ಪಟ್ನಾ: ನಾನು ನಿಜವಾದ ಬಿಹಾರಿ. ಯಾವತ್ತಿಗೂ ಹೊರಗಿನವರಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಅಮಿತ್ ಶಾ ವಿರುದ್ಧ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಗುಡುಗಿದ್ದಾರೆ.
ಐಆರ್‌ಸಿಟಿಸಿಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್, ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹಾಗೂ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ವಿರುದ್ಧ ಪಟ್ನಾದ ನ್ಯಾಯಾಲಯವೊಂದು ದೋಷಾರೋಪ ನಿಗದಿ ಮಾಡಿದ ನಂತರ ಅವರು ಆಕ್ರೋಶ ಹೊರಹಾಕಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಇದರ ನಡುವೆಯೇ ಈ ಬೆಳವಣಿಗೆ ನಡೆದಿದೆ. ಕೆಲವು ದಿನಗಳ ಹಿಂದೆ ಬಿಹಾರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ನಮ್ಮನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಈಗ ಅದು ನಿಜವಾಗುತ್ತಿದೆ. ಆದರೆ ನಾವು ನಿಜವಾದ ಬಿಹಾರಿಗಳು. ಹೊರಗಿನವರ ಬೆದರಿಕೆಗಳಿಗೆ ಬಗ್ಗವುದಿಲ್ಲ. ನಾನು ಜೀವಂತವಾಗಿರುವವರೆಗೂ ಬಿಜೆಪಿ ವಿರುದ್ಧ ಹೋರಾಡುತ್ತಲೇ ಇರುತ್ತೇನೆ ಎಂದಿದ್ದಾರೆ.
ಐಆರ್‌ಸಿಟಿಸಿಯ ಎರಡು ಹೋಟೆಲ್‌ಗಳ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ವಹಿಸುವ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಇದಾಗಿದೆ.
ಆರ್‌ಜೆಡಿ ರಾಜ್ಯಸಭಾ ಸಂಸದ ಮನೋಜ್ ಕುಮಾರ್ ಝಾ ಪ್ರತಿಕ್ರಿಯೆ ನೀಡಿದ್ದು, ರಾಜಕೀಯ ಕಾರಣಗಳಿಗಾಗಿ ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಇದರಿಂದ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ನಂಬಿಕೆ ಕುಸಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
2004 –2014ರ ಅವಧಿಯಲ್ಲಿ ಈ ಅವ್ಯವಹಾರ ನಡೆದಿದ್ದು, ಪುರಿ ಹಾಗೂ ರಾಂಚಿಯಲ್ಲಿರುವ ಭಾರತೀಯ ರೈಲ್ವೆಯ ಬಿಎನ್‌ಆರ್ ಹೋಟೆಲ್ ಗಳನ್ನು ಮೊದಲು ಐಆರ್‌ಸಿಟಿ ವರ್ಗಾಯಿಸಿ ನಂತರ ಅವುಗಳ ನಿರ್ವಹಣೆಯನ್ನು ಪಟ್ನಾ ಮೂಲದ ಸುಜಾತ ಹೋಟೆಲ್ಸ್ ಪ್ರೈವೆಟ್ ಲಿಮಿಟೆಡ್‌ಗೆ ವಹಿಸಲಾಗಿತ್ತು. ಸುಜಾತ ಹೋಟೆಲ್ ಕಂಪನಿಗೆ ಸಹಾಯ ಮಾಡಲು ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ಸಿಬಿಐ ಆರೋಪಿಸಿತ್ತು