ಬೆಂಗಳೂರು: ಸಂವಿಧಾನಕ್ಕೆ ಗೌರವ ಕೊಡುವವನು ನಿಜವಾದ ದೇಶಭಕ್ತ. ಅಗೌರವ ತೋರಿಸುವವರು ದೇಶದ್ರೋಹಿಗಳು ಎಂದು ಕೆಪಿಸಿಸಿ ಅಧ್ಯಕ್ಷರು, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
77ನೇ ಗಣರಾಜ್ಯೋತ್ಸವದ ಪ್ರಯುಕ್ತ ಅವರು ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಇತ್ತೀಚೆಗೆ ಕೆಲವು ದೇಶದ್ರೋಹಿಗಳು ಸಂವಿಧಾನ ಬದಲಾವಣೆಯ ಕೂಗು ಎತ್ತಿದ್ದಾರೆ. ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಿದೆ. ಇದಕ್ಕೆ ನಾನೂ ದನಿಗೂಡಿಸುತ್ತೇನೆ. ದೇಶದ ಇತಿಹಾಸದಲ್ಲಿಯೆ ಮೊಟ್ಟ ಮೊದಲ ಬಾರಿಗೆ ಇಂಡಿಯಾ ಒಕ್ಕೂಟದ ಎಲ್ಲಾ ಸಂಸದರು ಸಂವಿಧಾನದ ಪ್ರತಿ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡಿದರು.
ಗಣರಾಜ್ಯೋತ್ಸವ ಎಂದರೆ ಭಾರತದ ಸ್ವಾಭಿಮಾನದ ದಿನ. ಜನವರಿ 26 ಸಂವಿಧಾನವನ್ನು ಅನುಷ್ಠಾನಕ್ಕೆ ತಂದ ದಿನ. ಭಾರತದ ಒಕ್ಕೂಟ ವ್ಯವಸ್ಥೆ ಜಾರಿಯಾದ ದಿನ. ಸ್ವಾತಂತ್ರ್ಯ ನಂತರ ಈ ದೇಶದ 570 ಕ್ಕೂ ಹೆಚ್ಚು ಪ್ರದೇಶಗಳು ರಾಜರ ಆಡಳಿತಕ್ಕೆ ಒಳಪಟ್ಟಿದ್ದವು. ಇದೆಲ್ಲವನ್ನು ಒಗ್ಗೂಡಿಸಿ ಈ ದೇಶವನ್ನು ಒಂದು ಮಾಡಲಾಯಿತು.
ಭಾರತವು ರಾಜ್ಯಗಳ ಒಕ್ಕೂಟ ಎಂಬುದನ್ನು ಸಂವಿಧಾನದ 1ನೇ ವಿಧಿಯು ಹೇಳುತ್ತದೆ. ದೇಶದ ಸಂವಿಧಾನದ ಪಿತಾಮಹಾರಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ. “We are Indians, firstly and lastly” ಎಂದು. ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣವೇ ಸಂವಿಧಾನ ಹಾಗೂ ಸರ್ಕಾರದ ಆಶಯ. ಸಂವಿಧಾನವೇ ನಮ್ಮ ಧರ್ಮ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನಮ್ಮ ರಾಜಧರ್ಮ.
ನಮ್ಮ ದೇಶದ ಗಣತಂತ್ರ ವ್ಯವಸ್ಥೆಗೆ ಪವಿತ್ರ ಸಂವಿಧಾನವೇ ಅಧಿಪತಿ. ಉಸಿರಾಡಲು ಗಾಳಿ ಬೇಕು. ನಮ್ಮ ದೇಶ ನಡೆಸೋಕೆ ಸಂವಿಧಾನ ಬೇಕು. ಸಂವಿಧಾನವೇ ನಮ್ಮ ಪ್ರಜಾಪ್ರಭುತ್ವದ ಆತ್ಮ. ಸಂವಿಧಾನವೇ ನಮ್ಮ ದೇಶದ ಶಕ್ತಿ. ಇವನಾರವ, ಇವನಾರವ ಎನ್ನುವ ಭೇದ-ಭಾವ ಅಳಿಸಿ, ಇವ ನಮ್ಮವ, ಇವ ನಮ್ಮವ ಎನ್ನುವ ಭಾವನೆ ಮೂಡಿಸಿದ್ದೇ ಸಂವಿಧಾನ.
ಸಂವಿಧಾನದ ಆರ್ಟಿಕಲ್ 14 ಮತ್ತು 18 ಸಮಾನತೆ ಬಗ್ಗೆ ಹೇಳುತ್ತದೆ. ಆರ್ಟಿಕಲ್ 17 ಅಸ್ಪೃಶ್ಯತೆ ಆಚರಿಸುವುದು ಅಪರಾಧ ಎಂದು ಹೇಳುತ್ತದೆ. 19 (1) (A) ಈ ಆರ್ಟಿಕಲ್ freedom of speech ಬಗ್ಗೆ ಹೇಳುತ್ತದೆ. 21 A ಶಿಕ್ಷಣದ ಹಕ್ಕಿನ ಬಗ್ಗೆ ಹೇಳುತ್ತದೆ. ಇವು ಉದಾಹರಣೆ ಮಾತ್ರ. ಸಂವಿಧಾನದ ಪ್ರತಿ ಪುಟದಲ್ಲೂ ಜನಪರ ವಿಚಾರಗಳು ಇವೆ. ಜಾತಿ, ಧರ್ಮ, ಸಂಪತ್ತು, ಅಧಿಕಾರ ಯಾವುದೂ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಸಂವಿಧಾನ ಹೇಳುತ್ತದೆ.
75 ವರ್ಷಗಳ ಹಿಂದೆ ಬಡತನ, ಅನಕ್ಷರತೆ, ಹಸಿವು, ಅಪೌಷ್ಟಿಕತೆ ಸಮಸ್ಯೆಗಳು ದೇಶವನ್ನು ಬಹಳವಾಗಿ ಕಾಡಿತ್ತು. ಆದರೆ ಈಗ ಚಿತ್ರಣ ಸಂಪೂರ್ಣ ಬದಲಾಗಿದೆ. ನಮ್ಮ ಪಕ್ಷ ಹಾಗೂ ಸರ್ಕಾರ ಜಾತಿ-ಧರ್ಮಗಳ ಭೇದವಿಲ್ಲದೆ ಸಂಪತ್ತು, ಅವಕಾಶ ಮತ್ತು ಅಧಿಕಾರದಲ್ಲಿ ಸರ್ವರಿಗೂ ಸಮಪಾಲು ಕಲ್ಪಿಸಿದೆ.
ಹಿಂದೆ ನಮ್ಮನ್ನು ಕಾಡುತ್ತಿದ್ದ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ತಾಕತ್ತು ಹೊಂದಿದ್ದೇವೆ. ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಇದೆಲ್ಲವೂ ಸಾಧ್ಯವಾಗಿದ್ದು ಸಂವಿಧಾನದ ಅಂಶಗಳ ಸಮರ್ಪಕ ಜಾರಿಯಿಂದ ಎಂದು ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಭವಿಷ್ಯದ ಜವಾಬ್ದಾರಿಯುತ ನಾಗರಿಕರಾಗುವ ಶಾಲಾ ಮಕ್ಕಳಿಗೆ ಸಂವಿಧಾನದ ಆಶಯಗಳನ್ನು ಮನದಟ್ಟು ಮಾಡಿಸಲು ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಲಾಗಿದೆ. ಆ ಮೂಲಕ ಸಂವಿಧಾನದ ಆಶಯಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಚಯಿಸುವ ಗುರಿ ನಮ್ಮದು. ಭಾರತದ ಒಗ್ಗಟ್ಟಿಗೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಶತಮಾನಗಳಿಂದ ಹೋರಾಟ ನಡೆಸುತ್ತಿದ್ದಾರೆ.
ಮಹಾತ್ಮ ಗಾಂಧಿ, ಜವಹರಲಾಲ್ ನೆಹರು, ವಲ್ಲಭ ಬಾಯ್ ಪಟೇಲ್, ಸರೋಜಿನಿ ನಾಯ್ಡು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಬಾಬು ಜಗಜೀವನ್ ರಾಮ್ ಅವರು, ಅಬ್ದುಲ್ ಗಫರ್ ಖಾನ್, ಮೌಲಾನಾ ಆಜಾದ್, ಲಾಲಾ ಲಜಪತ್ ರಾಯ್, ಮೂಲ್ ಚಂದ್ ಜೈನ್ ನಮಗೆ ಮಾದರಿಯಾಗಿದ್ದಾರೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮೈಲಾರ ಮಹದೇವಪ್ಪ ಹೀಗೆ ಲಕ್ಷಾಂತರ ಜನರು ಈ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ.
ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಜಾರಿಗೆ ತಂದ ಮಹಾತ್ಮ ಗಾಂಧಿ ಅವರ ಆಶಯದ “ನರೇಗಾ” ಯೋಜನೆ ಉಳಿಸಲು ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್ ಗಾಂಧಿ ಅವರು ಇಂದಿಗೂ ಹೋರಾಟ ಮಾಡುತ್ತಿದ್ದಾರೆ. ಸಂವಿಧಾನ ಉಳಿಸುವ ಸಲುವಾಗಿಯೇ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಭಾರತ್ ಜೋಡೋ ಹೆಸರಿನಲ್ಲಿ ಹೆಜ್ಜೆ ಹಾಕಿದವರು ನಾವು. ಸಂವಿಧಾನಕ್ಕೆ ಗೌರವ ಕೊಟ್ಟವನು ನಿಜವಾದ ದೇಶಭಕ್ತ. ಸಂವಿಧಾನಕ್ಕೆ ಅಗೌರವ ತೋರಿಸುವವರು ದೇಶದ್ರೋಹಿಗಳು. ಜಾತ್ಯತೀತತೆ ಸಂವಿಧಾನದ ಮುಖ್ಯ ಆಶಯಗಳಲ್ಲಿ ಒಂದು. ಇದು ಅನ್ಯಧರ್ಮವನ್ನು ದ್ವೇಷಿಸದೆ ಸ್ವಂತ ಧರ್ಮವನ್ನು ಪ್ರೀತಿಸುವ ಮಾನವೀಯ ಗುಣ.
ಸ್ವಾತಂತ್ರ್ಯ ಎನ್ನುವುದು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾದುಲ್ಲ. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಗಳಿಸಿದರೆ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಇದನ್ನೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾಮಾಜಿಕ ಪ್ರಜಾಪ್ರಭುತ್ವ ಎಂದು ಹೇಳಿದ್ದು. ಸಂವಿಧಾನದ ಈ ಆಶಯವನ್ನು ಸಾಕಾರಗೊಳಿಸುವುದು ಚುನಾಯಿತ ಸರ್ಕಾರದ ಕರ್ತವ್ಯ. ನಮ್ಮ ಯೋಚನೆಗಳು ಮತ್ತು ಯೋಜನೆಗಳು ಸಂವಿಧಾನದ ಆಶಯಗಳೇ ಆಗಿವೆ. ನಮ್ಮ ಆಡಳಿತದ ‘ಕರ್ನಾಟಕ ಮಾದರಿ’ ಬಗ್ಗೆ ಇಡೀ ದೇಶ ಮಾತ್ರವಲ್ಲ ಜಗತ್ತಿನ ಅನೇಕ ಆರ್ಥಿಕ ತಜ್ಞರು ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ.
ಗ್ಯಾರಂಟಿ ಯೋಜನೆಗಳು ಬದುಕಿನ ಗ್ಯಾರಂಟಿ ಹೆಚ್ಚಿಸಿವೆ. ಗ್ಯಾರಂಟಿ ಯೋಜನೆಗಳ ಮೂಲಕ ಪಡೆಯುವ ಹಣವನ್ನು ಪೌಷ್ಠಿಕ ಆಹಾರ, ಔಷಧಗಳು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಶೇ.89 ರಷ್ಟು ಫಲಾನುಭವಿಗಳ ಕೌಟುಂಬಿಕ ಸಂಬಂಧಗಳಲ್ಲಿ ಸುಧಾರಣೆಯಾಗಿದೆ. ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿಗಳಿಗೆ ಇದುವರೆಗೆ 1,16,706 ಕೋಟಿ ರೂಗಳನ್ನು ವಿನಿಯೋಗಿಸಲಾಗಿದೆ.
ಇಡೀ ದೇಶದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಒಂದೇ ಸಲ 42,345 ಮನೆಗಳನ್ನು ಒಟ್ಟಿಗೆ ನೀಡುತ್ತಿದ್ದೇವೆ. ದೇಶಕ್ಕೆ ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ, ಸೋದರತ್ವ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ ವ್ಯವಸ್ಥೆಯನ್ನು ನೀಡಿರುವುದು ಕಾಂಗ್ರೆಸ್ ಎನ್ನುವುದು ನಮಗೆಲ್ಲ ಹೆಮ್ಮೆಯ ವಿಚಾರ.
ನಾನೊಬ್ಬ ಕಾಂಗ್ರೆಸಿಗ, ಭಾರತೀಯ, ಕನ್ನಡಿಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ನಮ್ಮ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಮೂಲಕ ಭವ್ಯ ಮತ್ತು ಸಾಮರಸ್ಯದ ಭಾರತವನ್ನು ಕಟ್ಟೋಣ. ಸಂವಿಧಾನದ ತತ್ವಗಳನ್ನು ಜಾರಿಗೆ ತರುವುದೇ ನಮ್ಮೆಲ್ಲರ ಧರ್ಮ. ಇದನ್ನು ಕಾಂಗ್ರೆಸ್ಸಿಗರು ಎಂದಿಗೂ ಮರೆಯಬಾರದು. ಸಂವಿಧಾನ ಉಳಿಸಿದರೆ ಭಾರತವನ್ನು ಉಳಿಸಿದಂತೆ. ಪ್ರಜಾಪ್ರಭುತ್ವ, ಗಣತಂತ್ರ, ಸಂವಿಧಾನ ಉಳಿಸೋಣ ಎಂದು ಈ ಸಂದರ್ಭದಲ್ಲಿ ಮತ್ತೊಮ್ಮೆ ಕರೆ ನೀಡುತ್ತೇನೆ ಎಂದರು.

