ಕಲಬುರಗಿ: ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಮಾದರಿಯಲ್ಲೇ ಆರ್ ಎಸ್ ಎಸ್ ಹಣಕಾಸಿನ ಮೂಲ ಕುರಿತು ತನಿಖಾ ಸಂಸ್ಥೆಗಳು ಏಕೆ ತನಿಖೆ ಮಾಡುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕರನ್ನು ಬೆದರಿಸುವ ತಂತ್ರಗಾರಿಕೆ ಇದಾಗಿದೆ. ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆ ಅಲ್ಲ ಎನ್ನುವುದಾದರೆ ಆರ್ ಎಸ್ ಎಸ್ ಹಣಕಾಸಿನ ಮೂಲವನ್ನು ಕುರಿತೂ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಹಣದ ವ್ಯವಹಾರವೇ ಇಲ್ಲದ ಮನಿ ಲ್ಯಾಂಡರಿಂಗ್ ಪ್ರಕರಣವಾಗಿದೆ.ಇದಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಸಹೋದರರಿಗೆ ದೆಹಲಿ ಪೊಲೀಸರು ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಈ ಪ್ರಕರಣ ಜಗತ್ತಿನಲ್ಲೇ ವಿಶಿಷ್ಟ ಪ್ರಕರಣ ಎಂದು ವ್ಯಂಗ್ಯವಾಡಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದ ಮಾದರಿಯಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ. ಇದುವರೆಗೆ ಆರ್ ಎಸ್ ಎಸ್ ನ ಆದಾಯ ಮೂಲ ಯಾವುದು ಎನ್ನುವುದು ಯಾರಿಗೂ ತಿಳಿದಿಲ್ಲ. ಅಲ್ಲಿ ಏಕೆ ಆದಾಯ ತೆರಿಗೆ ದಾಳಿ ನಡೆಸುವುದಿಲ್ಲ. ಗುರುದಕ್ಷಿಣೆ ಮಾತ್ರ ಸ್ವೀಕಾರ ಮಾಡುತ್ತೇವೆ ಎನ್ನುವುದಾದರೆ ಅವರ ಗುರು ಯಾರು, ಯಾವ ಧ್ವಜದ ಮೇಲೆ ಅವರು ಹಣ ಸಂಗ್ರಹಿಸುತ್ತಿದ್ದಾರೆ ಎಂದು ಕೆದಕಿದ ಪ್ರಿಯಾಂಕ್ ಖರ್ಗೆ, 330 ಸಾವಿರ ಡಾಲರ್ ಅನ್ನು ಸಂಘ ಪರಿವಾರ ಅಮೆರಿಕಾದಲ್ಲಿ ಇಟ್ಟಿದೆ. ಅಷ್ಟೊಂದು ಹಣ ಅವರಿಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ದೇಶದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದಾಗ ಪಿಎಂ ಮೋದಿಯವರಿಗೆ ಉತ್ತರ ಕೊಡಲು ಆಗದೇ ಇದ್ದಾಗ ವಿರೋಧ ಪಕ್ಷಗಳ ಮೇಲೆ ಈ ರೀತಿ ದಾಳಿ ನಡೆಸುತ್ತಾ ಬಂದಿದ್ದಾರೆ ಎಂದೂ ಟೀಕಿಸಿದರು.

