ಸಿಎಂ-ಡಿಸಿಎಂ ಉಪಹಾರ ಕೂಟ: ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ, ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದು ಘೋಷಣೆ

Most read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಸದಾಶಿವನಗರ ನಿವಾಸಕ್ಕೆ ಆಗಮಿಸಿ ಉಪಹಾರ ಸೇವಿಸಿದರು. ಈ ಮೂಲಕ ಪ್ರತಿಪಕ್ಷಗಳ ಹಾರಾಟಕ್ಕೆ ಬ್ರೇಕ್‌ ಹಾಕುವ ಪ್ರಯತ್ನ ಮಾಡಿದ್ದಾರೆ. ನಂತರ ಮಾತನಾಡಿದ ಇಬ್ಬರೂ ಮುಖಂಡರು, ಹೈಕಮಾಂಡ್ ನಿರ್ಧಾರವನ್ನು ನಾವು ಒಪ್ಪಿಕೊಳ್ಳುತ್ತೇವೆ. ನಾವು ಬೇರೆ ಬೇರೆಯಾಗಿಲ್ಲ. ಬೇರೆ ಬೇರೆ ಎನ್ನುವುದು ಮಾಧ್ಯಮಗಳ ಸೃಷ್ಟಿ ಎಂದರು.

ಉಪಹಾರ ಸೇವಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೊನ್ನೆಯೇ ಅವರು ಮನೆಗೆ ಬನ್ನಿಎಂದು ಆಹ್ವಾನಿಸಿದ್ದರು. ನಾವಿಬ್ಬರೂ ಒಟ್ಟಿಗೆ ಬ್ರೇಕ್ ಫಾಸ್ಟ್ ಮಾಡಿದ್ದೇವೆ. ಪಕ್ಷ, ಸರ್ಕಾರ ಕುರಿತು ಚರ್ಚೆ ಮಾಡಿದ್ದೇವೆ. ಡಿಸೆಂಬರ್ 8 ರಿಂದ ಅಧಿವೇಶನ ಆರಂಭವಾಗಲಿದೆ. ನಮ್ಮ ಕಾರ್ಯತಂತ್ರದ ಬಗ್ಗೆ ಚರ್ಚೆ ಮಾಡಿದ್ದೇವೆ. ವಿಪಕ್ಷಗಳ ಯಾವುದೇ ವಿಚಾರ ಪ್ರಸ್ತಾಪಿಸಿದರೂ ಎದುರಿಸುತ್ತೇವೆ ಎಂದರು.

ರಾಜ್ಯದ ಸಮಸ್ಯೆಗಳನ್ನು ಕುರಿತು ನಾನು, ಡಿಸಿಎಂ ಚರ್ಚೆ ಮಾಡಿದ್ದೇವೆ. ಕಬ್ಬಿಗೆ ಬೆಲೆ ನಿಗದಿ ಕುರಿತು ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಚರ್ಚೆ ಮಾಡಲಾಗಿದೆ. ಕೇಂದ್ರ ಸರ್ಕಾರ MSP ನಿಗದಿ ಮಾಡುವಾಗ PDS ಮಾಡಿದೆ. PDS ಮೂಲಕ ವಿತರಣೆ ಮಾಡಲು ಆಗುವುದಿಲ್ಲ. ರೈತರು MSP ನಿಗದಿ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. 54-55 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆ ಆಗಬಹುದು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಎಥೆನಾಲ್ ಹಂಚಿಕೆ ಮಾಡುವುದೂ ಕೂಡಾ ಕೇಂದ್ರ ಸರ್ಕಾರ. MSP, FRP ನಿಗದಿ ಮಾಡೋದು ಕೇಂದ್ರ ಸರ್ಕಾರ. ಈ ಬಗ್ಗೆ ಸಂಸದರ ಮೀಟಿಂಗ್ ಕರೆಯಬೇಕು ಎಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.

ಹೈಕಮಾಂಡ್‌ ಭೇಟಿಗೆ ಸಮಯ ಸಿಕ್ಕರೆ ಭೇಟಿಯಾಗುತ್ತೇವೆ. ಹೈಕಮಾಂಡ್‌ ಹೇಳಿದಂತೆ ನಾನು, ಡಿಸಿಎಂ ನಡೆದುಕೊಳ್ಳುತ್ತೇವೆ.  ಹೈಕಮಾಂಡ್‌ ಹೇಳಿದಂತೆ ಕೇಳಬೇಕೆಂದು ಮೊನ್ನೆಯೂ ಚರ್ಚೆ ಮಾಡಿದ್ದೇವೆ. ಇಂದು ಕೂಡ ಚರ್ಚೆ ಮಾಡಿದ್ದೇವೆ. ನಾವು ಯಾವಾಗಲೂ ಒಗ್ಗಟ್ಟಾಗಿ ಇದ್ದೇವೆ. ನಾನು, ಡಿ.ಕೆ ಶಿವಕುಮಾರ್‌ ಬ್ರದರ್ಸ್‌ ಎಂದು ಸಿದ್ದರಾಮಯ್ಯ ಹೇಳಿದರು.

ಡಿಕೆಶಿ ಯಾವಾಗ ಸಿಎಂ ಆಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹೈಕಮಾಂಡ್‌ ಹೇಳಿದಾಗ ಆಗುತ್ತಾರೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಮುಖ್ಯಮಂತ್ರಿಗಳು ನಮ್ಮ ಮನೆಯಲ್ಲಿ ಉಪಹಾರ ಸೇವಿಸಿದ್ದಾರೆ. ಬ್ರೇಕ್ ಫಾಸ್ಟ್ ವೇಳೆ ಪಕ್ಷ ಮತ್ತು ಸರ್ಕಾರದ ವಿಚಾರಗಳನ್ನು ಕುರಿತು ಚರ್ಚಿಸಿದ್ದೇವೆ. ಪ್ರತಿಪಕ್ಷಗಳನ್ನು ಯಾವ ರೀತಿ ಎದುರಿಸಬೇಕೆಂದು ಚರ್ಚೆ ಮಾಡಿದ್ದೇವೆ. ಸದನದಲ್ಲಿ ವಿಪಕ್ಷಗಳು ಯಾವುದೇ ವಿಚಾರ ಪ್ರಸ್ತಾಪಿಸಿದರೂ ಎದುರಿಸುತ್ತೇವೆ ಎಂದರು.

ಸರ್ವಪಕ್ಷ ಸಭೆ ಕರೆಯುವ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಕೇಂದ್ರದ ಬಳಿ ವಿಪಕ್ಷ ನಾಯಕರನ್ನು ಕರೆದೊಯ್ಯುವ ಬಗ್ಗೆ ಚರ್ಚಿಸಲಾಗಿದೆ. ನಮ್ಮದು ಒಂದೇ ಧ್ವನಿ, ಒಂದೇ ಆಚಾರ ವಿಚಾರ ಎಂದರು. ಹೈಕಮಾಂಡ್ ನಿರ್ಧಾರವನ್ನು ನಾವು ಒಪ್ಪಿಕೊಳ್ಳುತ್ತೇವೆ. ನಾವು ಬೇರೆ ಬೇರೆಯಾಗಿಲ್ಲ. ಬೇರೆ ಬೇರೆ ಎನ್ನುವುದು ಮಾಧ್ಯಮಗಳ ಸೃಷ್ಟಿ ಎಂದರು.

ಸಿದ್ದರಾಮಯ್ಯ ಅವರನ್ನು ಶಿವಕುಮಾರ್ ಮತ್ತು ಅವರ ಸಹೋದರ ಮಾಜಿ ಸಂಸದ ಡಿ.ಕೆ. ಸುರೇಶ್ ಆತ್ಮೀಯವಾಗಿ ಸ್ವಾಗತಿಸಿದರು. ಶಿವಕುಮಾರ್ ಅವರೇ ಸ್ವತಃ ಸಿಎಂ ಸಿದ್ದರಾಮಯ್ಯ ಅವರಿಗೆ ಇಡ್ಲಿ ಮತ್ತು ನಾಟಿ ಕೋಳಿ ಸಾಂಬಾರ್‌ ಬಡಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಹೈಕಮಾಂಡ್‌ ಆದೇಶದಂತೆ ಕಳೆದ ಶನಿವಾರ ಸಿದ್ದರಾಮಯ್ಯ ಅವರು ಶಿವಕುಮಾರ್‌ ಅವರನ್ನು ಉಪಹಾರಕ್ಕೆ ಆಹ್ವಾನಿಸಿ ಮಾತುಕತೆ ನಡೆಸಿದ್ದರು. ಅಂದಿನಿಂದಲೇ ವಾತಾವರಣ ತಿಳಿಯಾಗಿತ್ತು. ಅಂದೂ ಸಹ ಇಬ್ಬರೂ ನಾಯಕರು ಹೈಕಮಾಂಡ್ ಹೇಳಿದಂತೆ ಮುಂದುವರಿಯುತ್ತೇವೆ ಎಂದು ಘೋಷಿಸಿದ್ದರು. ಈಗಲೂ ಅದೇ ಅಭಿಪ್ರಾಯಕ್ಕೆ ಬದ್ಧರಿರುವುದಾಗಿ ಇಬ್ಬರೂ ನಾಯಕರು ಪುನರುಚ್ಛರಿಸಿದ್ದಾರೆ.

More articles

Latest article