ಹಾಸನ: ಭೂಮಿಯ ಮಾಲೀಕತ್ವವನ್ನು ಖಚಿತಪಡಿಸುವ ಭೂ ಗ್ಯಾರಂಟಿ ಯೋಜನೆಯನ್ನು ಮತ್ತೊಂದು ಗ್ಯಾರಂಟಿ ಯೋಜನೆಯಾಗಿ ಕೊಡಲು ಸರಕಾರ ಬದ್ಧವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಅವರು ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸರ್ಕಾರಿ ಸೇವೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಭೂ ಮಾಲೀಕತ್ವ ಎನ್ನುವುದು ದಶಕಗಳಿಂದ ಕಗ್ಗಂಟಾಗಿತ್ತು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಕಳೆದ ಬಜೆಟ್‌ನಲ್ಲಿ ಸರಳೀಕೃತ ದರಖಾಸ್ತು ಪೋಡಿ ದುರಸ್ತು ಅಭಿಯಾನ ಮಾಡುವುದಾಗಿ ಸರ್ಕಾರ ಘೋಷಿಸಿತ್ತು. ಇದೀಗ ದರಖಾಸ್ತು ಪೋಡಿ ದುರಸ್ತು ಅಭಿಯಾನ ಮಾಡಲಾಗಿದೆ. ಇದು ಆಗುವುದೇ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರು ಟೀಕಿಸಿದ್ದರು. ಇದೀಗ ಆ ಕೆಲಸವನ್ನು ಮಾಡಿ ತೋರಿಸಿದ್ದೇವೆ. ಒಂದೇ ವರ್ಷದಲ್ಲಿ 24 ಸಾವಿರ ರೈತರ ಜಮೀನು ಪೋಡಿ ದುರಸ್ತು ಕೈಗೆತ್ತಿಕೊಂಡಿದ್ದೇವೆ ಎಂದು ವಿವರಣೆ ನೀಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ರೂ. 1,08,235.37 ಕೋಟಿಯನ್ನು ಜನರಿಗೆ ವಿನಯೋಗಿಸಲಾಗಿದೆ. ಜನರಿಗೆ ಇಷ್ಟೊಂದು ಹಣವನ್ನು ವರ್ಗಾಯಿಸಿದ ಸರ್ಕಾರ ಜಗತ್ತಿನಲ್ಲಿ ಇದ್ದರೆ ಅದು ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದು ಘೋಷಿಸಿದರು.
ಹಾಸನದ ವಿಮಾನ ನಿಲ್ದಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದನ್ನು ಮುಗಿಸಬೇಕಿದೆ. ಹೇಮಾವತಿ ನಾಲೆಗಳ ಆಧುನೀಕರಣಕ್ಕೆ ವೇಗ ನೀಡಲಾಗುತ್ತದೆ ಎಂದೂ ಸಚಿವ ಕೃಷ್ಣಭೈರೇಗೌಡ ಭರವಸೆ ನೀಡಿದರು.
ಹಾಸನ ರಾಜಕೀಯವಾಗಿ ಬಹಳ ಪ್ರಭಾವ ಹೊಂದಿದೆ. ಘಟಾನುಘಟಿ ರಾಜಕಾರಣಿಗಳ ತವರೂರು ಹಾಸನ. ಈ ಜಿಲ್ಲೆಯವರೇ ಮಂತ್ರಿಯಾಗಬೇಕು ಎಂಬ ಬೇಡಿಕೆ ಇದ್ದು, ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದರು.

