ಮುಂಬೈ: ಖ್ಯಾತ ಬಾಲಿವುಡ್ ನಟ ಧರ್ಮೇಂದ್ರ ಇಂದು ನಿಧನರಾಗಿದ್ದಾರೆ. ಅವರಿಗೆ 89 ವರ್ಷವಾಗಿತ್ತು. ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದ ಅವರು ಶೋಲೆ, ಚುಪ್ಕೆ–ಚುಪ್ಕೆ, ಬಾಂಧಿನಿ, ಸತ್ಯಕಾಮ್ ಸೇರಿದಂತೆ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು.
ಧರ್ಮೇಂದ್ರ ಅವರ ಪತ್ನಿ ನಟಿ ಹೇಮಾ ಮಾಲಿನಿ, ಪುತ್ರರು ಮತ್ತು ನಟರೂ ಆದ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಪುತ್ರಿಯರಾದ ವಿಜೇತಾ, ಅಜೀತಾ, ಇಶಾ ಮತ್ತು ಅಹಾನಾ ಅವರನ್ನು ಅಗಲಿದ್ದಾರೆ.
ಬಾಲಿವುಡ್ ನ ‘ಹೀಮ್ಯಾನ್’ ಎಂದೇ ಹೆಸರುವಾಸಿಯಾಗಿದ್ದ ಧರ್ಮೇಂದ್ರ ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಬಾಲಿವುಡ್ ನಲ್ಲಿ ನಟಿಸುತ್ತಾ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಮಿತಾಬ್ ಬಚ್ಚನ್ ಜತೆ ನಟಿಸದ ಶೋಲೆ ಸಿನಿಮಾವನ್ನು ಇಡೀ ಭಾರತೀಯ ಚಿತ್ರರಂಗ ಮರೆಯುವಂತಿಲ್ಲ. ಚುಪ್ಕೆ ಚುಪ್ಕೆ, ಮೇರಾ ಗಾಂವ್ ಮೇರಾ ದೇಶ್, ಧರಮ್ ವೀರ್, ಜುಗ್ನು, ಬಾಂದಿನಿ, ಡ್ರೀಮ್ ಗರ್ಲ್, ಚರಸ್, ಸೀತಾ ಔರ್ ಗೀತಾ ಮತ್ತು ಪ್ರತಿಗ್ಯಾ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳು ಇಂದಿಗೂ ನೆನಪು ಮೂಡಿಸುತ್ತವೆ.
ಈ ತಿಂಗಳ ಆರಂಭದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮನೆಯಿಂದಲೇ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅನೇಕ ಸಿನಿಮಾ ಪ್ರಶಸ್ತಿಗಲೂ ಅವರನ್ನು ಅರಸಿ ಬಂದಿದ್ದವು.
ರಾಜಕಾರಣದಲ್ಲೂ ತಮ್ಮ ಛಾಪು ಮೂಡಿಸಿದ್ದ ಅವರು 2004ರಲ್ಲಿ ರಾಜಸ್ಥಾನದ ಬಿಕಾನೇರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು.
ಧರ್ಮೇಂದ್ರ ಕೃಷ್ಣ ಡಿಯೋಲ್ ಅವರು ಡಿಸೆಂಬರ್ 8, 1935ರಂದು ಪಂಜಾಬ್‌ನ ಲುಧಿಯಾನ ಜಿಲ್ಲೆಯ ನಸ್ರಾಲಿಯಲ್ಲಿ ಪಂಜಾಬಿ ಜಾಟ್ ಕುಟುಂಬದಲ್ಲಿ ಜನಿಸಿದರು. ಅವರು ಸಹ್ನೇವಾಲ್‌ಗೆ ತೆರಳಿ ಲುಧಿಯಾನದ ಲಾಲ್‌ಟನ್ ಕಲಾನ್‌ನಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು.
ಹಿಂದಿ ಸಿನಿಮಾದಲ್ಲಿ ಅವರು ನಿರ್ವಹಿಸಿದ ಅದ್ಭುತ ಮೈಕಟ್ಟು ಮತ್ತು ಸಾಹಸ ಪಾತ್ರಗಳಿಗಾಗಿ ಅವರು ಹೀ-ಮ್ಯಾನ್ ಎಂಬ ಅಡ್ಡ ಹೆಸರನ್ನು ಪಡೆದರು. ಅವರ ಕೊಡುಗೆಯನ್ನು ಗುರುತಿಸಿ 1997ರಲ್ಲಿ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು 2012ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಶ್ರೀರಾಮ್ ರಾಘವನ್ ಅವರ ‘ಇಕ್ಕಿಸ್’ ಧರ್ಮೇಂದ್ರ ಅವರ ಕೊನೆಯ ಚಿತ್ರ. ಈ ಚಿತ್ರ ಇನ್ನೂ ತೆರೆಕಂಡಿಲ್ಲ.
ಇವರ ನಿಧನಕ್ಕೆ ಚಿತ್ರರಂಗದ ಅನೇಕ ಕಣ್ಯರು ಕಂಬನಿ ಮಿಡಿದಿದ್ದಾರೆ.

