ಬೆಂಗಳೂರು: ಬೆಂಗಳೂರು ಸಿಟಿ ಪೊಲೀಸ್ ಹಾಗೂ ಫೆಡರೇಷನ್ ಆಫ್ ಹಿಸ್ಟೋರಿಕ್ ವೆಹಿಕಲ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಪೌಲ್ ಜಾನ್ ರೆಸಾರ್ಟ್ ಮತ್ತು ಹೊಟೇಲ್ ಸಂಸ್ಥೆ ಡಿಸೆಂಬರ್ 7 ರ ಭಾನುವಾರದಂದು ಡ್ರಗ್ಸ್ ಮುಕ್ತ ಕರ್ನಾಟಕಕ್ಕಾಗಿ ವಿಂಟೇಜ್ ಕಾರ್ ರ‍್ಯಾಲಿ ಮೂಲಕ ಜಾಗೃತಿ ಅಭಿಯಾನವನ್ನು ಆಯೋಜಿಸಿದೆ.
ಭಾನುವಾರ ಬೆಳಿಗ್ಗೆ 9 ಗಂಟೆಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಗೃಹ ಮಂತ್ರಿ ಜಿ ಪರಮೇಶ್ವರ್ ಅವರು ಈ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಸಿಂಗ್ ಹಾಗೂ ನಟಿ ಸಪ್ತಮಿಗೌಡ ಉಪಸ್ಥಿತರಿರಲಿದ್ದಾರೆ. ವಿಧಾನಸೌಧದಿಂದ ಹೊರಡಲಿರುವ ವಿಂಟೇಜ್ ಕಾರುಗಳ ಈ ಆಕರ್ಷಕ ಮೆರವಣಿಗೆ, ಬಿಗ್ ಬನಿಯಾನ್ ವೈನ್‌ಯಾರ್ಡ್ ಅಂಡ್ ರೆಸಾರ್ಟ್ ತನಕ ಸಾಗಲಿದೆ.
ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಸಿಂಗ್ ತಮ್ಮ ಸಂದೇಶದಲ್ಲಿ, ಈ ವಿಶೇಷ ಕಾರ್ಯಕ್ರಮವು ಡ್ರಗ್ಸ್‌ಗಳ ವಿರುದ್ಧದ ನಮ್ಮ ದೃಢ ಹೋರಾಟದಲ್ಲಿನ ಒಗ್ಗಟ್ಟಿನ ಸಂಕೇತವಾಗಿದೆ. ಇದು ಡ್ರಗ್ಸ್ ಮುಕ್ತ ಕರ್ನಾಟಕವನ್ನು ಉತ್ತೇಜಿಸುವ ನಮ್ಮ ಇಲಾಖೆಯ ಗುರಿಗೆ ಪೂರಕವಾಗಿದೆ. ಡ್ರಗ್ಸ್ ಬಗ್ಗೆ ಜನರಲ್ಲಿ, ವಿಶೇಷವಾಗಿ ಯುವಜನರಲ್ಲಿ, ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ವಿಂಟೇಜ್ ಕಾರ್ ರ‍್ಯಾಲಿಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಮ್ಮ ಈ ಉದ್ದೇಶಕ್ಕೆ ಬೆಂಬಲ ನೀಡಬೇಕು ಎಂದು ತಿಳಿಸಿದ್ದಾರೆ.
ಪೌಲ್ ಜಾನ್ ರೆಸಾರ್ಟ್ ಹಾಗೂ ಹೋಟೆಲ್ಸ್ ಸಂಸ್ಥೆಯ ವಕ್ತಾರರು ಮಾತನಾಡಿ “ಈ ಕಾರ್ಯಕ್ರಮವು ಪರಂಪರೆ, ಕರಕುಶಲತೆ ಮತ್ತು ವೈನ್‌ಯಾರ್ಡ್‌ನ ಆತಿಥ್ಯದ ವಿಶಿಷ್ಟ ಸಮ್ಮಿಲನವಾಗಿದೆ. ಜೊತೆಗೆ, ಇದು ನಮ್ಮ ಡ್ರಗ್ಸ್ ವಿರುದ್ಧದ ಹೋರಾಟದಲ್ಲಿನ ಒಗ್ಗಟ್ಟಿನ ಸಂಕೇತವಾಗಿದೆ. ನಾವು ನಾಗರಿಕರನ್ನು ಈ ಮಹತ್ವದ ಉದ್ದೇಶಕ್ಕೆ ಬೆಂಬಲ ನೀಡಲು, ರ‍್ಯಾಲಿಯ ವೀಕ್ಷಣೆಗಾಗಿ ಮತ್ತು ಡ್ರಗ್ಸ್ ಮುಕ್ತ ರಾಜ್ಯದ ಗುರಿಯನ್ನು ಸಾಧಿಸಲು ನಮ್ಮೊಂದಿಗೆ ಕೈಜೋಡಿಸಲು ಆಹ್ವಾನಿಸುತ್ತೇವೆ. ಇದೇ ವೇಳೆ ನಾವು 12 ದಿನಗಳ ಬಿಗ್ ಬನ್ಯಾನ್ ವಿನಿಯಾರ್ಡ್ ಮತ್ತು ರೆಸಾರ್ಟ್‌ನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಆಯೋಜಿಸಲಾಗಿರುವಂತಹ ವಿನಿಯಾರ್ಡ್ ಕ್ರಿಸ್‌ಮಸ್ ಮಾರ್ಕೇಟ್‌ಗೆ ಚಾಲನೆ ನೀಡಲಿದ್ದೇವೆ ಎಂದಿದ್ದಾರೆ.

