ಬಾಗಲಕೋಟೆ: ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಶಾಸಕರ ಬೆಂಬಲವೂ ಅಷ್ಟೇ ಮುಖ್ಯವಾಗುತ್ತದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಚ್ಚರಿ ಮೂಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಂಡಿಗಣಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಬೆಂಬಲ ಇಲ್ಲದೆ ಯಾರೊಬ್ಬರೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಶಾಸಕರ ಬಹುಮತ ಇದ್ದರೆ ಆಗಬಹುದು. ಜತೆಗೆ ಹೈಕಮಾಂಡ್ ಆಶೀರ್ವಾದವೂ ಮುಖ್ಯವಾಗುತ್ತದೆ ಎಂದರು.
ಸಿಎಂ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ನಿರ್ಧಾರ ಅಂತಿಮ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಆರ್.ಎಸ್.ಎಸ್ ಕಾರ್ಯಕ್ರಮಗಳಿಗೆ ಸರ್ಕಾರದ ಸ್ಥಳಗಳಲ್ಲಿ ಅವಕಾಶ ನೀಡದಿರುವಂತೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ತಮಿಳುನಾಡಿನಲ್ಲಿ ಕ್ರಮ ಕೈಗೊಂಡಿರುವ ಮಾದರಿಯಲ್ಲೇ ರಾಜ್ಯದಲ್ಲೂ ಕ್ರಮಕ್ಕೆ ಅವರು ಪತ್ರ ಬರೆದಿದ್ದಾರೆ. ಆ ರೀತಿ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ ಎಂದು ಉತ್ತರಿಸಿದರು
ಸಂಪುಟ ಪುನಾರಚನೆಗೂ ಡಿನ್ನರ್ ಪಾರ್ಟಿಗೂ ಯಾವುದೇ ಸಂಬಂಧವಿಲ್ಲ. ಆಗಾಗ ಊಟಕ್ಕೆ ಸೇರುತ್ತೇವೆ. ಈ ವಿಷಯದಲ್ಲಿ ಮನಗಂತೂ ಯಾವುದೇ ವಿಶೇಷ ಇಲ್ಲ. ಆದರೆ ಮಾಧ್ಯಮಗಳಿಗೆ ಹಾಗೂ ಬಿಜೆಪಿಯವರಿಗೆ ಮಾತ್ರ ವಿಶೇಷವಾಗಿ ಕಾಣಿಸುತ್ತಿದೆ ಎಂದರು.