ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚಳ: ಅಧಿವೇಶನದಲ್ಲಿ ಮಸೂದೆ ಮಂಡನೆ

Most read

ನವದೆಹಲಿ: ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ತೆಗೆದುಹಾಕಿ ಕೇಂದ್ರ ಅಬಕಾರಿ ತೆರಿಗೆ ಅಡಿಯಲ್ಲಿ ಮರಳಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಇನ್ನು ಮುಂದೆ ತಂಬಾಕು ಉತ್ಪನ್ನಗಳ ಬೆಲೆ ದುಪ್ಪಟ್ಟು ಆಗುವ ಸಂಭವವಿದೆ. ಈ ತೆರಿಗೆ ಪದ್ಧತಿ 2026 ಏಪ್ರಿಲ್‌ನಿಂದ ಜಾರಿಗೆಯಾಗಲಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿದ್ದು, ಬೆಲೆ ಎಷ್ಟು ಹೆಚ್ಚಳವಾಗಲಿದೆ ಎನ್ನುವುದು ಖಚಿತವಾಗಿಲ್ಲ.

ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಸಂಸತ್‌ ಅಧಿವೇಶನದಲ್ಲೇ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಎರಡು ಮಸೂದೆಗಳನ್ನು ಮಂಡಿಸಲಿದ್ದಾರೆ. ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ 2025 ಹಾಗೂ ಕೇಂದ್ರ ಅಬಕಾರಿ ಕಾಯ್ದೆ ತಿದ್ದುಪಡಿ ಮಸೂದೆ ಎಂಬ ಎರಡು ವಸೂದೆಗಳನ್ನು ಈ ಅಧಿವೇಶನದಲ್ಲೇ ಮಂಡಿಸುವರು ಎಂದು ತಿಳಿದು ಬಂದಿದೆ.

ಪ್ರಸ್ತುತ ಸಿಗರೇಟ್, ಪಾನ್ ಮಸಾಲ ಮತ್ತು ಗುಟ್ಕಾದಂತಹ ಉತ್ಪನ್ನಗಳಿಗೆ ಶೇ.28ರಷ್ಟು ಜಿಎಸ್‌ಟಿ ಜತೆಗೆ ‘ಪರಿಹಾರ ಸೆಸ್’ ತೆರಿಗೆ ವಿಧಿಸಲಾಗುತ್ತಿದೆ. ಇದನ್ನು ತೆಗೆದು ಹಾಕಿ ಹೊಸದಾಗಿ ಮಂಡಿಸುತ್ತಿರುವ ಎರಡು ಮಸೂದೆಗಳ ಅಡಿಯಲ್ಲಿ ತೆರಿಗೆ ವಿಧಿಸುವುದರಿಂದ ಈ ಉತ್ಪನ್ನಗಳ ಬೆಲೆ ಈಗಿನ ದರಕ್ಕಿಂತೆ ದುಬಾರಿಯಾಗಲಿದೆ ಎಂದು ತಿಳಿದು ಬಂದಿದೆ. 

ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ತೆಗೆದುಹಾಕಿ ಕೇಂದ್ರ ಅಬಕಾರಿ ತೆರಿಗೆ ಅಡಿಯಲ್ಲಿ ಮರಳಿ ತರಲಾಗುತ್ತದೆ. ಈ ಮೂಲಕ ತೆರಿಗೆ ಸಂಗ್ರಹವನ್ನು ಸರಳಗೊಳಿಸಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.

ಪಾನ್ ಮಸಾಲಾ, ಗುಟ್ಕಾ ಮತ್ತು ತಂಬಾಕು ಆಧಾರಿತ ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇವುಗಳ ಬಳಕೆಯನ್ನು ಕಡಿಮೆ ಮಾಡಲು ಸರ್ಕಾರ ಹೆಚ್ಚಿನ ತೆರಿಗೆಗಳನ್ನು ವಿಧಿಸುತ್ತಾ ಬರುತ್ತಿದೆ.

More articles

Latest article