ಬೆಂಗಳೂರು: ಅಧಿಕಾರ ಹಂಚಿಕೆ ಸಂಬಂಧ ಬೆಟ್ಟದಂತೆ ಎರಗಿದ್ದ ಸಮಸ್ಯೆ ಮಂಜಿನಂತೆ ಕರಗಿ ಹೋದ ವಾತಾವರಣ ಮೂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಆಗಮಿಸಿ ಉಪಹಾರ ಸೇವಿಸಿದರು. ಈ ಮೂಲಕ ಪ್ರತಿಪಕ್ಷಗಳ ಹಾರಾಟಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ಶಿವಕುಮಾರ್ ಮತ್ತು ಅವರ ಸಹೋದರ ಮಾಜಿ ಸಂಸದ ಡಿ.ಕೆ. ಸುರೇಶ್ ಆತ್ಮೀಯವಾಗಿ ಸ್ವಾಗತಿಸಿದರು. ಶಿವಕುಮಾರ್ ಅವರೇ ಸ್ವತಃ ಸಿಎಂ ಸಿದ್ದರಾಮಯ್ಯ ಅವರಿಗೆ ಇಡ್ಲಿ ಮತ್ತು ನಾಟಿ ಕೋಳಿ ಸಾಂಬಾರ್ ಬಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಹೈಕಮಾಂಡ್ ಆದೇಶದಂತೆ ಕಳೆದ ಶನಿವಾರ ಸಿದ್ದರಾಮಯ್ಯ ಅವರು ಶಿವಕುಮಾರ್ ಅವರನ್ನು ಉಪಹಾರಕ್ಕೆ ಆಹ್ವಾನಿಸಿ ಮಾತುಕತೆ ನಡೆಸಿದ್ದರು. ಅಂದಿನಿಂದಲೇ ವಾತಾವರಣ ತಿಳಿಯಾಗಿತ್ತು. ಅಂದೂ ಸಹ ಇಬ್ಬರೂ ನಾಯಕರು ಹೈಕಮಾಂಡ್ ಹೇಳಿದಂತೆ ಮುಂದುವರಿಯುತ್ತೇವೆ ಎಂದು ಘೋಷಿಸಿದ್ದರು. ಈಗಲೂ ಅದೇ ಅಭಿಪ್ರಾಯಕ್ಕೆ ಬದ್ಧರಿರುವುದಾಗಿ ಇಬ್ಬರೂ ನಾಯಕರು ಪುನರುಚ್ಛರಿಸಿದ್ದಾರೆ.

