ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರಿನ ಕೆ.ಆರ್ ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಬಂಧನ ಭೀತಿ ಎದುರಾಗಿದೆ. ಹೀಗಾಗಿ ಅವರು ತಲೆಮರೆಸಿಕೊಂಡಿದ್ದು , ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ಶುಕ್ರವಾರ ಹೈಕೋರ್ಟ್ ನಲ್ಲಿ ಬೈರತಿ ಬಸವರಾಜ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ನಂತರ ಶಾಸಕರು ತಲೆಮರೆಸಿಕೊಂಡಿದ್ದಾರೆ.ಅವರು ತಮ್ಮ ಬೆಂಗಳೂರಿನ ನಿವಾಸದಲ್ಲೂ ಇಲ್ಲ ಎಂದು ಗೊತ್ತಾಗಿದ್ದು, ಮೂರು ತಂಡ ರಚಿಸಿ ಶಾಸಕರಿಗಾಗಿ ಸಿಐಡಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸವೆ.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮೊದಲ ವಾರ ಬೈರತಿ ಬಸವರಾಜ್ ಹಾಜರಾಗಿದ್ದರು. ಆದರೆ ಕೊನೆಯ ವಾರ ಪೂರ್ತಿ ಅಧಿವೇಶನಕ್ಕೆ ಹಾಜರಾಗಿರಲಿಲ್ಲ. ಅವರು ಅಜ್ಞಾತ ಸ್ಥಳ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ. ವಿಚಾರಣಾ ನ್ಯಾಯಾಲಯದಲ್ಲೇ ಸೂಕ್ತ ಅರ್ಜಿ ಸಲ್ಲಿಸಲು ಭೈರತಿ ಬಸವರಾಜ್ ಗೆ ಹೈಕೋರ್ಟ್ ಸೂಚನೆ ನೀಡಿದೆ. ಆದರೆ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿದೆ.
ಈ ಕೊಲೆ ಪ್ರಕರಣದಲ್ಲಿ ಕೋಕಾ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದ್ದರಿಂದ ಬಸವರಾಜ್ ಅವರು ಕೊಂಚ ನಿರಾಳರಾಗಿದ್ದರು. ಜಾಮೀನು ಸಿಗದೆ ಇರುವುದರಿಂದ ಪೊಲೀಸರು ಅವರನ್ನು ಯಾವುದೇ ಕ್ಷಣದಲ್ಲಿ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

