ನವದೆಹಲಿ: ಕಳೆದ ವಾರ ದೆಹಲಿಯ ರೆಡ್ ಫೋರ್ಟ್ ಸಮೀಪ ಸಂಭವಿಸಿದ ಕಾರು ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ಅಮೀರ್ ರಶೀದ್ ಅಲಿ ಎಂಬಾತನನ್ನು 10 ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಧೆ (ಎನ್‌ಐಎ) ವಶಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯ ಆದೇಶ ನೀಡಿದೆ.
ಈತನನ್ನು ಬಿಗಿ ಭದ್ರತೆ ನಡುವೆ ಪಟಿಯಾಲ ಹೌಸ್ ಕೋರ್ಟ್ನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯದ ಆವರಣದಲ್ಲಿ ದೆಹಲಿ ಪೊಲೀಸ್ ಹಾಗೂ ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನ್ಯಾಯಾಲಯದೊಳಗೆ ಯಾರೊಬ್ಬರಿಗೂ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ.
ನವೆಂಬರ್ 10ರಂದು ಸಂಜೆ ಕೆಂಪುಕೋಟೆ ಹತ್ತಿರ ಸಮೀಪ ಸಂಭವಿಸಿದ್ದ ಕಾರು ಸ್ಫೋಟದಲ್ಲಿ 13 ಮಂದಿ ಮೃತಪಟ್ಟು ಇಪ್ಪತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಸಂಚು ರೂಪಿಸಿದ್ದ ಅಮೀರ್ ರಶೀದ್ ಅಲಿ ಯನ್ನು ಎನ್‌ಐಎ ಭಾನುವಾರ ಬಂಧಿಸಲಾಗಿತ್ತು.
ಸ್ಫೋಟಕಗಳನ್ನು ತುಂಬಿದ್ದ ಹ್ಯುಂಡೈ ಐ20 ಕಾರನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ವೈದ್ಯ ಉಮರ್ ನಬಿ ಡ್ರೈವ್ ಮಾಡಿದ್ದ. ಈ ಕಾರು ಜಮ್ಮು–ಕಾಶ್ಮೀರದ ಪಾಂಪೋರ್‌ನ ಸಂಬೂರಾ ನಿವಾಸಿ ಅಮೀರ್ ಹೆಸರಿನಲ್ಲಿ ನೋಂದಣಿಯಾಗಿತ್ತು.
ಕಾರು ಬಾಂಬ್ ಸ್ಫೋಟಿಸಲು ಅಮೀರ್, ಆತ್ಮಾಹುತಿ ಬಾಂಬರ್ ಡಾ. ಉಮರ್ ನಬಿ ಜತೆ ಸೇರಿ ಸಂಚು ರೂಪಿಸಿದ್ದ. ಕಾರಿನಲ್ಲಿ ಕಚ್ಚಾ ಬಾಂಬ್ ಬಳಸಿ ಸ್ಫೋಟಿಸುವ ಉದ್ದೇಶದಿಂದ ಕಾರು ಖರೀದಿಸಲು ಈತ ಸಹಾಯ ಮಾಡಿದ್ದ ಆರೋಪ ಎದುರಿಸುತ್ತಿದ್ದಾನೆ. ಇವರಿಬ್ಬರೂ ಹಲವು ತಿಂಗಳಿನಿಂದ ಸತತ ಸಂಪರ್ಕದಲ್ಲಿದ್ದು, ಕೆಂಪುಕೋಟೆ ಬಳಿ ಸ್ಪೋಟ ನಡೆಸಲು ಸ್ಫೋಟಕಗಳನ್ನು ಸಿದ್ಧಪಡಿಸಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ.

