ರಾಯಚೂರು: ಹಿಂದುಳಿದ ವರ್ಗಗಳನ್ನು ಮುಂಚೂಣಿಗೆ ತರಲು ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಮಸಮಾಜ ನಿರ್ಮಾಣದ ವಿರೋಧಿಗಳು ವಿರೋಧಿಸುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಜಿಲ್ಲಾ ಕನಕ ನೌಕರ ಸಂಘ ಹಾಗೂ ಕೆಸಿಬಿ ಆ್ಯಂಡ್ ಸನ್ಸ್ ಕೆ. ಅಯ್ಯಣ್ಣ ವಡವಾಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಗಳನ್ನು ಮುಂದೆ ತರಲು ಅಗತ್ಯ ಮಾಹಿತಿಯನ್ನು ಕ್ರೋಢೀಕರಿಸುವ ಅಗತ್ಯವಿದ್ದು ಅದಕ್ಕೆ ಪೂರಕವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ ಬಿಜೆಪಿ ಜಾತಿ ಗಣತಿ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಸುಳ್ಳು ಆರೋಪ ಮಾಡುತ್ತಿದೆ. ಸರ್ಕಾರದ ಯೋಜನೆಗಳು ಎಲ್ಲರಿಗೂ ತಲುಪುವಂತೆ ಮಾಡಲು ಸಮೀಕ್ಷೆ ಸಹಾಯಕವಾಗುತ್ತದೆ ಎಂದರು.
ವೈದ್ಯರು ರೋಗ ಪತ್ತೆಗೆ ಮೊದಲು ಪರೀಕ್ಷೆ ಮಾಡಿದ ನಂತರವೇ ರೋಗ ಯಾವುದು ಎನ್ನುವುದು ತಿಳಿದು ಬರುತ್ತದೆ. ನಂತರ ಚಿಕಿತ್ಸೆ ಸುಲಭವಾಗುತ್ತದೆ. ಹಾಗೆಯೇ ವಿವಿಧ ಸಮುದಾಯಗಳ ಅಗತ್ಯಗಳನ್ನು ಪೂರೈಸಲು ಮತ್ತು ಅಭಿವೃದ್ಧಿ ಪರ ಯೋಜನೆಗಳನ್ನು ರೂಪಿಸಲು ದತ್ತಾಂಶಗಳು ಅಗತ್ಯವಾಗಿರುತ್ತವೆ ಎಂದು ಪ್ರತಿಪಾದಿಸಿದರು.
ಡಾ.ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ಸಮಾಜದ ಎಲ್ಲ ವರ್ಗದವರೂ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಆದರೂ ಜಾತಿ ವ್ಯವಸ್ಥೆ ಇಂದಿಗೂ ನಿಂತಿಲ್ಲ ಎಂದು ವಿಷಾದಿಸಿದರು. ರಾಜಕೀಯ ಮೀಸಲಾತಿ ಸಿಕ್ಕ ನಂತರ ಶೂದ್ರರು ಶಾಸಕಾಂಗದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಆದರೆ ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಗುರುತಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಡಾ.ಅಂಬೇಡ್ಕರ್ ಅವರ ಮೂರು ಮಂತ್ರಗಳಾದ ಶಿಕ್ಷಣ ಸಂಘಟನೆ ಹಾಗೂ ಹೋರಾಟದ ಮೂಲಕ ಈ ಕ್ಷೇತ್ರಗಳನ್ನೂ ತಲುಪಬಹುದಾಗಿದೆ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ವೆಂಕಟೇಶ ಜಾಲಿಬೆಂಚಿ, ಮಟಮಾರಿಯ ಶ್ರೀಜ್ಞಾನಾನಂದ ಸ್ವಾಮೀಜಿ, ಬಿಎಂಟಿಸಿ ಉಪಾಧ್ಯಕ್ಷ ನಿಕೇತರಾಜ್ ಎಂ., ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಮಕೃಷ್ಣ ರೊಳ್ಳೆ, ರಾಜ್ಯ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಎ. ಈರಣ್ಣ, ಕೆಪಿಸಿಸಿ ಸದಸ್ಯೆ ಶ್ರೀದೇವಿ ನಾಯಕ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಬಸವಂತಪ್ಪ ಮೊದಲಾದವರು ಸಮಾರಂಭದಲ್ಲಿ ಭಾಗಿಯಾಗಿದ್ದರು.