ಜೈಪುರ: ವಿವಾಹವಾಗಲು ಕಾನೂನು ರೀತಿಯಲ್ಲಿ ಯುವತಿ 18 ಮತ್ತು ಯುವಕನಿಗೆ 21 ವರ್ಷವಾಗದಿದ್ದರೂ ಸಹಮತದ ಆಧಾರದ ಮೇಲೆ ಲಿವ್ ಇನ್ ರಿಲೇಶನ್ ಶಿಪ್ ಜೀವನ ನಡೆಸಬಹುದು ಎಂದು ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿದೆ.
ಕಾನೂನಾತ್ಮಕವಾಗಿ ನಿಗದಿಯಾಗಿರುವ ಮದುವೆ ವಯಸ್ಸನ್ನು ತಲುಪದಿದ್ದರೂ ಇಬ್ಬರು ವಯಸ್ಕರು, ಸಹಜೀವನ ನಡೆಸಲು ಅರ್ಹರಾಗಿರುತ್ತಾರೆ. ಅವರ ಸಾಂವಿಧಾನಿಕ ಹಕ್ಕಿಗೆ ಚ್ಯುತಿ ತರಲು ಸಾಧ್ಯವಿಲ್ಲ ಎಂದೂ ಅಭಿಪ್ರಾಯಪಟ್ಟಿದೆ.
ಮದುವೆ ವಯಸ್ಸು ತಲುಪದಿದ್ದರೂ ಪರಸ್ಪರ ಒಪ್ಪಿಗೆಯ ಮೇರೆಗೆ ನಾವು ಒಟ್ಟಿಗೆ ವಾಸಿಸುತ್ತಿದ್ದೇವೆ. ನಮಗೆ ರಕ್ಷಣೆ ನೀಡಬೇಕು ಎಂದು ಕೋರಿ ಕೋಟಾ ಪ್ರದೇಶದ 18ರ ಯುವತಿ ಹಾಗೂ 19ರ ಯುವಕ ಸಲ್ಲಿಸಿದ್ದ ಅರ್ಜಿಯ ಮೇಲ್ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನೂಪ್ ಧಂದ್ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ.
ತಾವಿಬ್ಬರೂ ಒಪ್ಪಂದದ ಮೇರೆಗೆ ತಾವು ಇದೇ ವರ್ಷದ ಅಕ್ಟೋಬರ್ 27 ರಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದೇವೆ. ಯುವತಿಯ ಕುಟುಂಬದವರು ಒಪ್ಪದೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ರಕ್ಷಣೆ ನೀಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ರಕ್ಷಣೆ ನೀಡಿಲ್ಲ ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಇವರ ವಾದವನ್ನು ವಿರೋಧಿಸಿದ ಸರ್ಕಾರಿ ವಕೀಲರು ಈ ಯುವಕ ಮದುವೆಯಾಗುವ ಕಾನೂನಾತ್ಮಕ ವಯಸ್ಸನ್ನು ತಲುಪಿಲ್ಲ. ಆದ್ದರಿಂದ ಲಿವ್ ಇನ್ ರಿಲೇಶನ್ ಶಿಪ್ ಗೆ ಅವಕಾಶ ನೀಡಬಾರದು ಎಂದು ವಾದ ಮಂಡಿಸಿದ್ದರು.

