ನವದೆಹಲಿ: ಮಹಾತ್ಮಾ ಗಾಂಧಿ ನರೇಗಾ ಯೋಜನೆಯನ್ನು ಮೂಲಸ್ವರೂಪದಂತೆಯೇ ಮರು ಸ್ಥಾಪಿಸುವವರೆಗೆ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ದೆಹಲಿಯಲ್ಲಿ ಹಮ್ಮಿಕೊಂಡಿದ್ದ ನರೇಗಾ ಕಾರ್ಮಿಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪಕ್ಷದ ಮುಖಂಡರು ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಪಕ್ಷದ ಮುಖಂಡ ಸಂದೀಪ್ ದೀಕ್ಷಿತ್ ನೇತೃತ್ವದ ರಚನಾತ್ಮಕ ಕಾಂಗ್ರೆಸ್ ಹಮ್ಮಿಕೊಂಡಿದ್ದ ಈ ಸಮಾವೇಶದಲ್ಲಿ 25 ರಾಜ್ಯಗಳ ನರೇಗಾ ಕಾರ್ಮಿಕರು ಭಾಗವಹಿಸಿದ್ದರು.
ಲೋಕಸಭೆ ಪ್ರತಿಪಕ್ಷ ನಾಯಕ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ ನರೇಗಾ ಕಾರ್ಯಕರ್ತರ ಹಕ್ಕುಗಳನ್ನು ರಕ್ಷಿಸಲು ಕಾಂಗ್ರೆಸ್ ಹೋರಾಟ ನಡೆಸಲಿದೆ. ಇದು ಕೇವಲ ಧರಣಿ ಪ್ರತಿಭಟನೆಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ. ರಚನಾತ್ಮಕ ಮತ್ತು ಧೀರ್ಘಕಾಲೀನ ಹೋರಾಟದಿಂದ ಮಾತ್ರ ಸಾಧ್ಯ ಎಂದರು.
ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಮನರೇಗಾ ಯೋಜನೆ ರದ್ದುಗೊಂಡಿದ್ದರಿಂದ ಬಡವರು ಮತ್ತು ದಲಿತರ ಜೀವನಕ್ಕೆ ಪೆಟ್ಟು ಬಿದ್ದಿದೆ. ಗ್ರಾಮಸ್ವರಾಜ್ಯದ ಕನಸಿಗೆ ಕೊಡಲಿ ಪೆಟ್ಟು ಬಿದ್ದಿದೆ. ಮಹಾತ್ಮಾಗಂಧಿ ಹೆಸರಿನ ಈ ಯೋಜನೆಯನ್ನು ರದ್ದುಗೊಳಿಸುವ ಮೂಲಕ ರಾಷ್ಟ್ರಪಿತನಿಗೆ ಅಪಮಾನ ಮಾಡಲಾಗಿದೆ ಎಂದು ಗುಡುಗಿದರು.
ರಾಹುಲ್ ಗಾಂಧಿ ಮಾತನಾಡಿ, ಮನರೇಗಾ ಯೋಜನೆಯನ್ನು ರದ್ದುಗೊಳಿಸುವ ಮೂಲಕ ಮೋದಿ ಸರ್ಕಾರ ಸಂವಿಧಾನದ ಮೇಲೆ ದಾಳಿ ನಡೆಸಿದಂತಾಗಿದೆ. ಮೂರು ಕರಾಳ ಕೃಷಿ ಕಾನೂನುಗಳನ್ನು ಜಾರಿಗೊಳಿಸಿದ ಮತ್ತು ಬಲವಂತವಾಗಿ ಜಿಎಸ್ ಟಿ ಜಾರಿಗೊಳಿಸಿದ ಮಾದರಿಯಲ್ಲಿ ಮನರೇಗಾ ಯೋಜನೆಯನ್ನು ರದ್ದುಗೊಳಿಸಲಾಗಿದೆ ಎಂದರು.
ಮೂರನೇ ಹಂತದ ಪಂಚಾಯತ್ ವ್ಯವಸ್ಥೆ ಜಾರಿಗೆ ನರೇಗಾ ಪೂರಕವಾಗಿತ್ತು. ಯಾವ ಯಾವ ಕಾಮಗಾರಿಗಳನ್ನು ನಡೆಸಬೇಕು ಎಂದು ಪಂಚಾಯಿತಿಗಳು ನಿರ್ಧಾರ ಕೈಗೊಳ್ಳುತ್ತಿದ್ದವು. ಕಾರ್ಮಿಕರು ಮತ್ತು ಜನರ ಧ್ವನಿಗೆ ಬೆಲೆ, ಗೌರವ ಇತ್ತು. ಎಲ್ಲಕ್ಕಿಂತ ಮೇಲಾಗಿ ಕೆಲಸಕ್ಕೆ ಬೇಡಿಕೆ ಇಡಲು ಅವಕಾಶ ಇತ್ತು ಎಂದರು.
ರೈತರು ಒಗ್ಗಟ್ಟಾಗಿ ಹೋರಾಟ ನಡೆಸಿದಾಗ ಪ್ರಧಾನಿ ಮೋದಿ ಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಿತು. ಅದೇ ಮಾದರಿಯಲ್ಲಿ ಹೋರಾಟ ನಡೆಸಿದರೆ ಮನರೇಗಾ ಕಾಯಿದೆ ಮರುಸ್ಥಾಪನೆಯಾಗಲಿದೆ. ಈ ಹೋರಾಟಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದೂ ಘೋಷಿಸಿದರು.

