ಬೆಂಗಳೂರು: ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಅಸ್ವಾಭಾವಿಕ ಸಾವುಗಳನ್ನು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಭಾರಿ ಅನುಮಾನಾಸ್ಪದ ಪ್ರಕರಣವೊಂದನ್ನು ಗುರುತಿಸಿದೆ. ದಶಕದ ಹಿಂದೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಯುಡಿಆರ್ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ವಿಷವನ್ನು ಸೇವಿಸಿ ಮೃತಪಟ್ಟಿದ್ದಾಳೆ ಎಂದು ಪ್ರಕರಣ ದಾಖಲಾಗಿದೆ. ಎಸ್ ಐಟಿಯು ಅನುಮಾನಾಸ್ಪದ ಎಂದು ಕಂಡುಬಂದ ಪ್ರತಿಯೊಂದು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ ಮತ್ತು ದಾಖಲೆಗಳನ್ನು ಸಂಗ್ರಹಿಸುತ್ತಿದೆ. ಈ ಪ್ರಕರಣದಲ್ಲಿ ಮೃತಪಟ್ಟ ಬಾಲಕಿಯ ಮರಣೋತ್ತರ ಪರೀಕ್ಷಾ ವರದಿಯನ್ನು ಆಮೂಲಾಗ್ರವಾಗಿ ಅವಲೋಕಿಸುತ್ತಿದೆ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ವಿಷ ಸೇವಿಸಿರುವ ಯಾವುದೇ ಅಂಶ ಪತ್ತೆಯಾಗಿರುವುದಿಲ್ಲ ಎಂದು ಗೃಹ ಇಲಾಖೆಯ ಉನ್ನತ ಮೂಲಗಳನ್ನು ಆಧರಿಸಿ ಬಿಎಲ್ ಆರ್ ಪೋಸ್ಟ್ ವರದಿ ಮಾಡಿದೆ.
ಇದೀಗ ಈ ಪ್ರಕರಣ ಕುರಿತು ಎಸ್ ಐಟಿಯು ಸಾವಿಗೆ ನಿಖರ ಕಾರಣವನ್ನು ತಿಳಿದುಕೊಳ್ಳಲು ಹಾಗೂ ಯಾರಾದರೂ ಕೊಲೆ ಮಾಡಿರಬಹುದೇ ಎಂಬುದನ್ನು ಪತ್ತೆ ಹಚ್ಚಲು ವಿಸ್ತೃತ ತನಿಖೆ ಆರಂಭಿಸಿದೆ. ಅಸ್ವಾಭಾವಿಕ ಸಾವು ಕೇವಲ ಇದೊಂದು ಮಾತ್ರ ಅಲ್ಲ, ಕನಿಷ್ಠ ಇಂತಹ ಐದು ಅಸ್ವಾಭಾವಿಕ ಪ್ರಕರಣಗಳನ್ನು ಗುರುತಿಸಿದೆ ಎಂದು ತಿಳಿದು ಬಂದಿದೆ. ತನಿಖೆ ಮುಂದುವರೆದಂತೆ ಈ ಸಂಖ್ಯೆ ಹೆಚ್ಚುತ್ತಲೂ ಹೋಗಬಹುದು.
ತನಿಖೆಯ ಭಾಗವಾಗಿ ಎಸ್ ಐಟಿಯು ಶವಗಳನ್ನು ಹೂತು ಹಾಕಿರುವುದಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪಂಚಾಯತ್ ನಿಂದ ದಾಖಲೆಗಳನ್ನು ಪಡೆದುಕೊಂಡಿದೆ. ಆದರೆ 38 ಶವಗಳನ್ನು ಹೂತು ಹಾಕಿರುವದಕ್ಕೆ ಪಂಚಾಯತ್ ನಲ್ಲಿ ಯಾವುದೇ ದಾಖಲೆಗಳಿರುವುದಿಲ್ಲ. ಕಾನೂನು ನಿಯಮಗಳನ್ನು ಪಾಲಿಸದೆ ಅಕ್ರಮವಾಗಿ ಈ ಶವಗಳನ್ನು ಹೂತು ಹಾಕಿರುವುದಕ್ಕೆ ಎಸ್ ಐಟಿ ಇದೀಗ ಕಾರಣಗಳನ್ನು ಪತ್ತೆಹಚ್ಚಲು ಮುಂದಾಗಿದೆ. ಎಸ್ ಐಟಿಯು ಈಗಾಗಲೇ ಪಂಚಾಯತ್ ಅಧಿಕಾರಿಗಳನ್ನು ಪ್ರಶ್ನಿಸಿದ್ದು ಅಗತ್ಯ ಕಂಡುಬಂದರೆ ಮತ್ತೊಮ್ಮೆ ವಿಚಾರಣೆ ನಡೆಸಲೂ ನಿರ್ಧರಿಸಿದೆ.
ನವಂಬರ್ 20ರಂದು ವಿಶೇಷ ತನಿಖಾ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದೆ. ಬಿಎನ್ ಎಸ್ ಎಸ್- 215ರ ಅಡಿಯಲ್ಲಿ ಸುಳ್ಳು ಸಾಕ್ಷ್ಯ ಕುರಿತ ಪ್ರಕರಣದ ತನಿಖಾ ವರದಿ ಇದಾಗಿದೆ.
2025ರ ಜುಲೈ 3 ರಂದು ಧರ್ಮಸ್ಥಳದ ಮಾಜಿ ಸ್ವಚ್ಚತಾ ಕಾರ್ಮಿಕ ಚಿನ್ನಯ್ಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾನೆ. ತಾನು ಕೆಲಸ ಮಾಡುತ್ತಿದ್ದ 1995 ರಿಂದ 2014ರವರೆಗೆ ಲೈಂಗಿಕ ಕೃತ್ಯಗಳನ್ನು ಎಸಗಿ ನಂತರ ತನ್ನಿಂದ ನೂರಾರು ಶವಗಳನ್ನು ಹೂತು ಹಾಕಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಕನಿಷ್ಠ 13 ಸ್ಥಳಗಳನ್ನು ಗುರುತಿಸುವುದಾಗಿ ಹೇಳಿರುತ್ತಾನೆ.
2025ರ ಜುಲೈ 11 ರಂದು ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ಎದುರು ಬಿಎನ್ ಎಸ್ ಎಸ್ ಸೆ. 183 ಅಡಿಯಲ್ಲಿ ಸಾಕ್ಷಿ ದೂರುದಾರ ಚಿನ್ನಯ್ಯ ಸ್ವಯಂ ಹೇಳಿಕೆಯನ್ನು ದಾಖಲಿಸಿರುತ್ತಾನೆ. ಈ ಸಂದರ್ಭದಲ್ಲಿ ಆತ ತಲೆಬುರುಡೆ ಮತ್ತು ಕೆಲವು ಮೂಳೆಗಳನ್ನು ಹಾಜರುಪಡಿಸಿರುತ್ತಾನೆ. ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು ಜುಲೈ 19 ರಂದು ರಚಿಸಿ ಆದೇಶಿಸಿತ್ತು. ಧರ್ಮಸ್ಥಳ ಪೊಲೀಸರು (39/2025) ಅಡಿಯಲ್ಲಿ ಎಫ್ ಐಆರ್ ದಾಖಲಿಸುತ್ತಾರೆ.
ಈತ ಹಾಜರುಪಡಿಸಿದ ತಲೆ ಬುರುಡೆ ಮನುಷ್ಯರದ್ದು ಅಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯಲ್ಲಿ ಸಾಬೀತಾಗುತ್ತದೆ. ಚಿನ್ನಯ್ಯನನ್ನು ಅಗಸ್ಟ್ 23 ರಂದು ಬಂಧಿಸಲಾಗುತ್ತದೆ. ಬಂಧನದ ನಂತರ ಚಿನ್ನಯ್ಯ ಮತ್ತೊಂದು ಹೇಳಿಕೆ ದಾಖಲಿಸಲು ನಿರ್ಧರಿಸುತ್ತಾನೆ. ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ ಮತ್ತು ವಿಠಲ್ ಗೌಡ ಅವರ ಚಿತಾವಣೆಗೆ ಒಳಗಾಗಿ ತಲೆಬುರುಡೆಯನ್ನು ಹಾಜರುಪಡಿಸಿದ್ದಾಗಿ ಹೇಳಿಕೆ ನೀಡುತ್ತಾನೆ.

