ಬೆಂಗಳೂರು : ಪತ್ರಕರ್ತ ನವೀನ್ ಸೂರಿಂಜೆ ಅವರ ನಿರೂಪಣೆಯಲ್ಲಿ ಹೊರಬಂದಿರುವ ದಿ. ಮಹೇಂದ್ರ ಕುಮಾರ್ ಅವರ ಆತ್ಮಚರಿತ್ರೆ ʻನಡು ಬಗ್ಗಿಸದ ಎದೆಯ ದನಿʼ ಕೃತಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಮಾರ್ಚ್ 09, 2024 ಶನಿವಾರ ಬೆಳಿಗ್ಗೆ 11.00ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.
ಗಾಂಧಿ ಭವನ, ಬಾಪೂಜಿ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಲನಚಿತ್ರ ನಟ ಪ್ರಕಾಶ್ ರೈ ಅವರು ವಹಿಸಿದ್ದು, ನಯನ ಮೋಟಮ್ಮ, ಎಸ್.ಬಾಲನ್, ಸುಧೀರ್ ಮುರೋಳ್ಳಿ, ಬಸವರಾಜ ಸೂಳಿಭಾವಿ, ನವೀನ್ ಸೂರಿಂಜೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪುಸ್ತಕ ಕುರಿತು ನಿಕೇತ್‌ರಾಜ್ ಮೌರ್ಯ ಅವರು ಮಾತನಾಡಲಿದ್ದು, ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಮುನೀರ್ ಕಾಟಿಪಳ್ಳಿ ಅವರು ಮಾಡಲಿದ್ದಾರೆ.
ಸಂಘ ಪರಿವಾರದ ಭಜರಂಗ ದಳ ಸಂಘಟನೆಯ ರಾಜ್ಯ ಸಂಚಾಲಕರಾಗಿ ಮಲೆನಾಡು ಕರಾವಳಿ ಭಾಗದ ಯುವಜನರನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಿದ್ದ ಮಹೇಂದ್ರ ಕುಮಾರ್ ನಂತರದಲ್ಲಿ ಸೈದ್ಧಾಂತಿಕ ಭಿನ್ನಮತ ವ್ಯಕ್ತಪಡಿಸಿ ಸಂಘ ಪರಿವಾರದಿಂದ ಹೊರಗುಳಿದಿದ್ದರು. ನಮ್ಮ ಧ್ವನಿ ಎಂಬ ಸಂಘಟನೆಯನ್ನು ಸ್ಥಾಪಿಸಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ಯುವಜನರನ್ನು ಎಚ್ಚರಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿದ್ದರು. ಎರಡು ವರ್ಷದ ಹಿಂದೆ ಹೃದಯಾಘಾತದಿಂದ ವಿಧಿವಶರಾಗಿದ್ದರು. ಅವರು ಸಂಘ ಪರಿವಾರದಲ್ಲಿ ತಾವು ಕೆಲಸ ಮಾಡಿದ ಅನುಭವಗಳನ್ನು ʻನಡು ಬಗ್ಗಿಸದ ಎದೆಯ ದನಿʼ ಕೃತಿ ದಾಖಲಿಸಿದ್ದು ಕನ್ನಡ ಓದುಗರಲ್ಲಿ ಸಂಚಲನ ಮೂಡಿಸಿದೆ.
ದಿ. ಎ.ಕೆ.ಸುಬ್ಬಯ್ಯರವರ ಆರ್‌ಆರ್‌ಎಸ್ ಅಂತರಂಗ ಮತ್ತು ಆರ್‌ಆರ್‌ಎಸ್ ಪ್ರಚಾರಕರಾಗಿದ್ದ ಹನುಮೇಗೌಡ ನಂಜಪ್ಪ ಅವರ ಆರ್‌ಆರ್‌ಎಸ್ ಕರಾಳ ಮುಖಗಳು ಕೃತಿಗಳ ನಂತರದಲ್ಲಿ ಸಂಘ ಪರಿವಾರದ ಕಾರ್ಯಕರ್ತರಾಗಿ ನಂತರ ಜಾತ್ಯತೀತ ತತ್ವಕ್ಕೆ ಬದ್ಧವಾಗಿ ಕೆಲಸ ಮಾಡಿದವರ ಅನುಭವ ಕಥನ ಇದಾಗಿದೆ.
ಲಡಾಯಿ ಪ್ರಕಾಶನ, ಗದಗ ಈ ಕಾರ್ಯಕ್ರಮವನ್ನು ಆಯೋಜಿಸಿದೆ.