ಬೆಂಗಳೂರು: ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮೃತಿ ಜಾರಿಯಲ್ಲಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ “ಸಂವಿಧಾನ ದಿನಾಚರಣೆ – 2025″ ಅನ್ನು ಉದ್ಘಾಟಿಸಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬರಿಗೆ ನಮಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮೃತಿ ಜಾರಿಯಲ್ಲಿತ್ತು. ಮನುಸ್ಮೃತಿಯಲ್ಲಿದ್ದ ಮನುಷ್ಯ ವಿರೋಧಿ, ಸಮಾನತೆ ವಿರೋಧಿ ನಿಯಮಗಳಿಗೆ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಅವಕಾಶ ಇಲ್ಲದಂತಾಯಿತು. ಅದಕ್ಕೇ ಮನುವಾದಿಗಳು ನಮ್ಮ ಸಂವಿಧಾನವನ್ನು ವಿರೋಧಿಸುತ್ತಾರೆ. ಸಮ ಸಮಾಜ ನಿರ್ಮಾಣ, ಅಸಮಾನತೆ ನಿವಾರಣೆ ನಮ್ಮ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದರು.
We the people of INDIA ಎನ್ನುವುದೇ ನಮ್ಮ ಸಂವಿಧಾನದ ಮೂಲ ಮಂತ್ರ. ಈ ದೇಶದ ಜನತೆಗೆ ಎಂಥಾ ಸಂವಿಧಾನ ಬೇಕು ಎನ್ನುವ ಬಗ್ಗೆ ಒಂದು ವರ್ಷ ಕಾಲ ಸಂವಿಧಾನ ಸಭೆಯಲ್ಲಿ ಸಮಗ್ರ ಚರ್ಚೆ ಬಳಿಕ ಅಂಗೀಕರಿಸಲಾಗಿದೆ. ಫೆಡರಲ್, ಯೂನಿಟರಿ, ರಿಟರ್ನ್, ಅನ್ ರಿಟರ್ನ್ ಸಂವಿಧಾನಗಳು ವಿಶ್ವದಲ್ಲಿವೆ. ನಮ್ಮದು ರಿಟರ್ನ್ (ಲಿಖಿತ) ಸಂವಿಧಾನ. ನಮ್ಮ ದೇಶದಲ್ಲಿರುವಷ್ಟು ಜಾತಿ, ಧರ್ಮಗಳು ಬೇರೆ ಯಾವ ದೇಶದಲ್ಲೂ ಇಲ್ಲ. ಹೀಗಾಗಿ ಈ ನೆಲಕ್ಕೆ ಒಪ್ಪಿಗೆಯಾಗುವ ಸಂವಿಧಾನವನ್ನು ಅಂಬೇಡ್ಕರ್ ಕೊಟ್ಟರು ಎಂದು ವಿವರಣೆ ನೀಡಿದರು.
ಮನುವಾದಿಗಳು ಸಂವಿಧಾನ ಅಂಬೇಡ್ಕರ್ ಅವರಿಂದ ಆಗಿಲ್ಲ ಎಂದು ವಾದಿಸುತ್ತಾರೆ. ಆದರೆ ಅಂಬೇಡ್ಕರ್ ಅವರೇ ಸಂವಿಧಾನ ಶಿಲ್ಪಿ ಎನ್ನುವುದನ್ನು ಮರೆಯಬಾರದು. ಅಂಬೇಡ್ಕರ್ ಅವರಿಗೆ ಈ ದೇಶದ ಜಾತಿ ವ್ಯವಸ್ಥೆ ಮತ್ತು ಅಪಾಯಗಳು ಅಂಬೇಡ್ಕರ್ ಅವರಿಗೆ ಅರ್ಥ ಆಗಿತ್ತು. ಅದಕ್ಕೇ ನಮ್ಮ ಸಂವಿಧಾನದಲ್ಲಿ ಮೀಸಲಾತಿಯನ್ನು ಸೇರಿಸಿದರು. ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಆಶಯ. ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ ಸಂವಿಧಾನದ ಆಶಯ ಈಡೇರಿಲ್ಲ. ಬಸವಣ್ಣ ಆದಿಯಾಗಿ ಎಲ್ಲಾ ಮಹಾತ್ಮರೂ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರೂ ಪಟ್ಟ ಭದ್ರರು ಜಾತಿ ನಾಶವಾಗಲು ಬಿಡುತ್ತಿಲ್ಲ ಎಂದು ದೂರಿದರು.
ಕೆಳ ಜಾತಿಯ ಶೂದ್ರ ವರ್ಗದವರಿಗೆ ಆರ್ಥಿಕ ಶಕ್ತಿ ಬಂದಾಗ ಮಾತ್ರ ಜಾತಿ ದುರ್ಬಲವಾಗುತ್ತದೆ. ಸಂವಿಧಾನ ಸಭೆಯಲ್ಲಿ ಅಂಬೇಡ್ಕರ್ ಮಾಡಿದ ಕೊನೆಯ ಭಾಷಣವನ್ನು, ಈ ಭಾಷಣದ ಎಚ್ಚರಿಕೆಯ ಮಾತುಗಳನ್ನು ಪ್ರತಿಯೊಬ್ಬರೂ ಮನವರಿಕೆ ಮಾಡಿಕೊಳ್ಳಬೇಕು. ಅಸಮಾನತೆ ಇರುವ ದೇಶದಲ್ಲಿ ಸಮಾನತೆ ಸುಲಭವಾಗಿ ಬರುವುದಿಲ್ಲ. ದಲಿತ, ಶೂದ್ರ, ಹಿಂದುಳಿದ, ಮುಸಲ್ಮಾನ ಮತ್ತು ಅಲ್ಪಸಂಖ್ಯಾತರನ್ನು ದ್ವೇಷಿಸಿ ಎಂದು ನಮ್ಮ ಧರ್ಮ ಹೇಳುವುದಿಲ್ಲ. ಯಾವ ಧರ್ಮವೂ ಹೇಳುವುದಿಲ್ಲ ಎಂದು ತಿಳಿಸಿದರು.
ಸಂವಿಧಾನದ ಸಮಾನತೆಯ ಆಶಯವನ್ನು ಈಡೇರಿಸುವ ಸಲುವಾಗಿಯೇ ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಹಲವು ಭಾಗ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದೆ. ತುತ್ತು ಅನ್ನಕ್ಕಾಗಿ ಯಾರೂ ಯಾರ ಮನೆ ಮುಂದೆಯೂ ನಿಲ್ಲಬಾರದು ಎನ್ನುವ ಆಶಯದಿಂದ ಅನ್ನಭಾಗ್ಯ ತಂದೆ, ಯಾರ ಮನೆ ಮಕ್ಕಳೂ ಬರಿಗಾಲಲ್ಲಿ ಶಾಲೆಗೆ ಹೋಗಬಾರದು ಎನ್ನುವ ಕಾರಣದಿಂದ ಶೂ ಭಾಗ್ಯ ತಂದೆ. ಎಲ್ಲಾ ಭಾಗ್ಯಗಳ ಹಿಂದೆ ಹಾಗೂ ಈಗ ಜಾರಿ ಮಾಡಿರುವ ಐದೂ ಗ್ಯಾರಂಟಿಗಳ ಹಿಂದೆ ಅಸಮಾನತೆ ನಿವಾರಿಸುವ ಮತ್ತು ಸರ್ವರಿಗೂ ಆರ್ಥಿಕ ಶಕ್ತಿ ಬರಲಿ ಎನ್ನುವ ಆಶಯ ಇದೆ ಎಂದರು.
ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೆ.ಹೆಚ್.ಮುನಿಯಪ್ಪ, ಎಂ.ಸಿ.ಸುಧಾಕರ್, ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

