ಇನ್ನು ಮುಂದೆ ರಸ್ತೆಯ ಮೇಲೆ ನಮಾಜ್‌ ಮಾಡಲು ಅನುಮತಿ ಕಡ್ಡಾಯ: ಸಚಿವ ಪ್ರಿಯಾಂಕ್ ಖರ್ಗೆ

Most read

ಬೆಂಗಳೂರು:ಇನ್ನು ಮುಂದೆ ರಸ್ತೆಗಳ ಮೇಲೆ ಪ್ರಾರ್ಥನೆ ಮಾಡಲು ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರಸ್ತೆಗಳ ಮೇಲೆ ಅನುಮತಿ ಇಲ್ಲದೇ ನಮಾಜ್ ಮಾಡಲು ಮಾಡಲು ಮುಸ್ಲಿಮರಿಗೆ ಅವಕಾಶ ‌ನೀಡಬಾರದು ಎಂದು ಬಸನಗೌಡ ಪಾಟೀಲ​ ಯತ್ನಾಳ ಅವರು​ ಪತ್ರ ಕುರಿತು ಪ್ರತಿಕ್ರಿಯಿಸಿದ ಅವರು ಈ ರೀತಿ ಉತ್ತರಿಸಿದರು.

ನಮಾಜ್‌ ಸಂಬಂಧ ಯತ್ನಾಳ್ ಇಂಗ್ಲಿಷ್​ನಲ್ಲಿ ಪತ್ರ ಬರೆದಿದ್ದಾರೆ. ಬಹುಶಃ ಅವರು ಕೇಂದ್ರ ಸಚಿವ ಅಮಿತ್ ಶಾಗೆ ಸಂದೇಶ ಕೊಡಲು ಇಂಗ್ಲಿಷ್​ ನಲ್ಲಿ ಪತ್ರ ಬರೆದಿರಬಹುದು. ಬೇರೆಯವರಿಗೂ  ನಾನು ಪತ್ರ ಬರೆದಿರುವುದು ತಿಳಿಯಲಿ ಎಂಬ ಉದ್ದೇಶ ಇದ್ದರೂ ಇರಬಹುದು ಎಂದರು.

ಕೇಂದ್ರ ಸರ್ಕಾರಿ ನೌಕರರು‌ ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎಂದು ಕಾನೂನು ತಿದ್ದುಪಡಿ ತಂದಿದೆ. ರಾಜ್ಯ ಸರ್ಕಾರಿ ನೌಕರರು‌ ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಇಲ್ಲ ಎಂದು ರಾಜ್ಯ ಸರ್ಕಾರ ನಿಯಮ ರೂಪಸಿದೆ. ನಮ್ಮದು ಪ್ರಜಾತಂತ್ರವ್ಯವಸ್ಥೆ. ಕೇಂದ್ರ ಸರ್ಕಾರದ ಎಲ್ಲ ನಿಯಮಗಳನ್ನು ಅನುಸರಿಸಲೇಬೇಕು ಎಂದೇನೂ ಇಲ್ಲ ಎಂದರು.

ಹಸ್ತಕ್ಷೇಪ ಮಾಡುವುದಿಲ್ಲ: ‘ಪಥ ಸಂಚಲನ ನಡೆಸಲು ಹೈಕೋರ್ಟ್ ಆದೇಶದಂತೆ ಆರ್‌ಎಸ್‌ಎಸ್‌ ಹೊಸದಾಗಿ ಅರ್ಜಿ ಸಲ್ಲಿಸಲಿ. ಅನುಮತಿ ನೀಡುವ ಕುರಿತು ಜಿಲ್ಲಾಡಳಿತ ತೀರ್ಮಾನ ಮಾಡಲಿದೆ. ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ’ ಎಂದೂ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು ಕಾಣಿಕೆ ನೀಡಬೇಕು ಎಂದು ಕಣ್ಣೀರು ಹಾಕುತ್ತಾ ಹೇಳಿದ್ದನ್ನು ಮರೆಯಲು ಸಾಧ್ಯವೇ?  ಹೈಕಮಾಂಡ್‌ಗೆ ಕಪ್ಪ ನೀಡಲಿಲ್ಲ ಎಂದು ಮೂವರು ಮುಖ್ಯಮಂತ್ರಿಗಳನ್ನು ಮಾಡಿದ್ದು ನೆನಪಿಸಿಕೊಳ್ಳಿ ಬಿಜೆಪಿ ಮುಖಂಡರಿಗೆ ಎಂದು ತಿರುಗೇಟು ನೀಡಿದರು.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ಆರ್‌ಎಸ್‌ಎಸ್‌ ಕುರಿತು ಏನೆಲ್ಲಾ ಮಾತನಾಡಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಲಿ. ಅಧಿಕಾರಕ್ಕಾಗಿ ಈಗ ಸಿದ್ಧಾಂತ ಬದಲಿಸಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಹೊರಡಿಸಿದ್ದ‌ ಸುತ್ತೋಲೆಯಲ್ಲಿ ಆರ್‌ಎಸ್‌ಎಸ್ ಹೆಸರು ಪ್ರಸ್ತಾಪಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಾಲಿಶ ಹೇಳಿಕೆ ನೀಡಿದ್ದಾರೆ. ಈಗ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಆರ್‌ಎಸ್‌ಎಸ್‌ಗೆ ನಿರ್ಬಂಧ ಎಂದು ಎಲ್ಲಿಯೂ ಪ್ರಸ್ತಾಪಿಸಿಲ್ಲ.  ಅವರು ಹೊರಡಿಸಿದ್ದ ಆದೇಶವನ್ನೇ ನಾವು ಜಾರಿಗೆ ತಂದಿದ್ಧೇವೆ ಎಂದು ತಿರುಗೇಟು ನೀಡಿದರು.

More articles

Latest article