ಚಂಡೀಗಢ: ಸುಂದರವಾಗಿರುವುದನ್ನು ಸಹಿಸಲಾಗದೆ ಮಹಿಳೆಯೊಬ್ಬಳು ಎರಡು ವರ್ಷಗಳಲ್ಲಿ ಮೂವರು ಬಾಲಕಿಯರನ್ನು ಕೊಂದಿರುವ ದುರಂತ ಘಟನೆ ಹರಿಯಾಣದಲ್ಲಿ ವರದಿಯಾಗಿದೆ. ಈ ಸಂಬಂಧ 32 ವರ್ಷದ ಪೂನಂ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸುಂದರವಾಗಿದ್ದರು ಎಂಬ ಕಾರಣಕ್ಕೆ ಈ ಬಾಲಕಿಯರನ್ನು ಪೂನಂ ದ್ವೇಷಿಸುತ್ತಿದ್ದಳು. ಹತ್ಯೆಯಾದ ಬಾಲಕಿಯರೂ ಸಹ ಪೂನಂ ಸಂಬಂಧಿಕರೇ ಆಗಿದ್ದಾರೆ. ಜತೆಗೆ ಪೂನಂ ತನ್ನ ಮೂರು ವರ್ಷದ ಮಗನನ್ನೂ ಕೊಂದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಸುಂದರವಾದ ಬಾಲಕಿಯರ ಬಗ್ಗೆ ಪೂನಂ ದ್ವೇಷ ಬೆಳೆಸಿಕೊಂಡಿದ್ದಳು. ಇವರು ದೊಡ್ಡವರಾದ ಮೇಲೆ ತನಗಿಂತ ಸುಂದರವಾಗಿ ಕಾಣಿಸಬಹುದು ಎಂದು ದ್ವೇಷದ ಭಾವನೆ ಬೆಳೆಸಿಕೊಳ್ಳುತ್ತಿದ್ದಳು. ಇಂತಹ ಅಸೂಯೆ ಪ್ರವೃತ್ತಿ ಬೆಳೆಸಿಕೊಂಡಿದ್ದರಿಂದ ಮಾನಸಿಕ ಅಸ್ವಸ್ಥಳಂತೆ ಕಾಣಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಾಲಕಿಯ ಹತ್ಯೆಗಳನ್ನು ಆಕಸ್ಮಿಕ ಸಾವುಗಳೆಂದು ಬಿಂಬಿಸಲು ಬಾಲಕಿಯರನ್ನು ನೀರಿನ ತೊಟ್ಟಿಗಳಲ್ಲಿ ಮುಳುಗಿಸಿದ್ದಳು. ಮೂರನೇ ಹತ್ಯೆಯನ್ನು ಮದುವೆ ಸಮಾರಂಭದಲ್ಲಿಯೇ ಕೊಂದು ನೀರಿನ ತೊಟ್ಟಿಯಲ್ಲಿ ಮುಳುಗಿಸಿದ್ದಳು. 6 ವರ್ಷದ ಬಾಲಕಿ ಪೂನಂ ಅವರ ಸೋದರ ಸಂಬಂಧಿಯಾಗಿದ್ದು ಸುಂದರವಾಗಿದ್ದಳು ಎಂಬ ಕಾರಣಕ್ಕೆ ಹತ್ಯೆ ಮಾಡಲಾಗಿದೆ.
ಪಾಣಿಪತ್ ಜಿಲ್ಲೆಯ ಸೌಳ್ತಾ ಎಂಬಲ್ಲಿ ಮದುವೆ ನಡೆಯುತ್ತರುವಾಗಲೇ ಆರು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಮದುವೆ ಮನೆಯ ಮೊದಲ ಮಹಡಿಯಲ್ಲಿರುವ ಸ್ಟೋರ್ ರೂಂನಲ್ಲಿ ನೀರು ತುಂಬಿದ ಪ್ಲಾಸ್ಟಿಕ್ ಟಬ್ ನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಕೊಲೆ ಆರೋಪದ ಮೇಲೆ ಹುಡುಗಿಯ ಚಿಕ್ಕಮ್ಮ ಪೂನಂಳನ್ನು ಬಂಧಿಸಿದ್ದಾರೆ. ಮದುವೆ ಮನೆ ಸೂತಕದ ಮನೆಯಾಗಿತ್ತು.
ಬಾಲಕಿಯನ್ನು ಸ್ಟೋರ್ ರೂಂಗೆ ಕರೆದೊಯ್ದು ನೀರು ತುಂಬಿದ್ದ ಟಬ್ ನಲ್ಲಿ ಮುಳುಗಿಸಿ, ಉಸಿರುಗಟ್ಟಿಸಿ ಕೊಂದಿದ್ದಾಳೆ. ನಂತರ ಹೊರಗಿನಿಂದ ಕೊಠಡಿಗೆ ಬೀಗ ಹಾಕಿ ಏನೂ ನಡೆದಿಲ್ಲ ಎನ್ನುವಂತೆ ಮೌನವಾಗಿದ್ದಳು.
2023ರಲ್ಲಿ, ಸೋನಿಪತ್‌ನ ಭವಾರ್ ಗ್ರಾಮದಲ್ಲಿ ತಮ್ಮ ಮನೆಯ ನೀರಿನ ತೊಟ್ಟಿಯಲ್ಲಿ ಸ್ವಂತ ಅತ್ತಿಗೆಯ ಒಂಬತ್ತು ವರ್ಷದ ಮಗಳನ್ನು ಮುಳುಗಿಸಿ ಕೊಂದಿದ್ದಾಗಿ ಬಾಯಿ ಬಿಟ್ಟಿದ್ದಾಳೆ. ಕಳೆದ ಆಗಸ್ಟ್‌ನಲ್ಲಿ, ಸೋದರ ಸಂಬಂಧಿಯ ಆರು ವರ್ಷದ ಮಗಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

