದೆ. ಇಲ್ಲದಿದ್ದರೆ ಉಳಿಗಾಲವಿಲ್ಲ! ಹೀಗಾಗಿ ಪ್ರತಿ ಹೆಣ್ಣಿಗೆ ಸಂಬAಧಿಸಿದ ಯಾವುದೇ ಪ್ರತ್ಯೇಕ ಘಟನೆಯನ್ನೂ ಬಿಡಿ ಘಟನೆಯಾಗಿ ನೋಡಲೂಬೇಕು. ಅದಕ್ಕೆ ಜೊತೆಯಾಗುತ್ತ ಕಾಲ ಮತ್ತು ಇತಿಹಾಸದ ಪ್ರಕ್ರಿಯೆಯೊಂದಿಗೆ ಇಡಿಯಾಗಿ, ಸಮಗ್ರವಾಗಿ ಅರ್ಥೈಸಿಕೊಳ್ಳಲೂಬೇಕು. ಹೀಗಾದರಷ್ಟೇ ಅದರ ಹಿಂದಿನ ಸೂಕ್ಷ್ಮ ಕುಣಿಕೆಗಳು ಗೋಚರಿಸಲು ಸಾಧ್ಯ. ಜೊತೆಗೆ ಅದರಿಂದ ಬಿಡುಗಡೆಯ ದಾರಿ ಹುಡುಕಲೂ ಪ್ರಯತ್ನಿಸಲು ಸಾಧ್ಯ.
ಕೊನೆಗೂ ಈ ಎಲ್ಲಾ ಅಗೋಚರ ಗಾಳಗಳು, ದಾಳಗಳು ತಂದೊಡ್ಡುವ ಸಂಕಟ, ಸೃಷ್ಟಿಸುತ್ತಿರುವ ದಾರುಣತೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವಾಗಿ ನಮ್ಮ ಕಣ್ಣ ಮುಂದಿನ ಗುರಿಯಾಗಿ ಕಾಣುವುದು- ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾಗಿ, ಪ್ರಜಾಪ್ರಭುತ್ವದ ಸಾಕಾರಕ್ಕೆ ದಿಕ್ಕಾಗಿರುವ ಸಕಲ ಜೀವಪರವಾದ ನಮ್ಮ ಸಂವಿಧಾನ! ಅದೊಂದು ಭರವಸೆ. ಸಮಾಧಾನ. ಎಷ್ಟೇ ಕಷ್ಟವಾದರೂ ಅದೇ ದಾರಿ….! ಸ್ವಾತಂತ್ರö್ಯಕ್ಕಾಗಿ ನಡೆದ ಹೋರಾಟದ ಹಾದಿಯ ನಡೆ ಕಠಿಣ. ಆದರೆ ಸಂವಿಧಾನದ ಗುರಿ ಮುಟ್ಟುವ ಹಾದಿ ಕಠೋರ! ಅಂದು ಕಷ್ಟವಾದರೂ ಹೊರಗಿನವರನ್ನು ನಿರ್ದಾಕ್ಷಿಣ್ಯವಾಗಿ ಹೊರಗೆ ಒದ್ದೋಡಿಸಬಹುದಿತ್ತು. ಅದಕ್ಕೆ ಎಲ್ಲರೂ ಒಗ್ಗೂಡುವ ಸಾಧ್ಯತೆ ಇತ್ತು. ಏಕೆಂದರೆ ಅವರು ನಮ್ಮವರಲ್ಲ! ಶತ್ರುಗಳು! ಆದರೆ ಇಂದು, ಒಳಗಿನ ನಮ್ಮವರೆನಿಸಿಕೊಂಡವರೊಡನೆ?- ಈ ನಿತ್ಯದ ಹಲ ಬಗೆಯ ಆಂತರಿಕ ಹೋರಾಟವು ಅತ್ಯಂತ ಯಾತನಾದಾಯಕ, ಸೂಕ್ಷ್ಮ ಮತ್ತು ಕ್ಲಿಷ್ಟಕರ. ಹಾಗೆಂದೇ ಈ ಗುರಿ ಸೇರಲು ಹೊಸ ಬಗೆಯ, ರಚನಾತ್ಮಕ, ಕ್ರಿಯಾಶೀಲ ನಡೆಗಳನ್ನು, ತಂತ್ರಗಳನ್ನು ನಾವು ಕಲಿಯುತ್ತಾ ಸಾಗಬೇಕಿದೆಯಷ್ಟೇ. ಆದರೆ ಹೆಣ್ಣುಸಂಕುಲಕ್ಕೆ ನಿಸರ್ಗದತ್ತವಾಗಿ ದಕ್ಕಿದ ಪ್ರೀತಿ, ಕಾರುಣ್ಯ, ಅಂತಃಕರಣವನ್ನು ಒಂದಿಷ್ಟೂ ಕಳೆದುಕೊಳ್ಳದಂತೆ, ಈ ರೂಕ್ಷ ಪಯಣದಲ್ಲಿ ಧೃತಿಗೆಡದೇ ಹೆಜ್ಜೆಯಿಡಬೇಕಿದೆ! ಈ ಎಚ್ಚರ ಅನುಕ್ಷಣ ನಮ್ಮನ್ನು ಕಾಯಬೇಕಿದೆ.