ಬೆಂಗಳೂರು: ಮುಖ್ಯಮಂತ್ರಿ ಹುದ್ದೆಗೆ ಡಿಕೆ ಶಿವಕುಮಾರ್ ಆಯ್ಕೆಯಾಗುತ್ತಾರೆ ಎಂಬ ಕೆಲವು ಶಾಸಕರ ಅಭಿಪ್ರಾಯಗಳನ್ನು ಕುರಿತು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನು ಹೈಕಮಾಂಡ್ ಹೇಳಿದ್ದಂತೆ ಕೇಳುತ್ತೇನೆ ಎಂದು ಚುಟುಕಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತ ದೇವನಹಳ್ಳಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಶಾಸಕ ಇಕ್ಬಾಲ್ ಹುಸೇನ್ ಗೆ ಮಾತಿನ ಚಟ. ಅವರ ಮಾತನ್ನು ನಂಬಲು ಹೋಗಬೇಡಿ ಎಂದು ಸಿಡಿಮಿಡಿಗೊಂಡಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಯಾರೋ ಒಬ್ಬರು ಹೇಳಿದರು ಎಂದ ಮಾತ್ರಕ್ಕೆ ಬದಲಾವಣೆ ಆಗುವುದಿಲ್ಲ. ಹೈಕಮಾಂಡ್ ನಾಯಕರ ತೀರ್ಮಾನವೇ ಅಂತಿಮ. ಸೋನಿಯಾಗಾಂಧಿ, ರಾಹುಲ್ ಗಾಂಧಿ, ಸುರ್ಜೇವಾಲ, ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ಮಾಡುತ್ತಾರೆ. ಶಾಸಕ ಇಕ್ಬಾಲ್ ಹುಸೇನ್ ಅವರು ವೈಯಕ್ತಿಕ ಹೇಳಿಕೆ ಕೊಟ್ಟಿದ್ದಾರೆ ಅಷ್ಟೇ ಎಂದು ತಿಳಿಸಿದ್ದಾರೆ.

