ನವದೆಹಲಿ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಪ್ರಕರಣದಲ್ಲಿ ಹಿರಿಯ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೈಸಿಂಗ್ ಜೊಯ್‌ಮಾಲ್ಯ ಅವರ ದ್ವಿಸದಸ್ಯ ಪೀಠ ಪೋಕ್ಸೋ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿದ್ದು, ಸಿಐಡಿ ಮತ್ತು ಸಂತ್ರಸ್ತ ಬಾಲಕಿಗೆ ನೋಟಿಸ್ ಜಾರಿ ಮಾಡಿದೆ.
ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ರದ್ದುಪಡಿಸಲು ನ. 13ರಂದು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ನಂತರ ಯಡಿಯೂರಪ್ಪ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಯಡಿಯೂರಪ್ಪ ಪರ ವಾದಿಸಿದ ಹಿರಿಯ ವಕೀಲ ಸಿದ್ದಾರ್ಥ ಲೂಥ್ರಾ ಮತ್ತು ಸಿದ್ದಾರ್ಥ ದವೆ ಅವರು, ಹೈಕೋರ್ಟ್ ಫೆ.7, 2025ರ ತೀರ್ಪನ್ನು ತಪ್ಪಾಗಿ ಅರ್ಥೈಸಲಾಗಿದೆ. 88 ವರ್ಷದ ಯಡಿಯೂರಪ್ಪ ಅವರ ಅರ್ಜಿಯನ್ನು ಅರ್ಹತೆ ಆಧಾರದಲ್ಲಿ ಪರಿಗಣಿಸಿಲ್ಲ. ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದವರು ಎಂದು ವಾದಿಸಿದರು.
ಇದೇ ಪ್ರಕರಣ ಸಂಬಂಧ ಯಡಿಯೂರಪ್ಪ ಅವರು ಇಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ವಿಚಾರಣಾಧೀನ ನ್ಯಾಯಾಲಯದ ಸಮನ್ಸ್ ಪ್ರಶ್ನಿಸಿ ಯಡಿಯೂರಪ್ಪ ಹೈಕೋರ್ಟ್ ಕದ ತಟ್ಟಿದ್ದರು. ಆದರೆ ಹೈಕೋರ್ಟ್ ಇವರ ಅರ್ಜಿಯನ್ನು ತಿರಸ್ಕರಿಸಿ ಡಿಸೆಂಬರ್ 2 ರಂದು ಖುದ್ದು ಕೋರ್ಟ್ಗೆ ಹಾಜರಾಗುವಂತೆ ಆದೇಶ ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಯಡಿಯೂರಪ್ಪ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

