ಬೆಂಗಳೂರು: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಭಾಷಣ ಓದುವರೇ ಎಂಬ ಅನುಮಾನ ಮೂಡಿತ್ತು. ಆದರೆ ರಾಜ್ಯಪಾಲರು ಸಂಪೂರ್ಣ ಭಾಷಣ ಓದುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಮ್ಮ ಸರ್ಕಾರದ ಕಾರ್ಯಕ್ರಮ ಎಂದು ಭಾಷಣ ಆರಂಭಿಸಿ 20 ನಿಮಿಷದಲ್ಲಿ ತಮ್ಮ ಭಾಷಣ ಮುಗಿಸಿದರು.
ವಿಧಾನಮಂಡಲ ಅಧಿವೇಶನದ ಆರಂಭದ ದಿನ ಸರ್ಕಾರದ ಭಾಷಣ ಓದದೆ ನಿರ್ಗಮಿಸಿದ್ದರು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ನಡೆದಿತ್ತು.
ಭಾಷಣದ ಮುಖ್ಯಾಂಶಗಳು:
ಸಂವಿಧಾನದ ಮುಖ್ಯ ಆಶಯದಂತೆ ಅತ್ಯಂತ ಹಿಂದುಳಿದವರ ಬಲವರ್ಧನೆಗಾಗಿ ರಾಜ್ಯದ ಜನರಿಗೆ ಆರ್ಥಿಕ ಚೈತನ್ಯ ನೀಡುವುದಕ್ಕಾಗಿ ರಾಜ್ಯವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜನ ಕಲ್ಯಾಣಗಳಿಗಾಗಿ ರಾಜ್ಯವು ವರ್ಷಕ್ಕೆ 1.12 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ.
ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ 1.13 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ವಿನಿಯೋಗಿಸಲಾಗಿದೆ. ಇದರ ಪರಿಣಾಮವಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಮಹಿಳೆಯರಲ್ಲಿ ಹೊಸ ಆರ್ಥಿಕ ಸಾಮಾಜಿಕ ಉತ್ಸಾಹ ಬಂದಿದೆ. ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಬೆಂಗಳೂರು ನಗರವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆಯೆಂದು ಸಮೀಕ್ಷೆಗಳು ಹೇಳುತ್ತಿವೆ. ಈ ಸಂಗತಿಯು ರಾಜ್ಯದ ಹೆಮ್ಮೆಯ ಸಂಗತಿಯಾಗಿದೆ.
ಕುಟುಂಬ ಸರ್ವೆ ದತ್ತಾಂಶದ ಪ್ರಕಾರ, 2024-25ನೇ ಸಾಲಿನಲ್ಲಿ ರಾಜ್ಯದಲ್ಲಿ 1.37 ಕೋಟಿ ಕುಟುಂಬಗಳು ಸರ್ಕಾರದ ಒಂದಲ್ಲಾ ಒಂದು ಯೋಜನೆಯಿಂದ ನೇರ ಆರ್ಥಿಕ ಸೌಲಭ್ಯ ಪಡೆದಿವೆ.
ʼಅಕ್ಕʼ ಕಾರ್ಯ ಪಡೆಗಳನ್ನು ರಚಿಸಿ ಅವುಗಳ ಮೂಲಕ 25ಕ್ಕೂ ಹೆಚ್ಚು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಮಹಿಳಾ ಕಾರ್ಮಿಕರಿಗೆ ವಾರ್ಷಿಕವಾಗಿ 12 ದಿನಗಳ ವೇತನ ಸಹಿತ ಋತುಚಕ್ರ ರಜೆಯನ್ನು ನೀಡಲಾಗುತ್ತಿದೆ.
ಕಂದಾಯ ನ್ಯಾಯಾಲಯಗಳನ್ನು ಆನ್ಲೈನ್ ಮುಖಾಂತರ ನಿರ್ವಹಿಸಲು ಅವಕಾಶ ಕಲ್ಪಿಸಿ ಪಾರದರ್ಶಕಗೊಳಿಸಲಾಗಿದೆ. 91,163 ಫೋಡಿಗಳನ್ನು ಪೂರ್ಣಗೊಳಿಸಿ ದಾಖಲೆಗಳನ್ನು ಕಾಲೋಚಿತಗೊಳಿಸಲಾಗಿದೆ. ಜೊತೆಗೆ ದಾಖಲೆರಹಿತ 4,050 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿ 1,11,111 ಲಕ್ಷ ಸಂಖ್ಯೆಯ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಒದಗಿಸಲಾಗಿದೆ.
ʼಬಿʼ ಖಾತಾಗಳನ್ನು ʼಎʼ ಖಾತಾಗಳನ್ನಾಗಿ ಪರಿವರ್ತಿಸಲು ಅನುಮೋದನೆ ನೀಡಲಾಗಿದೆ. ಇದರಿಂದ ಸುಮಾರು 20 ಲಕ್ಷಕ್ಕೂ ಹೆಚ್ಚಿನ ಜನರಿಗೆ ಅನುಕೂಲವಾಗುತ್ತಿದೆ. ಇ-ಸ್ವತ್ತು ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದ್ದು, ಈ ವ್ಯವಸ್ಥೆಯಿಂದ ಅಸಂಖ್ಯಾತ ಜನರಿಗೆ ಅನುಕೂಲವಾಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ವ್ಯವಸ್ಥೆ ಸುಧಾರಿಸಲು ʼಅಕ್ಷರ ಆವಿಷ್ಕಾರʼ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆ ಭಾಗದ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಲು ಡಾ.ಛಾಯಾ ದೇಗಾಂವಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು ಇತ್ತೀಚೆಗಷ್ಟೆ ವರದಿ ನೀಡಿದೆ. ಪ್ರಸ್ತುತ ಇಲ್ಲಿ ಕ್ರಾಂತಿಕಾರಕ ಮಾದರಿಯ 300 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ.
ಪ್ರಸ್ತುತ ಸರ್ಕಾರವು ರೈತರ ಪಂಪ್ಸೆಟ್ಟುಗಳಿಗೆ ಹಗಲು ಹೊತ್ತಿನಲ್ಲೂ 7 ಗಂಟೆಗಳ ಕಾಲ ನಿರಂತರವಾಗಿ ತ್ರೀಫೇಸ್ ವಿದ್ಯುತ್ ಪೂರೈಸಲು ಪ್ರಯತ್ನಿಸುತ್ತಿದೆ. ನಮ್ಮ ಸರ್ಕಾರವು 2025-26 ಸೇರಿಸಿದಂತೆ ಸುಮಾರು 10,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಸಬ್ಸಿಡಿ ಹಾಗೂ ಇನ್ನಿತರೆ ರೂಪದಲ್ಲಿ ರೈತರಿಗೆ ನೀಡಲಾಗಿದೆ. ರಾಜ್ಯದ 9.07 ಲಕ್ಷ ಹಾಲು ಉತ್ಪಾದಕರಿಗೆ 4,130 ಕೋಟಿ ರೂ.ಗಳನ್ನು ಸರ್ಕಾರ ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಿದೆ.
ಬೆಂಗಳೂರು ಮಹಾನಗರದ ಅಭಿವೃದ್ಧಿಗಾಗಿ ಸುಮಾರು 1.5 ಲಕ್ಷ ಕೋಟಿ ರೂ.ಗಳ ಬೃಹತ್ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮೆಟ್ರೋ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ವಿಸ್ತರಿಸಲಾಗುತ್ತಿದೆ. 110 ಗ್ರಾಮಗಳಿಗೆ ಕಾವೇರಿ 5ನೇ ಹಂತದ ಯೋಜನೆಯಡಿ ನೀರು ಸರಬರಾಜು ಮಾಡಲು ಪ್ರಾರಂಭಿಸಲಾಗಿದೆ. ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ನ ಪ್ರಗತಿಯು ಪ್ರಾರಂಭವಾಗಿದ್ದು, ನಗರದ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರವು ಶ್ರಮಿಸುತ್ತಿದೆ. ರಾಜ್ಯದ 227 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 9,574 ಕೋಟಿ ರೂ.ಗಳ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಸಂವಿಧಾನದ ಕಾರಣಕ್ಕಾಗಿಯೇ ನಾವು ನೆಮ್ಮದಿಯಿಂದ ಇದ್ದೇವೆ. ದೇಶದ ಅಸಂಖ್ಯಾತ ಜನರು, `ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ` ಎಂದು ಆಳವಾಗಿ ನಂಬಿರುವುದರಿಂದ ಸಂವಿಧಾನವು ದಿನದಿಂದ ದಿನಕ್ಕೆ ಹೆಚ್ಚು ಪ್ರಸ್ತುತವಾಗುತ್ತಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು, `ಸಂವಿಧಾನ ಎಷ್ಟೇ ಒಳ್ಳೆಯದಾಗಿರಲಿ, ಅದನ್ನು ಅನುಷ್ಠಾನಗೊಳಿಸುವ ಜನ ಕೆಟ್ಟವರಾಗಿದ್ದರೆ ಪರಿಣಾಮ ಕೆಟ್ಟದ್ದೇ ಆಗುತ್ತದೆ. ಸಂವಿಧಾನ ಎಷ್ಟೇ ಕೆಟ್ಟದ್ದಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವವರು ಒಳ್ಳೆಯವರಾಗಿದ್ದರೆ ಅದರ ಪರಿಣಾಮ ಒಳ್ಳೆಯದ್ದೇ ಆಗುತ್ತದೆ. ಸಂವಿಧಾನದ ಕಾರ್ಯನಿರ್ವಹಣೆಯು ಅದರ ಗುಣಲಕ್ಷಣದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವುದಿಲ್ಲ. ಸಂವಿಧಾನವು ರಾಷ್ಟ್ರದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆ ಮುಂತಾದವುಗಳನ್ನು ಮಾತ್ರ ಒದಗಿಸಬಹುದು. ಈ ಅಂಗಗಳ ಕಾರ್ಯಾಚರಣೆಯ ಮೇಲೆ ಪ್ರಭಾವ ಬೀರುವ ಅಂಶಗಳೆಂದರೆ ಆ ದೇಶದ ಪ್ರಜೆಗಳು ಮತ್ತು ಅವರ ಆಶೋತ್ತರಗಳನ್ನು ಈಡೇರಿಸುವುದಕ್ಕೆ ತಮ್ಮ ಸಾಧನವಾಗಿ ಆಯ್ಕೆ ಮಾಡಿಕೊಂಡ ರಾಜಕೀಯ ಪಕ್ಷಗಳು” ಎಂದಿದ್ದಾರೆ. ಹಾಗಾಗಿ ಜನರು ಮಾಡಬೇಕಾದ ಅತಿ ಮುಖ್ಯ ಕೆಲಸವೆಂದರೆ ಸಂವಿಧಾನದ ಮೂಲ ಆಶಯವನ್ನು ಅರಿತು ಕೆಲಸ ಮಾಡುವ ಪ್ರತಿನಿಧಿಗಳನ್ನು ಆರಿಸಿ ಕಳುಹಿಸುವುದು ಹಾಗೂ ನಿರಂತರವಾಗಿ ಪ್ರಶ್ನೆ, ಸಂವಾದ ಮಾಡುತ್ತಲೇ ಜನತಂತ್ರ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದಾಗಿದೆ. ಇದನ್ನೆ ಮಹಾತ್ಮ ಗಾಂಧೀಜಿಯವರು ಸಹ ಹೇಳಿದ್ದಾರೆ ಎಂದು ಭಾಷಣವನ್ನು ಮುಗಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿಎಂ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

