ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ(ಎಂಎಸ್ಪಿ) ಖಾತರಿ ಕಾಯ್ದೆ ಮತ್ತು ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ತಕ್ಷಣವೇ ಸುಗ್ರೀವಾಜ್ಞೆ ತರಬೇಕು ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧರ್ ಒತ್ತಾಯಿಸಿದ್ದಾರೆ.
ಬೇಡಿಕೆಗಳ ಈಡೇರಿಕೆಗೆ ‘ದೆಹಲಿ ಚಲೋ’ ಪ್ರತಿಭಟನೆ ಕೈಗೊಂಡಿರುವ ರೈತರು ಪಂಜಾಬ್ – ಹರಿಯಾಣದ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ ವಿವಿಧ ಬೇಡಿಕೆಗಳ ಕುರಿತು ರೈತ ಮುಖಂಡರು ಮತ್ತು ಕೇಂದ್ರ ಸಚಿವರ ನಡುವಿನ ನಾಲ್ಕನೇ ಸುತ್ತಿನ ಮಾತುಕತೆಗೆ ಒಂದು ದಿನದ ಮೊದಲೇ ಸುಗ್ರೀವಾಜ್ಞೆ ತರಬೇಕು ಎಂಬ ಕೂಗು ಕೇಳಿ ಬಂದಿದೆ.
“ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಲು ಬಯಸಿದರೆ ರಾತ್ರೋರಾತ್ರಿ ತರಬಹುದು. ಕೇಂದ್ರವು ನಮ್ಮ ರೈತರ ಪ್ರತಿಭಟನೆಗೆ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು” ಎಂದು ಪಂಧರ್ ಶಂಭು ಗಡಿಯಲ್ಲಿ ಹೇಳಿದ್ದಾರೆ.