ನವದೆಹಲಿ: ಸಂಚಾರ ನಡೆಸದ ವಿಮಾನಗಳ ಟಿಕೆಟ್ ನ ಪೂರ್ಣ ಮೊತ್ತವನ್ನು ಭಾನುವಾರ ಸಂಜೆಯೊಳಗೆ ಪ್ರಯಾಣಿಕರಿಗೆ ಮರಳಿಸಬೇಕು ಎಂದು ಇಂಡಿಗೋ ಸಂಸ್ಥೆಗೆ ಕೇಂದ್ರ ವಿಮಾನಯಾನ ಸಚಿವಾಲಯ ತಾಕೀತು ಮಾಡಿದೆ. ಜತೆಗೆ ಎರಡು ದಿನಗಳ ಒಳಗಾಗಿ ಪ್ರಯಾಣಿಕರ ಬ್ಯಾಗೇಜುಗಳನ್ನು ಹಿಂದಿರುಗಿಸಬೇಕು ಎಂದೂ ಸೂಚನೆ ನೀಡಿದೆ. ಒಂದು ವೇಳೆ ಮರುಪಾವತಿ ವಿಳಂಬ ಅಥವಾ ಮರುಪಾವತಿ ಆದೇಶವನ್ನು ಉಲ್ಲಂಘಿಸಿದರೆ ನಿಯಂತ್ರಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದೆ.
ಕಳೆದ ಐದು ದಿನಗಳಿಂದ ಇಂಡಿಗೋದ ಸಾವಿರಕ್ಕೂ ಹೆಚ್ಚಿನ ವಿಮಾನಗಳ ಸಂಚಾರ ರದ್ದಾಗಿದ್ದರಿಂದ ಲಕ್ಷಾಂತರ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದರು.
ಸೇವೆಯನ್ನು ರದ್ದುಪಡಿಸಲಾದ ಎಲ್ಲಾ ವಿಮಾನಗಳ ಟಿಕೆಟ್ ದರವನ್ನು ಭಾನುವಾರ ರಾತ್ರಿ 8 ಗಂಟೆಯೊಳಗೆ ಗ್ರಾಹಕರಿಗೆ ಮರುಪಾವತಿ ಮಾಡಬೇಕು. ಒಂದುವೇಳೆ ಪ್ರಯಾಣ ಮರುನಿಗದಿ ಮಾಡಿರುವ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಬಾರದು ಎಂದೂ ಸುವಂತಿಲ್ಲ ಎಂದೂ ಕೇಂದ್ರ ವಿಮಾನಯಾನ ಸಚಿವಾಲಯ ತಿಳಿಸಿದೆ.
ಇಂದೂ ಸಹ ಇಂಡಿಗೋದ 400ಕ್ಕೂ ಅಧಿಕ ವಿಮಾನಗಳ ಸಂಚಾರ ರದ್ದುಗೊಂಡಿದ್ದು, ಸಾವಿರಾರು ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ. ಶುಕ್ರವಾರ ಒಂದೇ ದಿನ ಸುಮಾರು 1,000 ವಿಮಾನಗಳು ರದ್ದಾಗಿದ್ದವು

