ಹಾಸನ: ಅಸಮಾನತೆ ತೊಡದು ಹಾಕದವರೆಗೆ ಸ್ವಾತಂತ್ರ್ಯದ ಉದ್ದೇಶ ಈಡೇರುವುದಿಲ್ಲ ಎಂಬ ಉದ್ದೇಶದಿಂದಲೇ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜಾತಿ ವ್ಯವಸ್ಥೆಯಿಂದಾಗಿ ಉಂಟಾಗಿರುವ ಅಸಮಾನತೆ ತೊಡದು ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸರ್ಕಾರಿ ಯೋಜನೆಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲಾ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಯಾವುದಾದರೂ ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ. 2023 ಮೇ 23 ಕ್ಕೆ ಅಧಿಕಾರಕ್ಕೆ ಬಂದ ನಾವು ಮೊದಲ ವರ್ಷದಲ್ಲಿಯೇ ಎಲ್ಲ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಜೂನ್ 11 ರಿಂದಲೇ ಶಕ್ತಿ ಯೋಜನೆ ಜಾರಿಗೊಳಿಸಿದೆವು. ನಂತರ ಜುಲೈನಲ್ಲಿ ಅನ್ನಭಾಗ್ಯ, ಗೃಹ ಜ್ಯೋತಿ, ಆಗಸ್ಟ್‌ನಲ್ಲಿ ಗೃಹಲಕ್ಷ್ಮಿ, 2024 ಜನವರಿಗೆ ಯುವನಿಧಿ ಯೋಜನೆ ಜಾರಿ ಮಾಡಿದೆವು. ಇದುವರೆಗೂ ರೂ. 1,08,135 ಕೋಟಿಯನ್ನು ಗ್ಯಾರಂಟಿ ಮೂಲಕ ಜನರಿಗೆ ನೀಡಲಾಗಿದೆ. ಲೋಕಸಭೆ ಚುನಾವಣೆಯ ನಂತರ ಗ್ಯಾರಂಟಿ ನಿಲ್ಲುತ್ತವೆ ಎಂದು ಪ್ರತಿಪಕ್ಷದವರು ಆಪಾದಿಸಿದರು. ಆದರೆ ಎಲ್ಲಿ ನಿಂತಿವೆ ಎಂದು ಜನಸ್ತೋಮವನ್ನು ಪ್ರಶ್ನಿಸಿದರು.
ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಕಳೆದರೂ ಇನ್ನೂ ಸಮಾಜದಲ್ಲಿ ಸಮಾನತೆ ಮೂಡಿಲ್ಲ. ಶ್ರೀಮಂತರು ಶ್ರೀಮಂತರಾಗಿ ಬಡವರು ಬಡವರೇ ಆಗಿದ್ದಾರೆ. ಜಾತಿ ವ್ಯವಸ್ಥೆಯಿಂದಾಗಿ ಸಮಾನ ಅವಕಾಶ ಸಿಗದೇ ಅಸಮಾನತೆ ಇನ್ನೂ ತಾಂಡವವಾಡುತ್ತಿದೆ ಎಂದು ವಿಷಾದಿಸಿದರು.
ದೇಶಕ್ಕೆ ಸಂವಿಧಾನ ಕೊಟ್ಟ ಡಾ.ಅಂಬೇಡ್ಕರ್ ಅವರು ಸಮಾನತೆ, ಭ್ರಾತೃತ್ವ, ಸಮಸಮಾಜ ನಿರ್ಮಾಣ ಆಗಬೇಕು. ಎಲ್ಲರಿಗೂ ಸಮಾನ ಅವಕಾಶ, ಸಮಾನ ಹಕ್ಕುಗಳು ಸಿಗಬೇಕು ಎಂದು ಬಯಸಿದ್ದರು. ಸಮಾನ ಅವಕಾಶ ಇಲ್ಲದಿದ್ದರೆ, ಸ್ವಾತಂತ್ರ್ಯದ ಉದ್ದೇಶ ಈಡೇರುವುದಿಲ್ಲ ಎಂದು ಪ್ರತಿಪಾದಿಸಿದ್ದರು. ಆ ಕಾರಣಗಳಿಗಾಗಿಯೇ ಎಲ್ಲ ಜಾತಿ, ಧರ್ಮಗಳ ಬಡವರಿಗೆ ಗ್ಯಾರಂಟಿಗಳನ್ನು ನೀಡಲಾಗಿದೆ ಎಂದರು.
ಅಂಬೇಡ್ಕರ್ ಅವರನ್ನು ಸದಾ ಸ್ಮರಿಸುತ್ತಾ ಅಸಮಾನತೆ ತೊಡದು ಹಾಕುವ ಕೆಲಸ ಮಾಡೋಣ. 2023ರ ಚುನಾವಣೆಯಲ್ಲಿ 492 ಭರವಸೆ ನೀಡಿದ್ದು, ಎರಡೂವರೆ ವರ್ಷದಲ್ಲಿ 242 ಭರವಸೆಗಳನ್ನು ಈಡೇರಿಸಿದ್ದೇವೆ ಎಂದೂ ತಿಳಿಸಿದರು.

