ಬೆಂಗಳೂರು: ಟ್ರಾಫಿಕ್ ಸಮಸ್ಯೆ, ಕಸ ವಿಲೇವಾರಿ ಮೊದಲಾದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕೆಲವು ಕಂಪನಿಗಳು ಕರ್ನಾಟಕದಿಂದ ವಲಸೆ ಹೋಗುವ ಮಾತುಗಳನ್ನಾಡುತ್ತಿದ್ದವು. ಈ ಅನಿಸಿಕೆಗಳ ಆಧಾರದಲ್ಲಿ ತಮ್ಮ ರಾಜ್ಯಕ್ಕೆ ಆಹ್ವಾನ ನೀಡುತ್ತಿದ್ದ ಆಂಧ್ರಪ್ರದೇಶ ಸರ್ಕಾರಕ್ಕೆ ಕರ್ನಾಟಕ ಅಂಕಿಅಂಶಗಳ ಸಹಿತ ತಿರುಗೇಟು ನೀಡಿದೆ.
‘ಬ್ಲಾಕ್ ಬಕ್’ ಎಂಬ ಕಂಪನಿಯು ಕರ್ನಾಟಕದ ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ಬೆಂಗಳೂರಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರಗೊಳ್ಳುವುದಾಗಿ ಹೇಳಿತ್ತು. ಈ ಹೇಳಿಕೆಯಿಂದ ರಾಜ್ಯ ಸರ್ಕಾರ ಮುಜುಗರಕ್ಕೀಡಾಗಿತ್ತು. ನೆರೆಯ ಆಂಧ್ರಪ್ರದೇಶದ ಸಚಿವ ನಾ.ರಾ.ಲೋಕೇಶ್ ಅವರು ‘ಬ್ಲಾಕ್ ಬಕ್’ ಕಂಪನಿಯನ್ನು ಆಹ್ವಾನಿಸಿದ್ದರು.
ಕರ್ನಾಟಕ ಸರ್ಕಾರ ಇದೀಗ ಅಂಕಿಸಂಖ್ಯೆ ಸಹಿತ ರಾಜ್ಯದಲ್ಲಿ ನೆಲೆಯೂರಿರುವ ವಿವಿಧ ರಾಜ್ಯಗಳ ಕಾರ್ಮಿಕರ ಅಂಕಿಅಂಶಗಳ ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದೆ.
ಬೇರೆ ಬೇರೆ ರಾಜ್ಯಗಳಿಂದ 78,289 ವಲಸೆ ಕಾರ್ಮಿಕರು ಕರ್ನಾಟಕಕ್ಕೆ ಬಂದು ಇಲ್ಲಿ ಜೀವನ ನಡೆಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ 18,865 ವಲಸೆ ಕಾರ್ಮಿಕರು ತಮ್ಮ ಹೆಸರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದಾರೆ. ಹೀಗೆ ಅಂದಾಜು 97,154 ಕಾರ್ಮಿಕರು ರಾಜ್ಯದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ತಿಳಿಸಿದೆ.
ಹೀಗೆ ಉದ್ಯೋಗ ಹುಡುಕಿಕೊಂಡು ಕರ್ನಾಟಕಕ್ಕೆ ಬಂದಿರುವವರಲ್ಲಿ ಶೇ 16.3ರಷ್ಟು ಮಂದಿ ಅಂಧ್ರಪ್ರದೇಶದಿಂದ ಬಂದಿದ್ದಾರೆ. ಮಹಾರಾಷ್ಟ್ರದಿಂದ ಶೇ 12.4, ಬಿಹಾರದಿಂದ ಶೇ 11.8, ರಾಜಸ್ಥಾನದಿಂದ ಶೇ 9.2, ಒಡಿಶಾದಿಂದ ಶೇ 8, ತಮಿಳುನಾಡಿನಿಂದ ಶೇ 6.6, ಉತ್ತರ ಪ್ರದೇಶದಿಂದ ಶೇ 6.4, ಅಸ್ಸಾಂನಿಂದ ಶೇ 5, ಪಶ್ಚಿಮ ಬಂಗಾಳದಿಂದ ಶೇ 4.5, ಗುಜರಾತ್ ನಿಂದ ಶೇ 2.2 ಹಾಗೂ ಕೇರಳದಿಂದ ಶೇ 2.1 ಎಂದು ವಿವಿರ ನೀಡಿದೆ.