ಬೆಂಗಳೂರು: ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಅಕ್ಟೋಬರ್ 20ರಿಂದಲೇ ಕಬ್ಬು ಕ್ರಷಿಂಗ್ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಈ ಆದೇಶ ಮಾಡಲಾಗಿದೆ. ಈ ಮೊದಲು ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಜೂನ್ 22ರಿಂದ ಹಾಗೂ ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಗದಗ, ಯಾದಗಿರಿ, ದಾವಣಗೆರೆ, ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ ಮತ್ತು ಹಾವೇರಿ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳು ನವೆಂಬರ್ 1ರಿಂದ ಕಬ್ಬು ನುರಿಸುವಿಕೆ ಆರಂಭಿಸಬೇಕು ಎಂದು ನಿರ್ಧರಿಸಲಾಗಿತ್ತು.
ಕಬ್ಬು ಕಟಾವಿಗೆ ಬಂದಿದ್ದು, ನವಂಬರ್ 1ರವರೆಗೆ ಕ್ರಷಿಂಗ್ ಆರಂಭಿಸದಿದ್ದರೆ ಸಕ್ಕರೆ ಇಳುವರಿ ಕಡಿಮೆಯಾಗಲಿದೆ. ರೈತರಿಗೂ ಸಮಸ್ಯೆಯಾಗಲಿದೆ, ಬೇಗ ಆರಂಭಿಸಲು ಅನುಮತಿ ನೀಡಬೇಕು ಎಂದು ಉತ್ತರ ಕರ್ನಾಟಕದ ಹಲವು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಹಾಗೂ ರೈತ ಮುಖಂಡರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅಕ್ಟೋಬರ್ 20ರಿಂದಲೇ ಕ್ರಷಿಂಗ್ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಳೆಯ ಮೈಸೂರು ಹಾಗೂ ಇತರ ಜಿಲ್ಲೆಗಳಿಗೆ ಪ್ರತ್ಯೇಕ ಕಬ್ಬು ನುರಿಸುವಿಕೆ ದಿನಾಂಕ ನಿಗದಿಪಡಿಸಲು ಆರಂಭಿಸಲಾಗಿದೆ. ಇದರಿಂದ ಕಾರ್ಖಾನೆಗಳ ನಡುವೆ ಅನಾರೋಗ್ಯಕರ ಪೈಪೋಟಿಯನ್ನು ನಿವಾರಣೆ ಮಾಡಲು ಸಾಧ್ಯವಾಗಿದೆ. ಹಾಗೂ ಸಕ್ಕರೆ ಇಳುವರಿ ಪ್ರಮಾಣದಲ್ಲೂ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.