ಅಮರಾವತಿ: ಆಂಧ್ರಪ್ರದೇಶದಲ್ಲಿ ಒಂದು ಕೆ.ಜಿ ಬಾಳೆಹಣ್ಣು ಕೇವಲ 50 ಪೈಸೆಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು, ಸರ್ಕಾರ ರೈತರನ್ನು ಮರೆತಿದೆ ಎಂದು ವೈಎಸ್ಆರ್ಸಿಪಿ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಬಾಳೆಹಣ್ಣು ಬೆಲೆ ಒಂದು ಬೆಂಕಿಪೊಟ್ಟಣ ಅಥವಾ ಒಂದು ಬಿಸ್ಕತ್ ಗಿಂತ ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ. ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎಂದೂ ಅವರು ಆಪಾದಿಸಿದ್ದಾರೆ.
ರೈತರು ಲಕ್ಷಾಂತರ ರೂ. ಬಂಡವಾಳ ಹೂಡಿ ತಿಂಗಳುಗಟ್ಟಲೆ ಶ್ರಮಪಟ್ಟು ಬಾಳೆ ಬೆಳೆದಿದ್ದಾರೆ. ಆದರೆ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಹಲೋ ಭಾರತ. ಆಂಧ್ರಪ್ರದೇಶದತ್ತ ಒಮ್ಮೆ ನೋಡಿ. ಒಂದು ಕೆ.ಜಿ ಬಾಳೆಹಣ್ಣು ಕೇವಲ 50 ಪೈಸೆಗೆ ಮಾರಾಟವಾಗುತ್ತಿದೆ. ಕೇವಲ ಬಾಳೆಹಣ್ಣು ಮಾತ್ರವಲ್ಲ, ಈರುಳ್ಳಿ, ಟೊಮೆಟೊ ಸೇರಿದಂತೆ ಇತರ ಆಹಾರ ಪದಾರ್ಥಗಳ ಬೆಲೆಯೂ ಕುಸಿದಿದೆ. ಟಿಡಿಪಿ ನೇತೃತ್ವದ ಎನ್ ಡಿ ಎ ಸರ್ಕಾರವು ಭರವಸೆ ನೀಡಿದಂತೆ ಉಚಿತ ಬೆಳೆ ವಿಮೆ, ವಿಪತ್ತುಗಳ ಸಮಯದಲ್ಲಿ ಸಹಾಯಧನ ಮತ್ತು ಬೆಂಬಲ ಬೆಲೆಯನ್ನೂ ರೈತರಿಗೆ ನೀಡಿಲ್ಲ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಟೀಕಿಸಿದ್ದಾರೆ.

